ಮೂಡುಬಿದಿರೆ: ಪ್ರತಿಯೊಬ್ಬರಲ್ಲೂ ವಿಭಿನ್ನ ಸಾಮರ್ಥ್ಯ, ಪ್ರತಿಭೆ ಮತ್ತು ಕೌಶಲಗಳ ಸಂಯೋಜನೆಯಿದ್ದು, ಅವುಗಳನ್ನು ಗುರುತಿಸಿಕೊಂಡು ಮುಂದಿನ ಐದರಿಂದ ಹತ್ತು ವರ್ಷಗಳ ಗುರಿಯನ್ನು ಸ್ಪಷ್ಟವಾಗಿ ರೂಪಿಸಿಕೊಳ್ಳಬೇಕು ಎಂದು ಬೆಂಗಳೂರಿನ ಐವೇವ್ ಸಿಸ್ಟಮ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸ್ಥಾಪಕ-ಅಧ್ಯಕ್ಷ ಅಬ್ದುಲ್ಲಾ ಖಾನ್ ಎಂ. ಹೇಳಿದರು.
ಯೆನೆಪೊಯ ಇಂಜಿನಿಯರ್ ಕಾಲೇಜಿನಲ್ಲಿ 2022–26ನೇ ಬ್ಯಾಚ್‌ನ ಬಿ.ಇ. ಪದವೀಧರರ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕೃತಕ ಬುದ್ಧಿಮತ್ತೆ ಆಧಾರಿತ ಸ್ಪರ್ಧಾತ್ಮಕ ಪರಿಸರದಲ್ಲಿ ನಿರಂತರ ಕಲಿಕೆ, ವೃತ್ತಿಪರ ಶ್ರೇಷ್ಠತೆ, ನೈತಿಕ ಮೌಲ್ಯಗಳು ಮತ್ತು ಹೊಂದಿಕೊಳ್ಳುವಿಕೆ ಅಗತ್ಯ ಎಂದರು.ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೂ ಆದ್ಯತೆ ನೀಡಬೇಕು. ಆತಂಕ, ಒತ್ತಡ ಸೇರಿದಂತೆ ವಿವಿಧ ಸವಾಲುಗಳನ್ನು ನಿಭಾಯಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಮಣಿಪಾಲದ ಕಾರ್‌ಮಿಕ್ ಡಿಸೈನ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ರತ್ನಾಕರ್ ಭಟ್ ಗೌರವ ಅತಿಥಿಯಾಗಿದ್ದರು. ಪದವಿಯ ಬಳಿಕ ಪೋಷಕರನ್ನು ನೋಡಿಕೊಳ್ಳುವುದು ಪ್ರಮುಖ ಜವಾಬ್ದಾರಿಯಾಗಿದೆ ಎಂದ ಅವರು, ಸಂಸ್ಥೆಯೊಂದಿಗೆ ಸಂಪರ್ಕ ಕಾಯ್ದುಕೊಂಡು ಕಿರಿಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಂತೆ ಕರೆ ನೀಡಿದರು. ಉದ್ಯಮಶೀಲತೆಗೆ ಪರಿಶ್ರಮ, ಕಾರ್ಯಕ್ಷಮತೆ ಮತ್ತು ತಾಳ್ಮೆ ಅಗತ್ಯ ಎಂದರು.
