ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರತಿಯೊಬ್ಬ ಕಾರ್ಯಕರ್ತರು ಜೆಡಿಎಸ್‌ಗೆ ಶಕ್ತಿಯಿದ್ದಂತೆ. ಅವರೆಲ್ಲರೂ ತಳಮಟ್ಟದಲ್ಲಿ ಸಕ್ರಿಯರಾಗಬೇಕು. ನಾವು ಕೇವಲ ಸಂಖ್ಯೆಯನ್ನು ತೋರಿಸುವುದಲ್ಲ, ಕುಮಾರಣ್ಣನವರ ಮೇಲಿರುವ ಪ್ರೀತಿ ಹಾಗೂ ಪಕ್ಷದ ಶಕ್ತಿಯನ್ನು ಈ ಕಾರ್ಯಕ್ರಮದ ಮೂಲಕ ಸಾಬೀತುಪಡಿಸಬೇಕಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಸಲಹೆ ನೀಡಿದರು.

ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಜ.೧೪ರಂದು ತಾಲೂಕಿನ ವಿ.ಸಿ.ಫಾರಂನಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಗುದ್ದಲಿಪೂಜೆ ಹಾಗೂ ವಿಶೇಷ ಚೇತನರಿಗೆ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಮಾಡುವ ಸಮಾರಂಭದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿ, ಮುಖಂಡರು-ಕಾರ್ಯಕರ್ತರಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಬದಿಗಿಡಿ. ನಾವೆಲ್ಲರೂ ಒಂದಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮನವಿ ಮಾಡಿದರು.

ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಕಾರ್ಯಕ್ರಮಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಪ್ರತಿ ವಿಧಾನಸಭಾ ಕ್ಷೇತ್ರದಿಂದ ೧೦ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವಂತೆ ಮಾಡಬೇಕಿದೆ. ಮಂಡ್ಯ ಕ್ಷೇತ್ರದಿಂದ ೧೫೦ ಬಸ್ಸುಗಳಲ್ಲಿ ಜನರನ್ನು ಕರೆತರುವಂತೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಸೂಚಿಸಿದ್ದಾರೆ. ಮುಖಂಡ ಬಿ.ಆರ್.ರಾಮಚಂದ್ರ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆ ನಡೆಯುತ್ತಿದೆ. ಜನರನ್ನು ಕಾರ್ಯಕ್ರಮಕ್ಕೆ ಕರೆತರುವ ಜವಾಬ್ದಾರಿಯನ್ನು ಅವರೊಟ್ಟಿಗೆ ಸೇರಿ ಎಲ್ಲರೂ ಮಾಡಬೇಕಿದೆ ಎಂದರು.

ವೇದಿಕೆಯಲ್ಲಿ ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ನಾಗೇಶ್ , ಎಸ್‌ಸಿ/ಎಸ್‌ಟಿ ವಿಭಾಗದ ಜಿಲ್ಲಾಧ್ಯಕ್ಷ ಸಾತನೂರು ಜಯರಾಮ್, ಮಾಹಿತಿ ತಂತ್ರಜ್ಞಾನ ವಿಭಾಗದ ಜಿಲ್ಲಾಧ್ಯಕ್ಷ ನವೀನ್‌ಕುಮಾರ್, ಅಲ್ಪಸಂಖ್ಯಾತರ ವಿಭಾಗದ ಮಹಮದ್, ಮುಖಂಡರಾದ ಲೋಕೇಶ್, ರಾಮಲಿಂಗೇಗೌಡ, ಕಿರಣ್, ಪಾಪಯ್ಯ, ಇಂದ್ರಮ್ಮ , ಜಯಶೀಲ ಹಾಗೂ ಇತರರಿದ್ದರು.ಜಿಲ್ಲೆಯ ಅಭಿವೃದ್ಧಿಯ ಪ್ರತಿಬಿಂಬ: ಬಿ.ಆರ್.ರಾಮಚಂದ್ರ


ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ನಾಯಕ ಬಿ.ಆರ್.ರಾಮಚಂದ್ರ ಮಾತನಾಡಿ, ಮಾ.೧೪ರಂದು ನಡೆಯಲಿರುವ ಕಾರ್ಯಕ್ರಮ ಕೇವಲ ಒಂದು ಸರ್ಕಾರಿ ಸಮಾರಂಭವಲ್ಲ. ಇದು ನಮ್ಮ ಜಿಲ್ಲೆಯ ಅಭಿವೃದ್ಧಿಯ ಪ್ರತಿಬಿಂಬ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ ೧೦ ರಿಂದ ೧೫ ಸಾವಿರ ಜನರನ್ನು ಸೇರಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದರು.

