ಅತಿಯಾದ ರಸಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ಕುಂಠಿತಗೊಳ್ಳುತ್ತಿದೆ. ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಅಧಿಕಾರಿಗಳು ಆಂದೋಲನ ನಡೆಸಿ ರೈತರಿಗೆ ಸಾವಯವ ಕೃಷಿಗೆ ಒತ್ತು ನೀಡುವಂತೆ ತಿಳಿವಳಿಕೆ ನೀಡಲು ಮುಂದಾಗಬೇಕು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಕಂದಾಯ ಇಲಾಖೆ ಹಾಗೂ ತಾಪಂ ಕಚೇರಿಗಳಲ್ಲಿ ದೂರು ಕೇಂದ್ರಗಳನ್ನು ಸ್ಥಾಪಿಸಿ ಸಾರ್ವಜನಿಕ ಸಮಸ್ಯೆಗಳನ್ನು ತಕ್ಷಣದಲ್ಲಿಯೇ ಬಗೆಹರಿಸಬೇಕೆಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ತಾಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದೂರು ಕೇಂದ್ರದ ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರ ಪಡಿಸಬೇಕು. ಸಾರ್ವಜನಿಕರು ಯಾರೇ ದೂರವಾಣಿ ಮೂಲಕ ಸಮಸ್ಯೆ ಹೇಳಿಕೊಂಡರೇ ತಹಸೀಲ್ದಾರ್ ಲೊಕೇಶ್ ಹಾಗೂ ತಾಪಂ ಇಒ ಶ್ರೀನಿವಾಸ್ ಸ್ಪಂದಿಸಬೇಕು ಎಂದರು.
ಮೈಕ್ರೋ ಫೈನಾನ್ಸ್ ಹಾವಳಿ ಗ್ರಾಮೀಣ ಪ್ರದೇಶದಲ್ಲಿ ಮಿತಿ ಮೀರಿದ್ದು, ನೂರಾರು ಮಹಿಳೆಯರು ಶೋಷಣೆಗೆ ಒಳಗಾಗುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಮೈಕ್ರೋ ಫೈನಾನ್ಸ್ ಕಂಪನಿಗಳು ತಾಲೂಕಿನಲ್ಲಿ ನಡೆಸಿರುವ ವಾಹಿವಾಟು ಬಗ್ಗೆ ಮಾಹಿತಿ ನೀಡಿದರೇ ಸದನದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ತಡೆತಟ್ಟಲು ಚರ್ಚೆ ನಡೆಸಲಾಗುವುದು. ಮಹಿಳಾ ಚಟುವಟಿಕೆಗಳು, ಸ್ತ್ರೀ ಶಕ್ತಿ ಸಂಘ ಸೇರಿದಂತೆ ಮಹಿಳಾ ಸಬಲೀಕರಣ ಇಲಾಖೆಗಳು ಒತ್ತು ನೀಡಬೇಕೆಂದು ಹೇಳಿದರು.ಅತಿಯಾದ ರಸಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ಕುಂಠಿತಗೊಳ್ಳುತ್ತಿದೆ. ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಅಧಿಕಾರಿಗಳು ಆಂದೋಲನ ನಡೆಸಿ ರೈತರಿಗೆ ಸಾವಯವ ಕೃಷಿಗೆ ಒತ್ತು ನೀಡುವಂತೆ ತಿಳಿವಳಿಕೆ ನೀಡಲು ಮುಂದಾಗಬೇಕು. ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಹೆಚ್ಚುತ್ತಿರುವ ಪೋರೈಡ್ ಅಂಶ ತಡೆಗಟ್ಟಲು ಸಹಕಾರ ನೀಡಬೇಕೆಂದರು.
ಸೊಲಬ ಮತ್ತು ಬಸವನ ಬೆಟ್ಟದ ಕಾಡಿನಂಚಿನ ಗ್ರಾಮಗಳ ಜಮೀನು ವಿವಾದವನ್ನು ಬಗೆಹರಿಸಲು ಅಧಿಕಾರಿಗಳು ಮುಂದಾಗಬೇಕು. ಸಮಗ್ರ ಮಾಹಿತಿಯನ್ನು ಮೇಲ್ಟಟ್ಟದ ಅಧಿಕಾರಿಗಳಿಗೆ ಕೊಟ್ಟರೆ ಶಿಫಾರಸ್ಸು ಮಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.ಅಕ್ರಮ ಖಾತೆ ಮಾಡಿಸಿಕೊಂಡು ಸರ್ಕಾರದ ಭೂಮಿಯನ್ನು ಪರಭಾರೆ ಮಾಡಿಕೊಂಡವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಕಂದಾಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ಅಕ್ರಮ ಭೂ ಪ್ರಕರಣದಲ್ಲಿ ಭಾಗಿಯಾದವರ ಹೆಸರನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದರು.