ಮಂಗಳೂರಿನ ಯೆನೆಪೊಯ ಗ್ರೂಪ್‌ನ ಕಾರ್ಯಾಚರಣೆ ನಿರ್ದೇಶಕ ಯೆನೆಪೊಯ ಅಬ್ದುಲ್ಲಾ ಜಾವೀದ್ ಅಧ್ಯಕ್ಷತೆ ವಹಿಸಿದ್ದರು. ಹೊಸ ಅವಕಾಶಗಳನ್ನು ಹುಡುಕಿ, ಹೊಸ ಹಾದಿಗಳನ್ನು ಅನ್ವೇಷಿಸಿ, ಆತ್ಮವಿಶ್ವಾಸ ಮತ್ತು ಸ್ಪಷ್ಟ ಉದ್ದೇಶದೊಂದಿಗೆ ಭವಿಷ್ಯ ರೂಪಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಬಳಿಕ ಪದವಿ ಸ್ವೀಕಾರದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.9.78 ಸಿಜಿಪಿಎಯೊಂದಿಗೆ ಪ್ರಶಾಂತ್ ಅಗ್ರಗಣ್ಯ: ವೈ.ಐ.ಟಿ. ಪ್ರಾಂಶುಪಾಲ ಪ್ರೊ. ಡಾ. ಅಬ್ದುಲ್ ಕರೀಮ್ ಗಣ್ಯರು ಮತ್ತು ಅತಿಥಿಗಳನ್ನು ಸ್ವಾಗತಿಸಿದರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಪ್ರಶಾಂತ್ 9.78 ಸಿಜಿಪಿಎ ಗಳಿಸಿ 2022–26ರ ಬ್ಯಾಚ್‌ನ ಅಗ್ರಗಣ್ಯ ವಿದ್ಯಾರ್ಥಿಯಾಗಿ ಹೊರಹೊಮ್ಮಿದರು. ಅದೇ ವಿಭಾಗದ ನಿತ್ಯಾ ಅವರಿಗೆ ಅತ್ಯುತ್ತಮ ಸಮಗ್ರ ಸಾಧನೆಗಾಗಿ 2022–26ರ ಬ್ಯಾಚ್‌ನ ‘ಅತ್ಯುತ್ತಮ ನಿರ್ಗಮನ ವಿದ್ಯಾರ್ಥಿ’ ಪ್ರಶಸ್ತಿ ನೀಡಲಾಯಿತು.
ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ನಾಲ್ಕನೇ ವರ್ಷದ ವಿದ್ಯಾರ್ಥಿನಿ ಸಿಂಚನ ಕಾರ್ಯಕ್ರಮ ನಿರೂಪಿಸಿದರು. ರಿತೇಶ್ ಮತ್ತು ತಂಡ ಪ್ರಾರ್ಥನೆ ನೆರವೇರಿಸಿದರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಕಾರ್ತಿಕ್ ಮತ್ತು ಡಯಾನಾ ಕ್ರಮವಾಗಿ ಮುಖ್ಯ ಅತಿಥಿ ಹಾಗೂ ಗೌರವ ಅತಿಥಿಗಳನ್ನು ಪರಿಚಯಿಸಿದರು. ಸಿಎಸ್‌ಇ-ಡೇಟಾ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಪೂಜಾ ವಂದಿಸಿದರು.
ಯೆನೆಪೊಯ (ಡೀಮ್ಡ್ ಟು ಬಿ ಯೂನಿವರ್ಸಿಟಿ), ಮಂಗಳೂರಿನ ಸಹ-ಕುಲಾಧಿಪತಿ ಯೆನೆಪೊಯ ಮೊಹಮ್ಮದ್ ಫರ್ಹಾದ್, ಆಡಳಿತ ಮಂಡಳಿ ಸದಸ್ಯ ಡಾ. ಅಖ್ತರ್ ಹುಸೇನ್, ಶೈಕ್ಷಣಿಕ ವಿಭಾಗದ ಡೀನ್ ಪ್ರೊ. ಡಾ. ಮೆಲ್ವಿನ್ ಡಿಸೋಜಾ, ಸಂಶೋಧನಾ ವಿಭಾಗದ ಡೀನ್ ಪ್ರೊ. ಡಾ. ಸುಜರಿತಾ, ಕ್ಯಾಂಪಸ್ ಆಡಳಿತಾಧಿಕಾರಿ ಮೊಹಮ್ಮದ್ ಬಿ. ಶಾಹಿದ್, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಸಿಬ್ಬಂದಿ, ಪದವೀಧರ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.