ಅರಕಲಗೂಡಿನಲ್ಲಿ ಕಟ್ಟೇಪುರ ಏತ ನೀರಾವರಿ ಯೋಜನೆ ಕಾಮಗಾರಿಗೆ ಹಿನ್ನಡೆ

| Published : Jun 15 2024, 01:05 AM IST

ಸಾರಾಂಶ

ಅರಕಲಗೂಡಿನ ಮಲ್ಲಿಪಟ್ಟಣ ಹಾಗೂ ಕೊಣನೂರು ಹೋಬಳಿ ಭಾಗದ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷೆಯ ಗೊರೂರು ಹೇಮಾವತಿ ಜಲಾಶಯ ಹಿನ್ನೀರಿನ ಕಟ್ಟೇಪುರ ಏತ ನೀರಾವರಿ ಯೋಜನೆಗೆ ಕಳೆದ 5 ವರ್ಷಗಳಿಂದಲೂ ಗ್ರಹಣ ಹಿಡಿದಿದ್ದು ನೀರಿಗಾಗಿ ರೈತರು ಪರಿತಪಿಸುವ ಪರಿಸ್ಥಿತಿ ಬಗೆಹರಿದಿಲ್ಲ.

ಮಲ್ಲಿಪಟ್ಟಣ, ಕೊಣನೂರು ಭಾಗದ 200 ಕೆರೆಗಳಿಗೆ ನೀರು ತುಂಬಿಸುವ ಯೋಜನೆ । 5 ವರ್ಷಗಳಿಂದ ಕುಂಟುತ್ತ ಸಾಗಿರುವ ಕಾಮಗಾರಿ

ಶೇಖರ್ ವೈ.ಡಿ.

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನ ಮಲ್ಲಿಪಟ್ಟಣ ಹಾಗೂ ಕೊಣನೂರು ಹೋಬಳಿ ಭಾಗದ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷೆಯ ಗೊರೂರು ಹೇಮಾವತಿ ಜಲಾಶಯ ಹಿನ್ನೀರಿನ ಕಟ್ಟೇಪುರ ಏತ ನೀರಾವರಿ ಯೋಜನೆಗೆ ಕಳೆದ 5 ವರ್ಷಗಳಿಂದಲೂ ಗ್ರಹಣ ಹಿಡಿದಿದ್ದು ನೀರಿಗಾಗಿ ರೈತರು ಪರಿತಪಿಸುವ ಪರಿಸ್ಥಿತಿ ಬಗೆಹರಿದಿಲ್ಲ.

ಹೇಮಾವತಿ ನದಿ ಜಲಾಶಯದ ತಪ್ಪಲಿನಲ್ಲೇ ಇದ್ದರೂ ನೀರಾವರಿ ಸೌಲಭ್ಯದಿಂದ ವಂಚಿತವಾಗಿರುವ ತಾಲೂಕಿನ ಮಲ್ಲಿಪಟ್ಟಣ ಹಾಗೂ ಕೊಣನೂರು ಹೋಬಳಿ ಭಾಗದ 200 ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಮಹದಾಸೆಯಿಂದ ಕಳೆದ 5 ವರ್ಷಗಳ ಹಿಂದೆ ಅಂದಿನ ಶಾಸಕ ಎ.ಟಿ.ರಾಮಸ್ವಾಮಿ ಅವರ ಪ್ರಯತ್ನದ ಫಲವಾಗಿ ಸರ್ಕಾರ 190 ಕೋಟಿ ರು. ದೊಡ್ಡ ಮೊತ್ತದ ಕಟ್ಟೇಪುರ ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಿತ್ತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಮಾದುಸ್ವಾಮಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಗುತ್ತಿಗೆ ಕರಾರಿನ ಪ್ರಕಾರ ಟೆಂಡರ್ ಪಡೆದ ಗುತ್ತಿಗೆದಾರ 18 ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸಿ ಕೆರೆ ಕಟ್ಟೆಗಳಿಗೆ ನೀರು ಹರಿಸಬೇಕಿತ್ತಾದರೂ ಇಂದಿಗೂ ಕಾಮಗಾರಿ ಕುಂಟುತ್ತ ಸಾಗಿದೆ.

