ಬೇಸಿಗೆ ಮುನ್ನವೇ ವಿದ್ಯುತ್‌ ಸ್ಟೇಷನ್‌ಗಳಿಗೆ ಬೀಗ

| Published : Oct 09 2023, 12:45 AM IST

ಸಾರಾಂಶ

ಬೇಸಿಗೆ ಆರಂಭಕ್ಕೂ ಮುನ್ನವೇ ವಿದ್ಯುತ್‌ ಸಮಸ್ಯೆ ಬೀಗಡಾಯಿಸುತ್ತಿದೆ. ಮೂರು ದಿನಗಳಲ್ಲಿ ಸೆಸ್ಕಾಂ ಸಮಸ್ಯೆ ಬಗೆಹರಿಸದಿದ್ದಲ್ಲಿ ತಾಲೂಕಿನ ಎಲ್ಲಾ ವಿದ್ಯುತ್‌ ಸ್ಟೇಷನ್‌ಗಳಿಗೆ ಬೀಗ ಹಾಕಲು ರೈತ ಸಂಘ ನಿರ್ಧರಿಸಿದೆ
ಪರಿಹಾರ ಇಲ್ಲವಾದರೆ ವಿವಿಧ ತಾಲೂಕುಗಳ ವಿದ್ಯುತ್‌ ಘಟಕಗಳಿಗೆ ಬೀಗ ಮುದ್ರೆ ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ಬೇಸಿಗೆ ಆರಂಭಕ್ಕೂ ಮುನ್ನವೇ ವಿದ್ಯುತ್‌ ಸಮಸ್ಯೆ ಬೀಗಡಾಯಿಸುತ್ತಿದೆ. ಮೂರು ದಿನಗಳಲ್ಲಿ ಸೆಸ್ಕಾಂ ಸಮಸ್ಯೆ ಬಗೆಹರಿಸದಿದ್ದಲ್ಲಿ ತಾಲೂಕಿನ ಎಲ್ಲಾ ವಿದ್ಯುತ್‌ ಸ್ಟೇಷನ್‌ಗಳಿಗೆ ಬೀಗ ಹಾಕಲು ರೈತ ಸಂಘ ನಿರ್ಧರಿಸಿದೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ಕಾರ್ಯಕರ್ತರ ಸಭೆಯ ಬಳಿಕ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷರೂ ಆದ ಶಿವಪುರ ಗ್ರಾಪಂ ಅಧ್ಯಕ್ಷ ಮಹದೇವಪ್ಪ ಕನ್ನಡಪ್ರಭದೊಂದಿಗೆ ಮಾತನಾಡಿ, ಮೂರು ದಿನಗಳಲ್ಲಿ ಸೆಸ್ಕಾಂ ವಿದ್ಯುತ್‌ ಸಮಸ್ಯೆಗೆ ಬಗೆಹರಿಸಲಿ ಎಂದರು. ಸೆಸ್ಕಾಂ ಎಂಡಿ ಹಾಗೂ ಸ್ಥಳೀಯ ಶಾಸಕರು ವಿದ್ಯುತ್‌ ಸಮಸ್ಯೆ ನೀಗಲಿದೆ ಎಂದು ಹೇಳಿದ್ದಾರೆ. ಆದರೆ ಮೂರು ದಿನಗಳೊಳಗೆ ಪರಿಹಾರ ಸಿಗದಿದ್ದಲ್ಲಿ ಗುಂಡ್ಲುಪೇಟೆ, ಬೇಗೂರು, ಕಬ್ಬಹಳ್ಳಿ, ಬೊಮ್ಮಲಾಪುರ, ತೆರಕಣಾಂಭಿ ವಿದ್ಯುತ್‌ ಸ್ಟೇಷನ್‌ಗೆ ಬೀಗ ಹಾಕಲು 17 ಮಂದಿ ರೈತ ಸಂಘದ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ ಎಂದರು. ಬಂಡೀಪುರ ಕಾಡಂಚಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚುತ್ತಿದೆ. ಕಾಡು ಪ್ರಾಣಿಗಳ ಹಾವಳಿ ತಡೆಗೆ ಬಂಡೀಪುರ ಅರಣ್ಯ ಇಲಾಖೆ ಜಾಣ ಮೌನ ವಹಿಸಿದೆ. ಕೂಡಲೇ ಕಾಡು ಪ್ರಾಣಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಭೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಹಂಗಳ ದಿಲೀಪ್‌, ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಎಸ್.ಶಾಂತಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಮಾಧು, ರೈತ ಸಂಘದ ಕಾರ್ಯಕರ್ತರು ಇದ್ದರು. ಅನ್ಯಾಯ ಹಾಲು ಉತ್ಪಾದಕರಿಗೆ ರಾಜ್ಯ ಸರ್ಕಾರ ಲೀಟರ್‌ ಹಾಲಿಗೆ 5 ರು.ಪ್ರೋತ್ಸಾಹ ನೀಡುವ ಹಣದಲ್ಲಿ ಹಾಲು ಉತ್ಪಾದಕರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಪ್ರೋತ್ಸಾಹ ಧನ ಪಡೆದ ರೈತರ ಪಟ್ಟಿಯನ್ನು ಹಾಲು ಉತ್ಪಾದಕರ ಸಂಘಗಳು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. 1 ರು. ಕಡಿತಕ್ಕೆ ಖಂಡನೆ ಚಾಮುಲ್‌ ರೈತರ ಹಾಲಿಗೆ ಒಂದು ರು. ಕಡಿತ ಮಾಡಿದೆ. ಇದನ್ನು ರೈತ ಸಂಘ ತೀವ್ರವಾಗಿ ಖಂಡಿಸಲಿದೆ. ಪಶು ಆಹಾರ ಬೆಲೆ ಹೆಚ್ಚಳವಾಗಿದೆ. ಹಾಲಿಗೆ ಒಂದು ರು. ಕಡಿತವಾಗಿದೆ. ಇದು ರೈತ ವಿರೋಧಿ ನೀತಿಯಾಗಿದೆ ಎಂದರು. ರೈತರ ಸಭೆ ಕರೆದಿಲ್ಲ ಕ್ಷೇತ್ರದಲ್ಲಿ ಎಚ್.ಎಂ.ಗಣೇಶ್‌ ಪ್ರಸಾದ್‌ ಶಾಸಕರಾಗಿ ನಾಲ್ಕು ತಿಂಗಳಾದರೂ ರೈತರು ಹಾಗೂ ಅಧಿಕಾರಿಗಳ ಸಭೆ ಕರೆದಿಲ್ಲ. ರೈತರ ಸಮಸ್ಯೆ ಕೇಳಿಲ್ಲ. ಕೂಡಲೇ ಸಭೆ ಕರೆದು ರೈತರ ಸಮಸ್ಯೆ ಆಲಿಸಬೇಕು ಎಂದು ಒತ್ತಾಯಿಸಿದರು. ಗುಂಡ್ಲುಪೇಟೆ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರೂ ಆದ ಶಿವಪುರ ಗ್ರಾ.ಪಂ. ಅಧ್ಯಕ್ಷ ಮಹದೇವಪ್ಪ ಮಾತನಾಡಿದರು.