ಸಾರಾಂಶ
ಹಾನಗಲ್ಲ: ತಾಲೂಕಿನಲ್ಲಿ ಈಗಾಗಲೇ ಅಂತಿಮ ಅಧಿಸೂಚನೆಯಾಗಿರುವ ಕಂದಾಯ ಗ್ರಾಮ ಮತ್ತು ಉಪ ಗ್ರಾಮಗಳ ಹಕ್ಕುಪತ್ರಗಳಿಗೆ ಅನುಮೋದನೆ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಕಾಲಮಿತಿ ನಿಗದಿ ಪಡಿಸುವಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಾನಗಲ್ಲ ತಾಲೂಕಿನ ನಾನಾ ಸಾರ್ವಜನಿಕ ಹಾಗೂ ರೈತರ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು.
ಬಗರ್‌ಹುಕುಂ ಸಮಿತಿಗಳಲ್ಲಿ ಈ ಹಿಂದೆ ಮಂಜೂರಾಗಿರುವ ಕೆಲವು ಜಮೀನುಗಳಿಗೆ ಇದುವರೆಗೂ ಹಕ್ಕುಪತ್ರ ನೀಡಿಲ್ಲ. ಈ ಕುರಿತು ಪರಿಶೀಲನೆ ನಡೆಸಿ, ಕ್ರಮ ವಹಿಸಿ ಎಂದರು.ತಹಸೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳ ಕಚೇರಿಯಿಂದ ಸ್ವೀಕರಿಸಲಾದ ಸಾರ್ವಜನಿಕರು ಮತ್ತು ರೈತರ ಅರ್ಜಿಗಳನ್ನು ಕಾಲಮಿತಿಯೊಳಗೆ ಇತ್ಯರ್ಥ ಪಡಿಸಬೇಕು. ಯಾವುದೇ ಹಂತಗಳಲ್ಲಿಯೂ ವಿಳಂಬವಾಗದಂತೆ ಕಾಳಜಿ ವಹಿಸಿ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸ್ಮಶಾನಕ್ಕೆ ಭೂಮಿ ಮಂಜೂರಿ ಮಾಡುವಂತೆ ತಹಸೀಲ್ದಾರ್ ಕಚೇರಿಯಿಂದ ಕಳುಹಿಸಲಾಗಿರುವ ಪ್ರಸ್ತಾವನೆಗಳಿಗೆ ಅನುಮೋದನೆ ನೀಡುವಂತೆ ಶ್ರೀನಿವಾಸ ಮಾನೆ ತಿಳಿಸಿದರು.ತಾಲೂಕಿನ ಪಶು ಆಹಾರಕ್ಕಾಗಿ ಮೇವು ಸಾಂದ್ರಿಕರಣ ಘಟಕ, ಮೇವಿನ ಬ್ಯಾಂಕ್ ಹಾಗೂ ರೈತರ ತರಬೇತಿ ಕೇಂದ್ರ ನಿರ್ಮಾಣಕ್ಕೆ ಹಾವೇರಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ 30 ಎಕರೆ ಜಮೀನು ಮಂಜೂರಿ ಮಾಡಲು ಪ್ರಸ್ತಾವನೆ ತಯಾರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಲಾಗಿದ್ದು, ಸೂಕ್ತ ಕ್ರಮಕ್ಕೆ ಸರ್ಕಾರಕ್ಕೆ ಕಳುಹಿಸುವಂತೆ ಹೇಳಿದರು.ಬಮ್ಮನಹಳ್ಳಿ ಪಿಎಚ್‌ಸಿಗೆ ಶಾಸಕ ಮಾನೆ ಭೇಟಿಹಾನಗಲ್ಲ: ತಾಲೂಕಿನ ಬಮ್ಮನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಶ್ರೀನಿವಾಸ ಮಾನೆ ದಿಢೀರ್ ಭೇಟಿ ನೀಡಿ, ಸೌಲಭ್ಯಗಳ ಪರಿಶೀಲನೆ ನಡೆಸಿದರು.