ಸೋಮವಾರಪೇಟೆ ತಾಲೂಕು ಕಟ್ಟೇಪುರ ಗ್ರಾಮದ ಬಳಿ ಹೇಮಾವತಿ ನದಿ ಹಿನ್ನೀರಿನಲ್ಲಿ ಜಾಕ್‌ವೆಲ್ ನಿರ್ಮಿಸಿ ಮುಸವತ್ತೂರು ಬಳಿ ಬೃಹತ್ ನೀರಿನ ತೊಟ್ಟಿ ಸ್ಥಾಪಿಸಬೇಕು. ನದಿಯಿಂದ 10 ಕಿಮೀ ಉದ್ದದವರೆಗೆ ರೇಸಿಂಗ್ ಮೇನ್ ಪೈಪ್‌ಲೈನ್ ಅಳವಡಿಸುವ ಮುಖೇನ ತೊಟ್ಟಿಗೆ ನೀರು ತುಂಬಿಸಬೇಕು. ಬರಡಾಗಿರುವ ಭೂಮಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಆದರೆ ಯೋಜನೆ ಪ್ರಾರಂಭವಾಗಿ ಐದು ವರ್ಷಗಳು ಗತಿಸಿದರೂ ಇಂದಿಗೂ ಹೇಮಾವತಿ ನದಿ ಬಳಿ ಜಾಕ್‌ವೆಲ್ ನಿರ್ಮಿಸುವ ಕಾಮಗಾರಿ ಸಹ ಮುಗಿದಿಲ್ಲ. ಹೇಮಾವತಿ ನದಿಯಿಂದ ನೀರಿನ ತೊಟ್ಟಿವರೆಗೆ 5 ಕಿಮೀ ವರೆಗೆ ಮಾತ್ರ ರೇಸಿಂಗ್ ಮೇನ್ ಪೈಪ್ ಅಳವಡಿಸುವ ಕೆಲಸ ನಡೆಸಿದ್ದು ಇನ್ನೂ 4 ಕಿಮೀ ವರೆಗೆ ಬಾಕಿ ಉಳಿದಿದೆ. ಮುಸವತ್ತೂರು ಬಳಿ ನೀರಿನ ತೊಟ್ಟಿ ನಿರ್ಮಾಣದ ಕಾಮಗಾರಿ ನೆನೆಗುದಿಗೆ ಬಿದ್ದಿದೆ.

ಫಲಾನುಭವಿಗೆ ಸಿಗದ ಪರಿಹಾರ:

ಯೋಜನೆ ಅನುಷ್ಠಾನಕ್ಕಾಗಿ 12 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ ಭೂಮಿ ಕಳೆದುಕೊಂಡ 30 ಮಂದಿ ಫಲಾನುಭವಿ ರೈತರಿಗೆ ನಿಯಮಾನುಸಾರ ಸಿಗಬೇಕಾದ ಪರಿಹಾರ ಇನ್ನೂ ಮರೀಚಿಕೆಯಾಗಿದೆ.

ಪೈಪ್‌ಗಳ ಗುಣಮಟ್ಟಕ್ಕೆ ಹಾನಿ:

ನೀರಾವರಿ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆಯಾದ ನಂತರ ಕೆರೆ ಕಟ್ಟೆಗಳಿಗೆ ಅಳವಡಿಸಲು ಬೃಹತ್ ಗಾತ್ರದ ನೂರಾರು ಕೊಳವೆ ಪೈಪ್‌ಗಳನ್ನು ಲಾರಿ ಲೋಡ್‌ಗಳಲ್ಲಿ ತಂದು ಮುಸವತ್ತೂರು ಬಳಿ ದಾಸ್ತಾನು ಮಾಡಲಾಗಿದೆ. ಆದರೆ ಐದು ವರ್ಷಗಳಿಂದ ಬಿದ್ದಿರುವ ಪೈಪುಗಳು ತುಕ್ಕು ಹಿಡಿದು ಗುಣಮಟ್ಟ ಕಳೆದುಕೊಳ್ಳುತ್ತಿವೆ.

ಕಟ್ಟೇಪುರ ಏತ ನೀರಾವರಿ ಯೋಜನೆ ಕಾಮಗಾರಿಗೆ ಐದುವರೆ ಕಿಮೀ ಉದ್ದದವರೆಗೆ ರೇಸಿಂಗ್ ಮೇನ್ ಪೈಪ್ ಅಳವಡಿಸಲಾಗಿದೆ. ಜಾಕ್‌ವೆಲ್ ಕಾಮಗಾರಿ ಮುಕ್ತಾಯಗೊಂಡ ನಂತರ ಉಳಿಕೆ ನಾಲ್ಕೂವರೆ ಕಿಮೀ ಉದ್ದದ ರೇಸಿಂಗ್ ಮೇನ್ ಪೈಪ್ ಅಳವಡಿಸಿ ನೀರಿನ ತೊಟ್ಟಿ ಸ್ಥಾಪಿಸಿ ಉಳಿಕೆ ಕಾಮಗಾರಿ ನಡೆಸಲಾಗುವುದು.

ಪುಟ್ಟಸ್ವಾಮಿ, ಹಾರಂಗಿ ಪುನರ್ವಸತಿ ಉಪ ವಿಭಾಗ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ರಾಮನಾಥಪುರ

ಕಟ್ಟೇಪುರ ಏತ ನೀರಾವರಿ ಯೋಜನೆ ಮೊದಲ ಹಂತದ ಕಾಮಗಾರಿಗೆ 120 ಕೋಟಿ ರು. ಮಂಜೂರಾಗಿದ್ದು ಕೆಲಸ ನಡೆದ ಬಳಿಕ ಉಳಿಕೆ ಎರಡನೇ ಹಂತದ ಕಾಮಗಾರಿಗೆ 70 ಕೋಟಿ ರು. ಮಂಜೂರು ಮಾಡುವ ಭರವಸೆ ದೊರೆತಿದೆ. ಕಾಮಗಾರಿ ಬೇಗ ಪೂರ್ಣಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು.

ಎಂ.ಟಿ. ಕೃಷ್ಣೇಗೌಡ, ಕಾಂಗ್ರೆಸ್ ಮುಖಂಡ.