ಪ್ರತಿ ಗ್ರಾಪಂ ಮತ್ತು ಬೂತ್ ಮಟ್ಟದಲ್ಲಿ ನಮ್ಮ ಕಾರ್ಯಕರ್ತರು ಸಕ್ರಿಯರಾಗಬೇಕು. ಜನರನ್ನು ಕಾರ್ಯಕ್ರಮಕ್ಕೆ ಕರೆತರಲು ಅಗತ್ಯವಿರುವ ವಾಹನ ಸೌಕರ್ಯ ಮತ್ತು ಇತರ ವ್ಯವಸ್ಥೆಗಳನ್ನು ಮಾಡುತ್ತೇನೆ. ಕುಮಾರಸ್ವಾಮಿ ಅವರು ಜಿಲ್ಲೆಗೆ ನೀಡುತ್ತಿರುವ ಕೊಡುಗೆಯನ್ನು ಜನರಿಗೆ ತಲುಪಿಸಲು ಇದು ಸೂಕ್ತ ವೇದಿಕೆಯಾಗಿದೆ ಎಂದರು.

ಯುವ ನಾಯಕರಾದ ನಿಖಿಲ್ ಕುಮಾರಸ್ವಾಮಿ ಅವರು ಹಮ್ಮಿಕೊಂಡಿರುವ ‘ಮಿಸ್ ಕಾಲ್ ಅಭಿಯಾನ’ ಮತ್ತು ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಹೆಚ್ಚಿನ ಬೆಂಬಲ ನೀಡಬೇಕಿದೆ. ಮಂಡ್ಯದಲ್ಲಿ ಸದ್ಯ ಕೇವಲ ೭ ಸಾವಿರ ಸದಸ್ಯತ್ವ ನೋಂದಣಿಯಾಗಿದ್ದು, ಪ್ರತಿ ಬೂತ್‌ನಿಂದ ಕನಿಷ್ಠ ೧೦೦ ಜನರಂತೆ ಒಟ್ಟು ೨೫ ಸಾವಿರ ಸದಸ್ಯರ ನೋಂದಾವಣೆ ಆಗಬೇಕು ಎಂದರು.

ನಾನು ಹಣ ಮಾಡಲು ಅಥವಾ ಆಸ್ತಿ ಮಾಡಲು ರಾಜಕೀಯಕ್ಕೆ ಬಂದಿಲ್ಲ. ಕಾರ್ಯಕರ್ತರನ್ನು ಮತ್ತು ಮುಖಂಡರನ್ನು ಬೆಳೆಸುವುದೇ ನನ್ನ ಗುರಿ. ಮುಂದಿನ ಎರಡು ವರ್ಷಗಳ ಕಾಲ ಯಾವುದೇ ಚುನಾವಣೆ ಇರಲಿ, ನಾನು ನಿಮ್ಮ ಸೇವಕನಾಗಿ, ನಿಮ್ಮ ನೋವು-ನಲಿವುಗಳಲ್ಲಿ ಭಾಗಿಯಾಗಲು ಸಿದ್ಧನಿದ್ದೇನೆ. ನನಗಾಗಿ ಮತ್ತು ಪಕ್ಷಕ್ಕಾಗಿ ದಿನದ ೨೪ ಗಂಟೆಯೂ ಶ್ರಮಿಸಲು ನಾನು ಮತ್ತು ನನ್ನ ಕುಟುಂಬ ಸಿದ್ಧವಾಗಿದೆ ಎಂದು ಭರವಸೆ ನೀಡಿದರು.

ನಾನು ಗುತ್ತಿಗೆದಾರರ ಕೆಲಸ ಮಾಡುವುದಿಲ್ಲ ಮತ್ತು ಯಾರಿಗೂ ಅನ್ಯಾಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮಂಡ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ ಎಂದು ದೃಢವಾಗಿ ಹೇಳಿದರು.

ವೇದಿಕೆಯಲ್ಲಿ ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ನಾಗೇಶ್ , ಎಸ್‌ಸಿ/ಎಸ್‌ಟಿ ವಿಭಾಗದ ಜಿಲ್ಲಾಧ್ಯಕ್ಷ ಸಾತನೂರು ಜಯರಾಮ್, ಮಾಹಿತಿ ತಂತ್ರಜ್ಞಾನ ವಿಭಾಗದ ಜಿಲ್ಲಾಧ್ಯಕ್ಷ ನವೀನ್‌ಕುಮಾರ್, ಅಲ್ಪಸಂಖ್ಯಾತರ ವಿಭಾಗದ ಮಹಮದ್, ಮುಖಂಡರಾದ ಲೋಕೇಶ್, ರಾಮಲಿಂಗೇಗೌಡ, ಕಿರಣ್, ಪಾಪಯ್ಯ, ಇಂದ್ರಮ್ಮ , ಜಯಶೀಲ ಹಾಗೂ ಇತರರಿದ್ದರು.