ಹಳ್ಳಿಯ ಜನರು ರೋಗದಿಂದ ಬಳಲುತ್ತಿದ್ದರೂ ಕೂಡ ಅರಿವು ಇಲ್ಲದೇ ಬದುಕುತ್ತಿರುತ್ತಾರೆ. ಹೋಬಳಿ ಮಟ್ಟದಲ್ಲಿ ಆರೋಗ್ಯ ಶಿಬಿರ ನಡೆಸಿದರೆ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಆರೋಗ್ಯ ಶಿಬಿರಕ್ಕೆ ಹಲವು ಮೆಡಿಕಲ್ ಕಾಲೇಜುಗಳು ಸಹಾಯ ನೀಡುವುದರಿಂದ ತಾಲೂಕು ಆರೋಗ್ಯ ಇಲಾಖೆಯಿಂದ ಆರೋಗ್ಯ ಶಿಬಿರ ನಡೆಸಬೇಕೆಂದು ತಾಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ ಅವರಿಗೆ ಸೂಚನೆ ನೀಡಿದರು.ಅರಣ್ಯ ಬೇಸಾಯದಿಂದ ಹೆಚ್ಚು ಲಾಭ ಪಡೆಯಬಹುದು ಎಂಬುದರ ಬಗ್ಗೆ ರೈತರಿಗೆ ಅಧಿಕಾರಿಗಳು ತಿಳಿವಳಿಕೆ ನೀಡಬೇಕು. ನಿರುದ್ಯೋಗಿ ಯುವಕರಿಗೆ ಕೃಷಿಯಿಂದಲೇ ಉದ್ಯೋಗ ನೀಡಲು ಸಾಧ್ಯವಾಗಿದ್ದು, ಯುವಕರು ಸ್ವಾವಲಂಬಿ ಜೀವನ ನಡೆಸಲು ಕೃಷಿಯ ಜೊತೆಗೆ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡುವ ಬಗ್ಗೆ ಅರಿವು ಮೂಡಿಸುವಂತೆ ಸಲಹೆ ನೀಡಿದರು.
ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿಗೆ ರಾಷ್ಟ್ರಪತಿಗಳು ಮಳವಳ್ಳಿಗೆ ಆಗಮಿಸುತ್ತಿರುವುದು ಹೆಮ್ಮೆಯ ವಿಷಯ. ಕಾರ್ಯಕ್ರಮದ ವೇಳೆ ಚೆಸ್ಕಾಂ ಅಧಿಕಾರಿಗಳು ಯಾವುದೇ ವಿದ್ಯುತ್ ಸಮಸ್ಯೆ ಭಾರದಂತೆ ಎಚ್ಚರ ವಹಿಸಬೇಕು, ಪುರಸಭೆಯಿಂದ ರಸ್ತೆ ದೀಪ ಸರಿಪಡಿಸಬೇಕು. ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದರು.ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸರ್ಕಾರದಿಂದ ಸಿಗು ಸೌಲಭ್ಯಗಳ ಬಗ್ಗೆ ಕಚೇರಿ ಮುಂದಿನ ನೋಟಿಸ್ ಬೊರ್ಡ್‌ಗಳಲ್ಲಿ ಪ್ರಕಟಿಸಬೇಕು. ಸಾರ್ವಜನಿಕರಿಗೆ ಇಲಾಖೆಯಿಂದ ಬೇಕಾದ ಮಾಹಿತಿಯನ್ನು ಬೊರ್ಡ್‌ಗಳಲ್ಲಿ ಪ್ರತಿ ನಿತ್ಯ ನೀಡಬೇಕು. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮಗಳಲ್ಲಿಯೂ ಹಬ್ಬಗಳು ಪ್ರಾರಂಭವಾಗುವುದರಿಂದ ಪೊಲೀಸ್ ಬಂದೋಬಸ್ತ್ ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.
ಸರ್ಕಾರಿ ಇಲಾಖೆಗಳಲ್ಲಿನ ಸೌಲಭ್ಯ ಕೊರತೆ ಬಗ್ಗೆ ಮಾಹಿತಿ ನೀಡಿದರೇ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ, ಸರ್ಕಾರದಿಂದ ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರ ಅಭಿವೃದ್ಧಿಪಡಿಸಲಾಗುತ್ತಿದೆ. ಸರ್ಕಾರದ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಲು ತಾಲೂಕು ಮಟ್ಟದ ಅಧಿಕಾರಿಗಳು ಸಹಕಾರ ಮುಖ್ಯ ಎಂದು ವಿವರಿಸಿದರು.ಕಾಲುವೆಗಳ ದುರಸ್ಥಿ ಕಾರ್ಯ ನಡೆಯುವುದರಿಂದ ಯಾವ ಭಾಗಕ್ಕೆ ನೀರು ಕೊಡುವುದಿಲ್ಲ ಎಂಬುವುದರ ಬಗ್ಗೆ ರೈತರು ವ್ಯವಸಾಯ ಮುಂಚಿತವಾಗಿ ಜಿಲ್ಲಾಧಿಕಾರಿಗಳ ಮೂಲಕ ಪ್ರಕಟಣೆ ಹೊರಡಿಸಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮುಂದಾಗಬೇಕು ಎಂದರು.
ಸಿಎಸ್‌ಆರ್ ಅನುದಾನದಡಿ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ಆ ಕಂಪನಿಗಳು ಜಿಲ್ಲಾಡಳಿತದೊಂದಿಗೆ ಒಪ್ಪಂದ ಮಾಡಿಕೊಂಡು ಕೆಲಸ ಮಾಡುವಂತೆ ನೋಡಿಕೊಳ್ಳಬೇಕು ಎಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುವಂತೆ ಶ್ರಮಿಸಬೇಕೆಂದು ಬಿಇಒ ಅವರಿಗೆ ತಿಳಿಸಿದರು.ತಾಲೂಕು ಮಟ್ಟದ ಅಧಿಕಾರಿಗಳು ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನ ಬಳಕೆ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ತಹಸೀಲ್ದಾರ್ ಲೊಕೇಶ್, ತಾಪಂ ಇಒ ಶ್ರೀನಿವಾಸ್, ಡಿವೈಎಸ್‌ಪಿ ಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಅಧ್ಯಕ್ಷ ಮಾದೇಶ್ ಇದ್ದರು.