ಹೊರರೋಗಿ, ಒಳರೋಗಿ ವಿಭಾಗ, ಔಷಧಿ ವಿಭಾಗ ಸೇರಿದಂತೆ ಇತರ ಎಲ್ಲ ವಿಭಾಗಗಳಿಗೂ ಭೇಟಿ ನೀಡಿ ಮಾಹಿತಿ ಪಡೆದರು. ಸಿಬ್ಬಂದಿ ಹಾಜರಾತಿ ರಜಿಸ್ಟರ್ ಸೇರಿದಂತೆ ಇತರ ದಾಖಲೆಗಳನ್ನು ಪರಿಶೀಲಿಸಿದರು. ಸಿಬ್ಬಂದಿ ಇಲಾಖೆಯ ಕಾರ್ಯ ನಿಮಿತ್ತ ಬೇರೆಡೆ ಹೋಗಿದ್ದರೆ ರಜಿಸ್ಟರ್‌ನಲ್ಲಿ ಸ್ಪಷ್ಟವಾಗಿ ನಮೂದಿಸುವಂತೆ ಸಿಬ್ಬಂದಿಗೆ ಶಾಸಕ ಮಾನೆ ಸೂಚಿಸಿದರು.ಕೇಂದ್ರದಲ್ಲಿನ ಸ್ವಚ್ಛತೆ ಕಂಡು ಖುಷಿಯಾದ ಶ್ರೀನಿವಾಸ ಮಾನೆ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು. ಕೇಂದ್ರಕ್ಕೆ ಆಗಮಿಸುವ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಲಭ್ಯವಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಸೇವೆ ನೀಡಲು ಮುಂದಾಗಿ. ಹೊರರೋಗಿಗಳ ವಿಭಾಗದಲ್ಲಿ ಉತ್ತಮ ಚಿಕಿತ್ಸೆ ಲಭಿಸಿದರೆ ಹಾನಗಲ್ಲ ತಾಲೂಕಾಸ್ಪತ್ರೆ ಮೇಲಿನ ಒತ್ತಡ ಕಡಿಮೆಯಾಗಲಿದೆ.24x7 ಮಾದರಿಯಲ್ಲಿ ಕೇಂದ್ರದಲ್ಲಿ ಜನತೆಗೆ ಆರೋಗ್ಯ ಸೇವೆ ಲಭಿಸಬೇಕು. ಈ ನಿಟ್ಟಿನಲ್ಲಿ ಗಮನ ಹರಿಸಿ. ಆರೋಗ್ಯ ರಕ್ಷಾ ಸಮಿತಿ ಸದಸ್ಯರು, ಗ್ರಾಮಸ್ಥರ ಸಹಕಾರ ಪಡೆದು, ಕೇಂದ್ರಕ್ಕೆ ಅಗತ್ಯವಿರುವ ಸಣ್ಣಪುಟ್ಟ ಸೌಲಭ್ಯಗಳನ್ನು ಪಡೆಯಿರಿ. ನಾನೂ ಸರ್ಕಾರದಿಂದ ಅಗತ್ಯ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿದರು.ತಾಪಂ ಕೆಡಿಸಿ ಸದಸ್ಯ ಮಹ್ಮದ್‌ಹನೀಫ್ ಬಂಕಾಪೂರ, ಮುಖಂಡರಾದ ಚನ್ನಬಸಪ್ಪ ಬಿದರಗಡ್ಡಿ, ರಾಜೂ ಬೇಂದ್ರೆ, ನಾಗರಾಜ ಮಲ್ಲಮ್ಮನವರ, ಗಂಗಾಧರ ಕ್ಷೌರದ, ಮಲ್ಲೇಶಣ್ಣ ಕ್ಷೌರದ, ಎಂ.ಎಸ್. ಪಾಟೀಲ, ಚನ್ನವೀರಗೌಡ ಪಾಟೀಲ, ಅರುಣ ಮಲ್ಲಮ್ಮನವರ, ರಸೂಲ್ ವಾಗಿನಕೊಪ್ಪ, ಪತಂಗಸಾಬ ಮಕಾನದಾರ, ಲಕ್ಷ್ಮಿ ಕಲಾಲ ಸೇರಿದಂತೆ ಇತರರು ಉಪಸ್ಥಿತರಿದ್ದರು.