ಸಾರಾಂಶ
ನೊಂದವರ ಸೇವೆ ಮಾಡುವುದು ದೇವರ ಸೇವೆಗೆ ಸಮವಾಗಿದ್ದು ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆ ಅವರು ಸಮಾಜದಲ್ಲಿರುವ ಅಶಕ್ತರನ್ನು ಮೇಲೆತ್ತುವ ಸಲುವಾಗಿ ಮಾನವೀಯ ಯೋಜನೆಗಳನ್ನು ಜಾರಿಗೆ ತಂದು ಎಲ್ಲರ ಮನೆ ಮತ್ತು ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ನೊಂದವರ ಸೇವೆ ಮಾಡುವುದು ದೇವರ ಸೇವೆಗೆ ಸಮವಾಗಿದ್ದು ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆ ಅವರು ಸಮಾಜದಲ್ಲಿರುವ ಅಶಕ್ತರನ್ನು ಮೇಲೆತ್ತುವ ಸಲುವಾಗಿ ಮಾನವೀಯ ಯೋಜನೆಗಳನ್ನು ಜಾರಿಗೆ ತಂದು ಎಲ್ಲರ ಮನೆ ಮತ್ತು ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು.ನಗರದ ಸಿಂಗ್ರಿ ನಂಜಪ್ಪ ಕಲ್ಯಾಣ ಮಂಟದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಸೋಮವಾರ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 77ನೇ ಹುಟ್ಟುಹಬ್ಬದ ಪ್ರಯುಕ್ತ ತಾಲೂಕಿನ ಮಾಸಾಶನ ಪಡೆಯುವ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಧರ್ಮಸ್ಥಳ ಶ್ರೀಕ್ಷೇತ್ರವು ಅನ್ನದಾನ, ವಿದ್ಯಾದಾನ, ಔಷಧದಾನ, ಅಭಯದಾನ ಎಂಬ ಚರ್ತುದಾನಗಳಿಗೆ ಪ್ರಸಿದ್ದಿಯಾಗಿದೆ. ಸಮಾಜದಲ್ಲಿರುವ ನಿರ್ಗತಿಕರು, ಕಡು ಬಡವರು, ಅಶಕ್ತರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ನಿಟ್ಟಿನಲ್ಲಿ ಪೂಜ್ಯರು ಸಾಮಾಜಿಕ ಕಳಕಳಿಯುಳ್ಳ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಹತ್ತಾರು ಜನಪರ ರೈತಪರ ಯೋಜನೆಗಳನ್ನು ಜಾರಿಗೆ ತಂದಿರುವ ಹೆಗ್ಗಡೆಯವರಿಗೆ ಶ್ರೀ ಮಂಜುನಾಥ ಸ್ವಾಮಿ ಇನ್ನೂ ಹೆಚ್ಚಿನ ಆರೋಗ್ಯ, ಆಯುಷ್ಯ ಕೊಟ್ಟು ಮತ್ತಷ್ಟು ಸೇವೆ ಮಾಡುವ ಅವಕಾಶ ಕಲ್ಪಿಸಿಕೊಡಲಿ ಎಂದು ಶುಭ ಹಾರೈಸಿದರು.ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ಮಾತನಾಡಿ, ಪೂಜ್ಯರು ಜಾರಿಗೆ ತಂದಿರುವ ಎಲ್ಲಾ ಯೋಜನೆಗಳು ಅರ್ಹರಿಗೆ ತಲುಪುವ ಮೂಲಕ ಗ್ರಾಮಾಭಿವೃದ್ದಿ ಯೋಜನೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಅದರಲ್ಲೂಈ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದರು.ತಾಲೂಕು ಆರೋಗ್ಯಾಧಿಕಾರಿ ಡಾ. ರಾಧಿಕಾ, ತಾಲೂಕು ಯೋಜನಾಧಿಕಾರಿ ಕೆ. ಉದಯ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ತರಕಾರಿ ಗಂಗಾಧರ್, ಮಲ್ಲಿಗಪ್ಪ, ಮಹದೇವಮ್ಮ, ಸಿಂಗ್ರಿ ದತ್ತ ಪ್ರಸಾದ್, ಸುನಂದ ಕಣ್ಣಿನ ಆಸ್ಪತ್ರೆಯ ಆಡಳಿತಾಧಿಕಾರಿ ನವೀನ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಪದ್ಮಾವತಿ ಸೇರಿದಂತೆ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಭಾಗವಹಿಸಿದ್ದರು.