ಸಾರಾಂಶ
ರಾಜ್ಯದಲ್ಲಿ ನಡೆದಿರುವ ಬಹುತೇಕ ರೈಲ್ವೆ ಕಾಮಗಾರಿಗಳು ಮುಗಿಯುವ ಹಂತದಲ್ಲಿವೆ. 39 ಸಾವಿರ ಕೋಟಿ ವೆಚ್ಚದಲ್ಲಿ 11 ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಆಸಕ್ತಿ ತೋರಿದ್ದು ರಾಜ್ಯ ಸರ್ಕಾರದ ನಿರಾಸಕ್ತಿಯಿಂದಾಗಿ ಕಾಮಗಾರಿಗೆ ಹಿನ್ನಡೆ ಆಗಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು.
ಕನ್ನಡಪ್ರಭ ವಾರ್ತೆ ಕುಣಿಗಲ್ ರಾಜ್ಯದಲ್ಲಿ ನಡೆದಿರುವ ಬಹುತೇಕ ರೈಲ್ವೆ ಕಾಮಗಾರಿಗಳು ಮುಗಿಯುವ ಹಂತದಲ್ಲಿವೆ. 39 ಸಾವಿರ ಕೋಟಿ ವೆಚ್ಚದಲ್ಲಿ 11 ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಆಸಕ್ತಿ ತೋರಿದ್ದು ರಾಜ್ಯ ಸರ್ಕಾರದ ನಿರಾಸಕ್ತಿಯಿಂದಾಗಿ ಕಾಮಗಾರಿಗೆ ಹಿನ್ನಡೆ ಆಗಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು. ಮೈಸೂರಿಗೆ ತೆರಳುವ ಮಾರ್ಗ ಮಧ್ಯೆ ಕುಣಿಗಲ್ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯದ ಮಂಗಳೂರು ಬಂದರಿಗೆ ಸಂಪರ್ಕ ಕಲ್ಪಿಸುವ ಹಿನ್ನೆಲೆಯಲ್ಲಿ ಬೆಂಗಳೂರು-ಹಾಸನ-ಮಂಗಳೂರು ರೈಲ್ವೆ ಮಾರ್ಗ ಉನ್ನತೀಕರಣ ಮಾಡಲು ತಯಾರಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜ್ಯದಲ್ಲಿ ಸಂಚಾರ ಸರಕು ಸಾಗಣೆಗೆ ರೈಲುಗಳನ್ನು ನೀಡಲಾಗುವುದು. ಜೊತೆಗೆ ಬೆಂಗಳೂರಿಗೆ ಮೋನೋರೈಲ್ ಆರಂಭಿಸಲಾಗುವುದು ಎಂದರು.
ಬೆಂಗಳೂರು, ಹಾರೋಹಳ್ಳಿ , ಸಾತನೂರು, ಹಲಗೂರು ಮುಖಾಂತರ ಚಾಮರಾಜನಗರಕ್ಕೆ ರೈಲು ಮಾರ್ಗವನ್ನು ಪ್ರಾರಂಭಿಸಲು ಚಿಂತನೆ ಇದೆ. ರಾಜ್ಯ ಸರ್ಕಾರ ಅನುಮೋದನೆ ನೀಡಿಲ್ಲ. ಮೊದಲು 50% ಸಮಪಾಲು ನೀಡಬೇಕಾಗಿದೆ. ನರೇಂದ್ರ ಮೋದಿ ಸರ್ಕಾರ ಹಣವನ್ನು ಸಂಪೂರ್ಣ ಬರಿಸುತ್ತಿದ್ದು ಅದಕ್ಕೆ ಬೇಕಾದ ತಾಂತ್ರಿಕ ಜವಾಬ್ದಾರಿಗಳನ್ನು ಸಹ ನೀಡಿದೆ. ಆದರೂ ಸಹ ರಾಜ್ಯ ಸರ್ಕಾರ ನಿರಾಸಕ್ತಿ ತೋರಿದೆ ಎಂದು ಬೇಸರ ವ್ಯಕ್ತಪಡಿಸಿದರು. ತುಮಕೂರು ರಾಯದುರ್ಗ ಕಾಮಗಾರಿ 90 ಪರ್ಸೆಂಟ್ ಮುಗಿದಿದೆ. ರಾಜ್ಯದ ಪ್ರವಾಸಿ ತಾಣಗಳಾದ ಹಾಸನದ ಶ್ರವಣಬೆಳಗೊಳ-ಕಾಚಿಗುಡ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ರೈಲು ಸಂಪರ್ಕ ಆರಂಭಿಸುವ ಚಿಂತನೆ ಇದೆ. ನರೇಂದ್ರ ಮೋದಿ ಅವರು ಬಡವರ ಪರವಾಗಿ ನಿರಂತರ ಕೆಲಸ ಮಾಡುತ್ತಿದ್ದಾರೆ ಎಲ್ಲಾ ರಾಜ್ಯಗಳನ್ನು ಅಭಿವೃದ್ಧಿ ದೃಷ್ಟಿಯಿಂದ ನೋಡುತ್ತಿದ್ದು ಯಾರನ್ನು ಭೇದಭಾವ ಮಾಡುತ್ತಿಲ್ಲ ಎಂದರು.