ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದೇಶದಲ್ಲಿ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ನೀಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಆಯುಷ್ಮಾನ್ ಯೋಜನೆಗೆ ಕರ್ನಾಟಕ ಸರ್ಕಾರವು ತನ್ನ ಪಾಲು ನೀಡದ ಕಾರಣ ಯೋಜನೆ ಅನುಷ್ಠಾನ ಪ್ರಕ್ರಿಯೆ ಸ್ಥಗಿತಗೊಂಡಿರುವ ಬಗ್ಗೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ಪ್ರಸ್ತಾಪಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಈ ಬಗ್ಗೆ ನಿಯಮ 377ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಕರ್ನಾಟಕದಲ್ಲಿರುವ ಹಿರಿಯ ನಾಗರಿಕರಿಗೆ ಈ ಯೋಜನೆಯ ಫಲಾನುಭವ ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಯೋಜನೆಗೆ ರಾಜ್ಯ ಸರ್ಕಾರ ತನ್ನ ಪಾಲಿನ ಶೇ.40ರಷ್ಟು ಪಾಲನ್ನು ನೀಡುವುದಕ್ಕೆ ನಿರಾಕರಿಸಿದೆ. ರಾಜ್ಯ ಸರ್ಕಾರದ ನಿರ್ಧಾರದಿಂದ ಈ ಯೋಜನೆಯನ್ನು ಅವಲಂಬಿಸಿಕೊಂಡಿರುವ ಲಕ್ಷಾಂತರ ಹಿರಿಯ ನಾಗರಿಕರಿಗೆ ಅಗತ್ಯ ಜೀವ ರಕ್ಷಕ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಈ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಕಳಕಳ ವ್ಯಕ್ತಪಡಿಸಿದರು.ಮಂಗಳೂರು ಭಾಗದಲ್ಲಿ 70 ವರ್ಷ ದಾಟಿರುವ ಸುಮಾರು 80 ಸಾವಿರ ಹಿರಿಯ ನಾಗರಿಕರಿದ್ದಾರೆ. ಆದರೆ, ಕರ್ನಾಟಕ ಸರ್ಕಾರದ ತೀರ್ಮಾನದಿಂದಾಗಿ ಈ ಆಯುಷ್ಮಾನ್ ಭಾರತ್ ಯೋಜನೆಯಡಿ ವಾರ್ಷಿಕವಾಗಿ 5 ಲಕ್ಷ ರು. ವಿಮಾ ಸೌಲಭ್ಯದಡಿ ಆಸ್ಪತ್ರೆಗೆ ದಾಖಲಾಗಿ ಉಚಿತ ಚಿಕಿತ್ಸೆ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕೂಡಲೆ ಕರ್ನಾಟಕದಲ್ಲಿರುವ ಹಿರಿಯ ನಾಗರಿಕರ ಆರೋಗ್ಯದ ಹಕ್ಕನ್ನು ಸಂರಕ್ಷಿಸುವುದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೆ, ಯೋಜನೆ ಮಾನದಂಡಗಳನ್ನು ಪೂರೈಕೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಸಂಸದ ಕ್ಯಾ. ಚೌಟ ಸದನದಲ್ಲಿ ಒತ್ತಾಯಿಸಿದ್ದಾರೆ.