ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿರುವ ೩೮ ಕೆರೆಗಳಿಗೂ ಆಯಾ ಕೆರೆಗಳ ಗ್ರಾಮ ಹಾಗೂ ಸುತ್ತಮುತ್ತಲ ರೈತರ ಮುಖಂಡರನೊಳಗೊಂಡ ಕೆರೆ ಅಭಿವೃದ್ಧಿ ಸಮಿತಿ ಮಾಡಿಕೊಂಡು ಹೊಲ-ತೋಟಗಳಿಗೆ ಅಗತ್ಯ ಮಣ್ಣನ್ನು ಹೊಡೆದುಕೊಳ್ಳಲು ನಿಮ್ಮಲ್ಲೇ ತೀರ್ಮಾನ ಮಾಡಿಕೊಳ್ಳಿ. ಕಾನೂನು ರೀತಿ ಮಾನದಂಡಗಳನ್ನು ಇಟ್ಟುಕೊಂಡು ಮಣ್ಣನ್ನು ತೆಗೆಯಿರಿ.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಕೆರೆಗಳಿಂದ ತಮ್ಮ ಹೊಲ-ತೋಟಗಳಿಗೆ ಮಣ್ಣು ಹೊಡೆದುಕೊಳ್ಳುವ ರೈತರು, ಗ್ರಾಮಸ್ಥರು, ಜೆಸಿಬಿ, ಟ್ರಾಕ್ಟರ್ ಮಾಲೀಕರು ಸೇರಿ ಕೆರೆ ಅಭಿವೃದ್ಧಿ ಸಮಿತಿ ರಚಿಸಿಕೊಳ್ಳಿ. ಆ ಮೂಲಕ ಎಷ್ಟು ಮಣ್ಣು ತೆಗೆಯಬೇಕು ಎಂಬುದನ್ನು ಸಮಿತಿ ಮತ್ತು ಇಲಾಖೆ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ತೀರ್ಮಾನ ಮಾಡಿ ಎಂದು ಶಾಸಕ ಸಿ.ಬಿ. ಸುರೇಶ್‌ಬಾಬು ಸಲಹೆ ಮಾಡಿದ್ದಾರೆ.

ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಗುರುವಾರ ತಾಲೂಕಿನ ಕೆರೆಗಳಲ್ಲಿ ಮಣ್ಣು ಮತ್ತು ಮರಳು ತೆಗೆಯುತ್ತಿರುವ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿರುವ ೩೮ ಕೆರೆಗಳಿಗೂ ಆಯಾ ಕೆರೆಗಳ ಗ್ರಾಮ ಹಾಗೂ ಸುತ್ತಮುತ್ತಲ ರೈತರ ಮುಖಂಡರನೊಳಗೊಂಡ ಕೆರೆ ಅಭಿವೃದ್ಧಿ ಸಮಿತಿ ಮಾಡಿಕೊಂಡು ಹೊಲ-ತೋಟಗಳಿಗೆ ಅಗತ್ಯ ಮಣ್ಣನ್ನು ಹೊಡೆದುಕೊಳ್ಳಲು ನಿಮ್ಮಲ್ಲೇ ತೀರ್ಮಾನ ಮಾಡಿಕೊಳ್ಳಿ. ಕಾನೂನು ರೀತಿ ಮಾನದಂಡಗಳನ್ನು ಇಟ್ಟುಕೊಂಡು ಮಣ್ಣನ್ನು ತೆಗೆಯಿರಿ. ಇದಕ್ಕೆ ಸಂಬಂಧ ಪಟ್ಟಂತೆ ಅಧಿಕಾರಿಗಳು ರೈತರಿಗೆ ಅನುಕೂಲ ಮಾಡಿಕೊಡಿ ಎಂದು ತಿಳಿಸಿದರು. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಪ್ರತಿ ಕರೆ ಸಮಿತಿಯನ್ನು ಮಾಡುವ ಮೂಲಕ ಈ ಮಣ್ಣಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಸೂಚಿಸಿದರು.

ತಹಸೀಲ್ದಾರ್ ಮಮತಾ ಎಂ. ಮಾತನಾಡಿ, ಕೆರೆ ಮಣ್ಣನ್ನು ಸಂಬಂಧಪಟ್ಟ ಇಲಾಖೆ ತಿಳಿಸಿದಂತೆ ತೆಗೆಯಲು ರೈತರಿಗೆ ಅವಕಾಶವಿದೆ. ಅದು ಸಹ ನಿಮ್ಮ ಸಮಿತಿಯಲ್ಲಿ ತೀರ್ಮಾನವಾಗಬೇಕು. ಗೋಮಾಳ, ಖರಾಬು ಜಾಗದಲ್ಲಿ ಯಾವುದೇ ಕಾರಣಕ್ಕು ಮಣ್ಣನ್ನು ತೆಗೆಯಲು ಅವಕಾಶವಿಲ್ಲ. ಕೇವಲ ಮೂರು ಅಡಿಗಳಷ್ಟು ಮಾತ್ರ ಮಣ್ಣು ತೆಗೆಯಬೇಕು. ಅದಕ್ಕಿಂತ ಕೆಳಗೆ ಮಣ್ಣು ತೆಗೆಯುವುದಾಗಲಿ ಅಥವಾ ಮರಳು ತೆಗೆಯುವುದಾಗಲಿ ಮಾಡಿದರೆ ಕಾನೂನು ರೀತಿ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಭೂ ವಿಜ್ಞಾನಿ ರೇಷ್ಮಾಭಾನು ಮಾತನಾಡಿ, ವಾಣಿಜ್ಯ ಉದ್ದೇಶಗಳಿಗೆ ಮಣ್ಣನ್ನು ಹೊಡೆದುಕೊಳ್ಳಲು ಇಲಾಖೆ ಹಾಗೂ ಸ್ಥಳೀಯ ಆಡಳಿತದ ಅನುಮತಿ ಪಡೆಯಬೇಕು. ಮಣ್ಣಿನ ಅಗತ್ಯತೆಗೆ ತಕ್ಕಂತೆ ರಾಯಧನ ಪಾವತಿಸಬೇಕಾಗುತ್ತದೆ. ಅದರಲ್ಲೂ ವೈಜ್ಞಾನಿಕ ರೀತಿ ಮೇಲ್ಪದರದ ಮಣ್ಣನ್ನು ಮಾತ್ರ ಸೂಕ್ತ ಆಳತೆಯಲ್ಲಿ ನೀಡಲಾಗುವುದು ಎಂದು ತಿಳಿಸಿದರು.

ವಕೀಲ ಶ್ರೀಧರ್ ಮಾತನಾಡಿ ಎಲ್ಲಾ ಭಾಗದ ಕೆರೆಗಳ ಮಣ್ಣು ಒಂದೇ ರೀತಿಯಲ್ಲಿರುವುದಿಲ್ಲ. ಅದ್ದರಿಂದ ಆಯಾ ಕೆರೆಯಲ್ಲಿನ ಯಾವ ಮಣ್ಣು ರೈತರಿಗೆ ಅನುಕೂಲ, ಎಷ್ಟು ತೆಗೆಯಬೇಕು ಎಂಬುದರ ಬಗ್ಗೆ ಸರಿಯಾದ ರೀತಿಯಲ್ಲಿ ಇಲಾಖೆ ಅಧಿಕಾರಿಗಳು ತಿಳಿಸಬೆಕು. ಅದರಂತೆ ರೈತರು ಅಗತ್ಯಕ್ಕೆ ತಕ್ಕಂತೆ ತಮ್ಮ ಜಮೀನುಗಳಿಗೆ ಮಾತ್ರ ಮಣ್ಣನ್ನು ಹಾಕಿಕೊಳ್ಳಬೇಕು ಎಂದು ಹೇಳಿದರು.

