ಸಾರಾಂಶ
ಹುಬ್ಬಳ್ಳಿ:
ಪೊಲೀಸ್ ಲಾಠಿಯಿಂದ ಶುರುವಾದ ಬೆಳಗಾವಿ ಅಧಿವೇಶನವು ಬಂಧನ, ಪೊಲೀಸ್ ಹಿಂಸೆಯೊಂದಿಗೆ ಮುಕ್ತಾಯವಾದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿವೇಶನದ ಆರಂಭದ ದಿನ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಬೀಸಿದರು. ಸದನದ ಕೊನೆಯ ದಿನ ಪೊಲೀಸರು ತಮ್ಮ ವ್ಯಾಪ್ತಿ ಮೀರಿ ವಿಪ ಸದಸ್ಯ ಸಿ.ಟಿ. ರವಿ ಅವರನ್ನು ಬಂಧಿಸಿ, ಹಿಂಸೆ ನೀಡಿದರು. ರಾತ್ರಿಯೆಲ್ಲ ಸುತ್ತಾಡಿಸಿದರು. ಹೀಗೆ ಪೊಲೀಸ್ ಲಾಠಿಯಿಂದ ಶುರುವಾಗಿದ್ದ ಅಧಿವೇಶನ, ಪೊಲೀಸರ ಹಿಂಸೆಯೊಂದಿಗೆ ಮುಕ್ತಾಯವಾದಂತಾಗಿದೆ ಎಂದರು.
ಒಂದು ರೀತಿ ಪೊಲೀಸ್ ರಾಜ್ಯವಾಗಿದೆ. ಸಿ.ಟಿ. ರವಿ ಅವರ ಜತೆಗೆ ನಡೆದುಕೊಂಡ ರೀತಿ ಪೊಲೀಸ್ ಅಧಿಕಾರಿಗಳ ವರ್ತನೆ, ಪ್ರಚೋದನೆ ಇಲ್ಲದೇ ಲಾಠಿ ಬೀಸಿರುವ ಕುರಿತು ತನಿಖೆಯಾಗಬೇಕು. ಹಿರಿಯ ಅಧಿಕಾರಿಗಳೇ ಕಾನ್ಸ್‌ಟೇಬಲ್ ರೀತಿ ನಡೆದುಕೊಳ್ಳುತ್ತಿದ್ದಾರೆ. ಬಹಳ ದುರ್ದೈವ. ಕರ್ನಾಟಕದ ಪೊಲೀಸರಿಗೆ ದಕ್ಷ ಪೊಲೀಸರು ಎಂಬ ಹೆಸರಿದೆ. ಅದಕ್ಕೆ ಮಸಿ ಬಳಿಯುವ ರೀತಿಯಲ್ಲಿ ಈ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.ಬೆಳಗಾವಿಯಲ್ಲಿ ಕಾಟಾಚಾರದ ಅಧಿವೇಶನ ನಡೆಸಿದ್ದು, ಉತ್ತರ ಕರ್ನಾಟಕ ಈ ಸರ್ಕಾರದ ನಕ್ಷೆಯಲ್ಲಿ ಇದೆಯೋ ಇಲ್ಲವೋ ಎನ್ನುವ ಅನುಮಾನ ಮೂಡಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಪಕ್ಷಾತೀತವಾಗಿ ಚರ್ಚಿಸಿ, ಸರ್ಕಾರದ ಗಮನ ಸೆಳೆದು ಹೋರಾಟ ಮಾಡಲು ಸನ್ನದ್ಧರಾಗಬೇಕು ಎಂದು ಸಲಹೆ ನೀಡಿದರು.
ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಯೋಜನೆಗಳು, ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚೆಯಾಗಿ ಅದಕ್ಕೆ ಪರಿಹಾರ ಸಿಗುತ್ತದೆ ಎಂದು ಜನರು ನಿರೀಕ್ಷೆ ಮಾಡಿದ್ದರು. ಈ ಭಾಗದ ಅಭಿವೃದ್ಧಿ, ಕೃಷ್ಣಾ ಮೇಲ್ದಂಡೆ, ಘಟಪ್ರಭಾ, ಮಲಪ್ರಭಾ, ಮಹದಾಯಿ ಸಮಸ್ಯೆ, ಇಲ್ಲಿಗೆ ಬರಬೇಕಿರುವ ಕೈಗಾರಿಕೆ, ರಸ್ತೆ, ರೈಲು ಮೂಲಸೌಕರ್ಯಗಳ ಕುರಿತು ಚರ್ಚಿಸಲು ಅವಕಾಶ ಕೊಡಲಿಲ್ಲ. ಹಲವಾರು ಶಾಸಕರು ಕಬ್ಬಿನ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದರೂ ಯಾವುದೇ ಸಚಿವರು ಗಂಭೀರವಾಗಿ ಪರಿಗಣಿಸಿ ಉತ್ತರ ಕೊಡಲಿಲ್ಲ. ನಿಜವಾಗಿಯೂ ನಾಚಿಗೇಡಿನ ಸಂಗತಿ. ಸರ್ಕಾರ ಉತ್ತರದ ಜನರ ಕಣ್ಣಿಗೆ ಪದೇ ಪದೇ ಮಣ್ಣೆರಚುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.ಆರ್ಥಿಕ ಸ್ಥಿತಿ ಗಂಭೀರ:
ಈ ಸರ್ಕಾರದ ಹಣಕಾಸಿನ ಸ್ಥಿತಿ ಬಹಳ ಗಂಭೀರವಾಗಿದೆ. ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಹಿಂದಿನ ಸರ್ಕಾರಗಳಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಮುಖ್ಯಮಂತಿಗಳು ಈಗ ಉದ್ಘಾಟನೆ ಮಾಡುತ್ತಿದ್ದಾರೆ ಎಂದರು.ಪ್ರತ್ಯೇಕ ಸಭೆ ಮಾಡಿ:
ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಎಲ್ಲ ಜನಪ್ರತಿನಿಧಿಗಳು ಸೇರಿ ಪಕ್ಷಾತೀತವಾಗಿ ಪ್ರತ್ಯೇಕ ಸಭೆ ಮಾಡಬೇಕು. ಈಗ ಆಗಬೇಕಿರುವ ಯೋಜನೆ, ಸಮಸ್ಯೆ ಕುರಿತು ಚರ್ಚಿಸಿ ಸರ್ಕಾರಕ್ಕೆ ಒಂದು ಆಗ್ರಹ ಪೂರಕವಾಗಿ ಗಮನ ಸೆಳೆದು ಪಕ್ಷಾತೀತವಾಗಿ ಹೋರಾಟ ಮಾಡಲು ಸನ್ನದ್ಧರಾಗಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಪ್ರಜಾಪ್ರಭುತ್ವದ ಅಡಿಯಲ್ಲಿ ಈ ರಾಜ್ಯದ ಕಾನೂನಿನ ಬಗ್ಗೆ ಅಭಿವೃದ್ಧಿಯ ಬಗ್ಗೆ ಚರ್ಚೆಯಾಗಬೇಕಿತ್ತು. ಯಾವುದೂ ಆಗಿಲ್ಲ. ಮುಖ್ಯಮಂತ್ರಿಗಳು ಅನುಭವಿಗಳು ಇದ್ದಾರೆ. ಅವರ ನೇತೃತ್ವದಲ್ಲಿ ಸರಿಯಾಗಿ ನಡೆಸಬೇಕಿತ್ತು. ಹೀಗಾಗಿ ಉತ್ತರ ಕರ್ನಾಟಕದ ಜನರು ಭ್ರಮನಿರಸನಗೊಂಡಿದ್ದಾರೆ. ಪ್ರತಿಪಕ್ಷಗಳ ನಾಯಕರು ಹತ್ತು ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ಹೇಳಿದರು.