ಶೈಕ್ಷಣಿಕ ಪರಾಮರ್ಶೆಯ ಭಾಗವಾಗಿ, ಅಧ್ಯಕ್ಷರಿಗೆ ಮೂರು ಪ್ರಮುಖ ಸಂಶೋಧನಾ ಪ್ರಕಟಣೆಗಳನ್ನು ಔಪಚಾರಿಕವಾಗಿ ಹಸ್ತಾಂತರಿಸಲಾಯಿತು. ಇದರಲ್ಲಿ ‘ಇಂಟರ್ ನ್ಯಾಷನಲ್ ಕಾನ್ಕ್ಲೇವ್ ಆನ್ ಸಸ್ಟೈನಬಲ್ ಟೆಕ್ನಾಲಜೀಸ್’ ಕೈಪಿಡಿ, ಸಮಗ್ರ ಐ.ಸಿ.ಎಸ್.ಟಿ ಸಂಕಲನ ಮತ್ತು ಬಿ.ಆರ್.ಐ.ಡಿ.ಸಿ ಮೈಸೂರು ಕೇಂದ್ರದ ಇತ್ತೀಚಿನ ತ್ರೈಮಾಸಿಕ ಪ್ರಗತಿ ವರದಿಯು ಒಳಗೊಂಡಿದ್ದವು.
ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್. ಈ.ಸುಧೀಂದ್ರ ಅವರು ನಗರದ ದಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ (ಎನ್ಐಇ) ಸಂಸ್ಥೆಯ ಎನ್.ಐ.ಇ-ಕ್ರೆಸ್ಟ್ ಆವರಣದಲ್ಲಿರುವ ಜೈವಿಕ ಇಂಧನ ಸಂಶೋಧನೆ, ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿದ್ದರು.ಪ್ರಮುಖವಾಗಿ ಶಾಶ್ವತ ತಂತ್ರಜ್ಞಾನದ ಉಪಕ್ರಮಗಳ ಮೌಲ್ಯಮಾಪನ ಮತ್ತು ಜಂಟಿಯಾಗಿ ಆಯೋಜಿಸಿದ್ದ ‘ಅನುಭವ ಪಯಣ’ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು ಈ ಭೇಟಿಯ ಉದ್ದೇಶವಾಗಿತ್ತು.
ಎಸ್. ಈ.ಸುಧೀಂದ್ರ ಅವರು ಬಿ.ಆರ್.ಐ.ಡಿ.ಸಿ ಕೇಂದ್ರದ ಪ್ರಸ್ತುತ ಸಂಶೋಧನಾ ಯೋಜನೆಗಳು ಮತ್ತು ಕಾರ್ಯಾಚರಣೆಯ ಮಾನದಂಡಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಬಿ.ಆರ್.ಐ.ಡಿ.ಸಿ ಮತ್ತು ಎನ್.ಐ.ಇ-ಕ್ರೆಸ್ಟ್ ಮುಖ್ಯಸ್ಥ ಪ್ರೊ. ಶ್ಯಾಮಸುಂದರ್ ಸುಬ್ಬಾರಾವ್ ಮತ್ತು ಎನ್.ಐ.ಇ ಪ್ರಾಂಶುಪಾಲ ಡಾ. ಬಿ. ಎಸ್. ನಾಗೇಂದ್ರ ಪರಾಶರ್ ಉಪಸ್ಥಿತರಿದ್ದರು.ಶೈಕ್ಷಣಿಕ ಪರಾಮರ್ಶೆಯ ಭಾಗವಾಗಿ, ಅಧ್ಯಕ್ಷರಿಗೆ ಮೂರು ಪ್ರಮುಖ ಸಂಶೋಧನಾ ಪ್ರಕಟಣೆಗಳನ್ನು ಔಪಚಾರಿಕವಾಗಿ ಹಸ್ತಾಂತರಿಸಲಾಯಿತು. ಇದರಲ್ಲಿ ‘ಇಂಟರ್ ನ್ಯಾಷನಲ್ ಕಾನ್ಕ್ಲೇವ್ ಆನ್ ಸಸ್ಟೈನಬಲ್ ಟೆಕ್ನಾಲಜೀಸ್’ ಕೈಪಿಡಿ, ಸಮಗ್ರ ಐ.ಸಿ.ಎಸ್.ಟಿ ಸಂಕಲನ ಮತ್ತು ಬಿ.ಆರ್.ಐ.ಡಿ.ಸಿ ಮೈಸೂರು ಕೇಂದ್ರದ ಇತ್ತೀಚಿನ ತ್ರೈಮಾಸಿಕ ಪ್ರಗತಿ ವರದಿಯು ಒಳಗೊಂಡಿದ್ದವು. ಬಿ.ಆರ್.ಐ.ಡಿ.ಸಿ ಸಂಸ್ಥೆಯ ನೂತನ ಆವಿಷ್ಕಾರಗಳನ್ನು ಪ್ರದರ್ಶಿಸಲು ಮತ್ತು ಸಾರ್ವಜನಿಕರಿಗೆ ಹಸಿರು ತಂತ್ರಜ್ಞಾನದ ಅನ್ವಯಗಳ ಬಗ್ಗೆ ಜಾಗೃತಿ ಮೂಡಿಸಲು ಮುಂಬರುವ ಪ್ರದರ್ಶನದಲ್ಲಿ ಪ್ರತ್ಯೇಕ ‘ಜೈವಿಕ ಇಂಧನ ಪೆವಿಲಿಯನ್’ಅನ್ನು ಸ್ಥಾಪಿಸುವಂತೆ ಎಸ್. ಈ. ಸುಧೀಂದ್ರ ಸಲಹೆ ಮಾಡಿದರು.
ಕೇಂದ್ರದ ಪರಿಶೀಲನೆಯ ನಂತರ, ಎಸ್. ಈ. ಸುಧೀಂದ್ರ ಅವರು ಎನ್.ಐ.ಇ ದಕ್ಷಿಣ ಕ್ಯಾಂಪಸ್ನ ಸರ್ ಎಂ. ವಿ. ಸಭಾಂಗಣದಲ್ಲಿ ಎನ್.ಐ.ಇ ಮತ್ತು ಎಸ್.ವಿ.ವೈ.ಎಮ್ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ್ದ ಯುವ ಜನತೆಯ ಪ್ರಗತಿಯ ಕಾರ್ಯಕ್ರಮವಾದ ‘ಅನುಭವ ಪಯಣ’ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಇಂಜಿನಿಯರಿಂಗ್ ಮತ್ತು ಇತರೆ ವಿವಿಧ ವಿಭಾಗಗಳ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ ತಾವು ಭೇಟಿ ನೀಡಿದ್ದ ಅಮೆರಿಕ ಮತ್ತು ಜರ್ಮನಿ ಪ್ರವಾಸಗಳ ಅನುಭವಗಳನ್ನು ಹಂಚಿಕೊಂಡರು. ಜಾಗತಿಕ ಶೈಕ್ಷಣಿಕ ವಿನಿಮಯವನ್ನು ಉತ್ತೇಜಿಸಲು ಮಂಡಳಿಯು ಜರ್ಮನಿಯ ‘ಎಫ್.ಎಚ್. ಡಾರ್ಟ್ಮಂಡ್ ವಿಶ್ವವಿದ್ಯಾಲಯ’ ಸೇರಿದಂತೆ ಹಲವು ಪ್ರಮುಖ ಅಂತಾರಾಷ್ಟ್ರಿಯ ವಿಶ್ವವಿದ್ಯಾಲಯಗಳೊಂದಿಗೆ ಮಹತ್ವದ ತಿಳುವಳಿಕಾ ಒಪ್ಪಂದಗಳಿಗೆ ಸಹಿ ಹಾಕಿದೆ ಎಂದರು.
ಅಲ್ಲದೆ, ಜರ್ಮನಿಯ ಈ ಆಯಕಟ್ಟಿನ ಪ್ರವಾಸವನ್ನು ಯಶಸ್ವಿಗೊಳಿಸುವಲ್ಲಿ ಪ್ರೊ.ಶ್ಯಾಮಸುಂದರ್ ಸುಬ್ಬಾರಾವ್ ಅವರು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು ಎಂಬುದನ್ನು ಅವರು ಉಲ್ಲೇಖಿಸಿದರು. ಮುಂದಿನ ಪೀಳಿಗೆಯನ್ನು ಪ್ರೇರೇಪಿಸಿದ ಅಧ್ಯಕ್ಷರು, ಬಯೋಗ್ಯಾಸ್, ಬಯೋಡೀಸೆಲ್ ಮತ್ತು ತ್ಯಾಜ್ಯದಿಂದ ಇಂಧನ ತಯಾರಿಸುವ ತಂತ್ರಜ್ಞಾನಗಳು ಭವಿಷ್ಯದ ಜಾಗತಿಕ ಹಸಿರು ಶಕ್ತಿಯ ಮೂಲಗಳಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ಬಗ್ಗೆ ಜಾಗೃತಿ ಮೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಈ ಸಂವಾದಾತ್ಮಕ ವೇದಿಕೆಯು ವಿದ್ಯಾರ್ಥಿಗಳಿಗೆ ಕೆ.ಎಸ್.ಬಿ.ಡಿ.ಬಿ ಅಧ್ಯಕ್ಷರೊಂದಿಗೆ ಹಾಗೂ ಉದ್ಯಮ, ಸರ್ಕಾರಿ ಮತ್ತು ಶೈಕ್ಷಣಿಕ ವಲಯದ ಪ್ರಮುಖ ಗಣ್ಯರೊಂದಿಗೆ ನೇರವಾಗಿ ಚರ್ಚಿಸಲು ಉತ್ತಮ ಅವಕಾಶವನ್ನು ಒದಗಿಸಿತು. ಈ ಸಂದರ್ಭದಲ್ಲಿ ತಜ್ಞರ ಸಮಿತಿಯ ಸದಸ್ಯರಾಗಿ ಮಹೇಶ್ ಜಾಂಬರ್ಡಿ (ಚೀಫ್ ಆಪರೇಟಿಂಗ್ ಆಫೀಸರ್, ಎಕ್ಸೆಲ್ಸಾಫ್ಟ್ ಟೆಕ್ನಾಲಜೀಸ್), ಎಸ್. ಪ್ರವೀಣ್ ಕುಮಾರ್ (ಡೆಪ್ಯುಟಿ ಸಿಇಒ ಮತ್ತು ಶಿಕ್ಷಣ ವಿಭಾಗದ ಮುಖ್ಯಸ್ಥರು, ಎಸ್ವಿವೈಎಂ), ಪ್ರೊ. ನೀತಾ ಎಸ್. (ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರು, ಎನ್ಐಇ), ಪ್ರತಿಮಾ (ಶೈಕ್ಷಣಿಕ ನಿರ್ದೇಶಕರು - ಶಿಕ್ಷಣ, ಎಸ್ವಿವೈಎಂ), ಆವಿತ್ ಆನಂದ್ ರಾಜು (ನಿರ್ದೇಶಕರು, ವಿಎಸ್ಪಿ), ಸುಮಾ ಮಹೇಶ್ (ಸ್ವಯಂಸೇವಕರು, ಎಸ್ವಿವೈಎಂ), ಏಮಜಿನಿಯರ್ ಸುರೇಶ್ (ಇಇ, ಕೆಆರ್ಡಿಎಲ್, ಮೈಸೂರು), ಅರುಣ್ ಗಂಗಾಧರ್ ಮತ್ತು ಪ್ರೊ. ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.