ತಿಮ್ಮನಹಳ್ಳಿಯ ಜೆಸಿಬಿ ಮಾಲೀಕ ಶ್ರೀಹರ್ಷ, ನಮ್ಮ ಜಮೀನಿನ ಮಣ್ಣನ್ನು ನಾವೆ ಬೇರೆ ಜಮೀನಿಗೆ ಹೊಡೆದುಕೊಳ್ಳಲು ಅನುಮತಿ ಬೇಕಾಗಿದೆ ಎಂದು ಪ್ರಶ್ನೆಮಾಡಿದರು. ಇದಕ್ಕೆ ಉತ್ತರಿಸಿದ ಗಣಿ ಇಲಾಖೆ ಅಧಿಕಾರಿಗಳು ನಿಮ್ಮ ಭೂಮಿಯಲ್ಲಿನ ಮಣ್ಣನ್ನು ಅಲ್ಲೇ ತೆಗೆದು ನೀವೆ ಬಳಸಿಕೊಳ್ಳಬಹುದು. ಅದರೆ ಬೇರೆಕಡೆ ಸಾಗಿಸಿದರೆ ಅದಕ್ಕೆ ಇಲಾಖೆಗೆ ಹಣ ಸಂದಾಯ ಮಾಡಬೇಕು, ಅನುಮತಿ ಪಡೆಯಬೇಕು ಎಂದು ತಿಳಿಸಿದರು.

ಜೆಸಿಬಿ ಮಾಲೀಕ ರಮೇಶ್ ಮಾತನಾಡಿ, ಸುಮಾರು ೧೫೦ ರಿಂದ ೨೦೦ ಜೆಸಿಬಿ ಮಾಲೀಕರು ಇದ್ದು ರೈತರು ತಮ್ಮ ಕೆಲಸಗಳಿಗೆ ಮಣ್ಣನ್ನು ಹೊಡೆಸಿಕೊಳ್ಳುತ್ತಾರೆ. ಇದರಲ್ಲಿ ನಾವು ಯಾವುದೇ ವಾಣಿಜ್ಯ ಉದ್ದೇಶಗಳಿಗೆ ಮಣ್ಣನ್ನು ತೆಗೆಯುವುದಿಲ್ಲ. ಅದ್ದರಿಂದ ನಮ್ಮ ಮೇಲೆ ಅನಗತ್ಯ ಪ್ರಕರಣಗಳನ್ನು ಹಾಕದೇ ಸ್ಥಳದಲ್ಲಿನ ವಾಸ್ತವತೆ ತಿಳಿದು ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಜೆಸಿಬಿ, ಟ್ರಾಕ್ಟರ್‌ಗಳಿಗೆ ವಿಮೆ, ಪರವಾನಗಿ, ಚಾಲಕರ ಪರವಾನಗಿ ಸಂಬಂಧಪಟ್ಟ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳುವಂತೆ ಪೊಲೀಸ್

ಸಬ್ ಇನ್‌ಸ್ಪೆಕ್ಟರ್ ಹೇಮಂತ್ ತಿಳಿಸಿದರು. ಕೃಷಿಗೆ, ತೋಟಗಳಿಗೆ ಯಾವ ರೀತಿಯಲ್ಲಿ ಎಷ್ಟು ಮಣ್ಣನ್ನು ನೀಡಬೇಕು ಎಂತಹ ಮಣ್ಣನ್ನು ನೀಡಬೇಕು ಎಂಬುದನ್ನು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವರಾಜಕುಮಾರ್, ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಪ್ಪ ತಿಳಿಸಿದರು.

ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಚಿತ್ತಪ್ಪ, ರೈತ ಮುಖಂಡರಾದ ರಾಮಚಂದ್ರಯ್ಯ, ರಮೇಶ್, ಮದು, ಷಡಾಕ್ಷರಿ, ನಾಗೇಶ ಸೇರಿ ಮತ್ತಿತರರು ಇದ್ದರು.