ಚಳಿಗಾಲದ ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಡಿ.1ರಿಂದ 21ರವರೆಗೆ ಸುವರ್ಣ ವಿಧಾನಸೌಧದ ಸುತ್ತಲು 3 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೆ ತರಲಾಗಿದೆ ಎಂದು ಪೊಲೀಸ್ ಆಯುಕ್ತ ಭೂಷಣ ಬೋರಸೆ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಚಳಿಗಾಲದ ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಡಿ.1ರಿಂದ 21ರವರೆಗೆ ಸುವರ್ಣ ವಿಧಾನಸೌಧದ ಸುತ್ತಲು 3 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೆ ತರಲಾಗಿದೆ ಎಂದು ಪೊಲೀಸ್ ಆಯುಕ್ತ ಭೂಷಣ ಬೋರಸೆ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, 2025 ನೇ ಸಾಲಿನ ಕರ್ನಾಟಕ ವಿಧಾನಮಂಡಲದ ಚಳಿಗಾಲ ಅಧಿವೇಶನವು ಡಿಸೆಂಬರ್ 8 ರಿಂದ 19 ರವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿದೆ. 2012ರಿಂದ ಇಲ್ಲಿಯವರೆಗೆ ಅಧಿವೇಶನಗಳು ನಡೆಯುತ್ತಿದ್ದು, ಆ ಕಾಲಕ್ಕೆ ವಿವಿಧ ಸಂಘಟನೆಗಳಿಗೆ ಹಾಗೂ ಸಾರ್ವಜನಿಕರಿಗೆ ನಿಗದಿಪಡಿಸಿದ ಪ್ರತಿಭಟನಾ ಸ್ಥಳಗಳಲ್ಲಿ ಸರ್ಕಾರಕ್ಕೆ ತಮ್ಮ ಮನವಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಹಿಂದಿನ ವರ್ಷಗಳಲ್ಲಿ ಸಮರ್ಪಕ ಪೊಲೀಸ್ ಬಂದೋಬಸ್ತ್ ಇದ್ದರೂ ಸಹ ಕೆಲವು ಪ್ರತಿಭಟನೆಗಳು ಹಿಂಸಾತ್ಮಕ ತಿರುವು ಪಡೆದು 2012 ರಿಂದ ಇಲ್ಲಿಯವರೆಗೆ 27 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಘಟನೆಗಳಲ್ಲಿ 73 ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ 21 ಸಾರ್ವಜನಿಕರು ಗಾಯಗೊಂಡಿದ್ದು, ಈ ವೇಳೆ ಒಟ್ಟು ₹6,23,300 ಮೌಲ್ಯದ ಸರ್ಕಾರಿ ಮತ್ತು ಖಾಸಗಿ ಆಸ್ತಿಗಳ ಹಾನಿ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.ಸುವರ್ಣ ವಿಧಾನಸೌಧದ ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿ 48 (ಬೆಂಗಳೂರು-ಪುಣೆ) ಹಾದು ಹೋಗುತ್ತದೆ. ಕಳೆದ ಅಧಿವೇಶನಗಳ ಸಂದರ್ಭದಲ್ಲಿ ಅನೇಕ ಪ್ರತಿಭಟನಾ ಸಂಘಟನೆಗಳಿಂದ ಈ ಹೆದ್ದಾರಿಯನ್ನು ದೀರ್ಘಕಾಲ ತಡೆದು ವಾಹನ ಸಂಚಾರಕ್ಕೆ ತೀವು ಅಡಚಣೆಯಾಗಿವೆ. ಹಿರೆಬಾಗೇವಾಡಿ ಟೋಲ್‌ನಿಂದ ಪಡೆದ ಮಾಹಿತಿಯ ಪ್ರಕಾರ ಪ್ರತಿ ದಿನ ಸರಾಸರಿ 2016,916 ವಾಹನಗಳು (31,730 *Passenger Car Units*) ಈ ಮಾರ್ಗದ ಮೂಲಕ ಬೆಳಗಾವಿ ನಗರವನ್ನು ಹಾದು ಹೋಗುತ್ತವೆ. ಯಾವುದೇ ರೀತಿಯ ಹೆದ್ದಾರಿ ತಡೆಗಟ್ಟುವುದರಿಂದ ಸಂಚಾರ ವಿಳಂಬಕ್ಕೆ ಕಾರಣವಾಗುವುದು ಮಾತ್ರವಲ್ಲದೇ ಸಾರಿಗೆ ಹಾಗೂ ಸರಕು ಸಾಗಾಣಿಕೆ ಚಟುವಟಿಕೆಗಳಿಗೆ ಹೆಚ್ಚಿನ ಆರ್ಥಿಕ ನಷ್ಟವನ್ನುಂಟು ಮಾಡುತ್ತದೆ. ಅಧಿವೇಶನ ಅವಧಿಯಲ್ಲಿ ಯಾವುದೇ ಸಂಘಟನೆ, ಗುಂಪು ಅಥವಾ ವ್ಯಕ್ತಿ ಪ್ರತಿಭಟನೆ ನಡೆಸುವುದು ಅಥವಾ ಮನವಿ ಸಲ್ಲಿಸುವುದು ಬಯಸಿದರೆ, ಅವರು ಬೆಳಗಾವಿ ನಗರದ ಪೊಲೀಸ ಆಯುಕ್ತರ ಕಚೇರಿಯಿಂದ ಮುಂಚಿತವಾಗಿ ಲಿಖಿತ ಅನುಮತಿ ಪಡೆಯುವುದು ಕಡ್ಡಾಯ. ಸುವರ್ಣ ವಿಧಾನಸೌಧ ಕಟ್ಟಡದ ಭದ್ರತೆ ಕಾಪಾಡುವ ಉದ್ದೇಶದಿಂದ ನೀಡಲ್ಪಟ್ಟ ಅನುಮತಿ ಪತ್ರದಲ್ಲಿರುವ ಎಲ್ಲ ಷರತ್ತುಗಳನ್ನು ಆಯೋಜಕರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ.ಪ್ರತಿಭಟನೆ ನಡೆಸಲು ಮೊದಲಿಗೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಲು ಪ್ರತಿಭಟನಾಕಾರರಿಗೆ ವಿನಂತಿಸಲಾಗಿದೆ. ಅದರ ನಂತರ ಪ್ರತಿಭಟನೆಯ ಕುರಿತು ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದು. ಪ್ರತಿಭಟನಾಕಾರರಿಂದ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಆಯೋಜಕರು ಕಾನೂನು ಪ್ರಕಾರ ಜವಾಬ್ದಾರರಾಗಿರುತ್ತಾರೆ. ಬೆಳಗಾವಿ ನಗರ ಪೊಲೀಸ್ ಇಲಾಖೆಯು ಚಳಿಗಾಲದ ಅಧಿವೇಶನವನ್ನು ಶಾಂತಿಯುತ ಹಾಗೂ ಅಹಿತಕರ ಘಟನೆಗಳು ಜರುಗದಂತೆ ಅಧಿವೇಶನ ಯಶಸ್ವಿಗೊಳಿಸಲು ಎಲ್ಲ ನಾಗರೀಕರ ಹಾಗೂ ಸಂಘಟನೆಗಳ ಸಹಕಾರವನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ.