ಸಾರಾಂಶ
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಪ್ರತ್ಯೇಕ ಹೈಕೋರ್ಟ್ ಪೀಠವನ್ನು ಸ್ಥಾಪಿಸಬೇಕು - ಉಡುಪಿ ಶಾಸಕ
ಉಡುಪಿ : ರಾಜ್ಯದ ಕರಾವಳಿಯ ಮೂರು ಜಿಲ್ಲೆಗೆ ಉಪಯೋಗವಾಗುವಂತೆ ಉಡುಪಿ ಜಿಲ್ಲೆಯನ್ನು ಕೇಂದ್ರವಾಗಿರಿಸಿಕೊಂಡು ಪ್ರತ್ಯೇಕ ಹೈಕೋರ್ಟ್ ಪೀಠವನ್ನು ಆರಂಭಿಸಬೇಕು ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಪ್ರತ್ಯೇಕ ಹೈಕೋರ್ಟ್ ಪೀಠವನ್ನು ಸ್ಥಾಪಿಸಬೇಕು, ಈಗಾಗಲೇ ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಗುಲ್ಬರ್ಗಾ ಮತ್ತು ಧಾರವಾಡಗಳಲ್ಲಿ ಹೈಕೋರ್ಟ್ ಪೀಠಗಳಿವೆ. ಮಂಗಳೂರು, ಉಡುಪಿ ಮತ್ತು ಕಾರವಾರದ ಜನರು ಹೈಕೋರ್ಟಿನಲ್ಲಿರುವ ತಮ್ಮ ಕೇಸುಗಳಿಗೆ 450 ಕಿ.ಮೀ. ಪ್ರಯಾಣಿಸಿ ಬೆಂಗಳೂರಿಗೆ ಬರಬೇಕಾಗಿದೆ. ಈ ಕಷ್ಟವನ್ನು ತಪ್ಪಿಸಲು ಮತ್ತು ಜಿಲ್ಲೆಯ ಬಾಕಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಲು ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕು ಎಂದವರು ಮಂಗಳವಾರ ವಿಧಾನಸಭಾ ಅಧಿವೇಶನವನ್ನು ಸರ್ಕಾರವನ್ನು ಆಗ್ರಹಿಸಿದರು.
ಕರಾವಳಿಯಲ್ಲಿ ಕೆಲವು ವಿಷಯಗಳಲ್ಲಿ ರಾಜ್ಯದ ಇತರ ಭಾಗಗಳಿಗಿಂತ ಭಿನ್ನವಾಗಿದೆ. ಇಲ್ಲಿ ಮಕ್ಕಳ ಕಟ್ಟು ಮತ್ತು ಅಳಿಯಕಟ್ಟು ಎಂಬ ಪದ್ಧತಿಯೊಂದಿದೆ. ಇದಕ್ಕೆ ಸಂಬಂಧಿಸಿದ ಕೇಸುಗಳ ಹಿನ್ನೆಲೆಯಲ್ಲಿ ಪ್ರತ್ಯೇಕ ಹೈಕೋರ್ಟ್ ಪೀಠದ ಸ್ಥಾಪನೆಯಾದರೆ ಇಲ್ಲಿನ ಜನರಿಗೆ ತ್ವರಿತ ನ್ಯಾಯ ಸಿಗುತ್ತದೆ. ಆದ್ದರಿಂದ ಸರ್ಕಾರ ವಿಶೇಷ ಆಸಕ್ತಿ ವಹಿಸಿ ಉಡುಪಿಯಲ್ಲಿ ಪ್ರತ್ಯೇಕ ಹೈಕೋರ್ಟ್ ಪೀಠದ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಮತ್ತು ಅದಕ್ಕೆ ಅಗತ್ಯ ಜಮೀನನನ್ನು ಕೂಡ ಗುರುತಿ ಮೀಸಲಿಡಬೇಕು ಎಂದವರು ಆಗ್ರಹಿಸಿದರು.