ಸ್ವಂತ ಉದ್ಯಮ ಸ್ಥಾಪನೆ ಬಹುತೇಕರ ಕನಸ್ಸು

| Published : Apr 20 2024, 01:02 AM IST

ಸಾರಾಂಶ

ಯಾವುದೇ ವ್ಯಕ್ತಿ ಹೊಸ ಉದ್ಯೋಗ ಆರಂಭಿಸಬೇಕು ಎಂದು ಯೋಚನೆ ಬಂದ ಕೂಡಲೇ ವ್ಯವಹಾರ ಕ್ಷೇತ್ರಕ್ಕೆ ಇಳಿದು ಬಿಡಲು ಸಾಧ್ಯವಾಗುವುದಿಲ್ಲ.

ಗದಗ: ಸ್ವಂತ ಉದ್ಯಮ ಆರಂಭಿಸುವುದು, ಜನರಿಗೆ ನಾವು ಉದ್ಯೋಗ ಕೊಡಬೇಕು ಎನ್ನುವುದು ಬಹುತೇಕರ ಕನಸಾಗಿರುತ್ತದೆ ಎಂದು ಆದರ್ಶ ಶಿಕ್ಷಣ ಸಂಸ್ಥೆಯ ಚೇರಮನ್‌ ಆನಂದ ಪೋತ್ನಿಸ್ ಹೇಳಿದರು.

ಅವರು ಆದರ್ಶ ಶಿಕ್ಷಣ ಸಂಸ್ಥೆಯ ವಿ.ಆರ್. ಕುಷ್ಟಗಿ ಮೆಮೊರಿಯಲ್ ಕಾಲೇಜ್ ಆಫ್ ಕಾಮರ್ಸ್ ನ ಐಕ್ಯೂಎಸಿ ಅಡಿಯಲ್ಲಿ ಕನ್ನಡ ವಿಭಾಗ ಮತ್ತು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸಹಯೋಗದಲ್ಲಿ ಯುವ ಉದ್ದಿಮೆದಾರರೊಂದಿಗೆ ಸಂವಾದ ಕಾರ್ಯಕ್ರಮ ಹಾಗೂ ಶ್ರೇಷ್ಠ ಉದ್ಯಮಿದಾರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಯಾವುದೇ ವ್ಯಕ್ತಿ ಹೊಸ ಉದ್ಯೋಗ ಆರಂಭಿಸಬೇಕು ಎಂದು ಯೋಚನೆ ಬಂದ ಕೂಡಲೇ ವ್ಯವಹಾರ ಕ್ಷೇತ್ರಕ್ಕೆ ಇಳಿದು ಬಿಡಲು ಸಾಧ್ಯವಾಗುವುದಿಲ್ಲ. ಯಾವುದೇ ಹೊಸ ಉದ್ದಿಮೆ ಆರಂಭಕ್ಕೆ ಮುನ್ನ ಪೂರ್ವ ತಯಾರಿ ಮುಖ್ಯವಾಗಿರುತ್ತದೆ. ಶುರು ಮಾಡಲಿರುವ ವ್ಯವಹಾರದ ಬಗ್ಗೆ ಅಧ್ಯಯನದ ಜತೆಗೆ ಖರ್ಚು ವೆಚ್ಚ ಸರಿದೂಗಿಸಲು ಬೇಕಿರುವ ಹಣ ಸಂಗ್ರಹಣೆ, ವ್ಯವಹಾರ ಪ್ರಾರಂಭಿಸಿದ ಮೇಲೆ ಮಾರ್ಕೆಟಿಂಗ್‌ ಸ್ಟ್ಯಾಟರ್ಜಿಗಳು, ಇದಕ್ಕೂ ಮುನ್ನ ಸ್ಥಳ ಮತ್ತು ಯಾವ ವಯಸ್ಸಿನ ಗ್ರಾಹಕರನ್ನು ಗುರಿಯಾಗಿಸಬೇಕು. ಹೀಗೆ ನಾನಾ ಪ್ರಶ್ನೆಗಳು ಎದುರಾಗುತ್ತವೆ. ಹೊಸ ಉದ್ದಿಮೆ ಆರಂಭಿಸುವ ಮೊದಲು ಸಾಕಷ್ಟು ತಯಾರಿ ಮಾಡಿಕೊಳ್ಳಬೇಕು. ರಿಸ್ಕ್‌ ತೆಗೆದುಕೊಳ್ಳಲು ಸಹ ರೆಡಿಯಿರಬೇಕು, ಜಾಣ್ಮೆಯಿಂದ ಪೂರ್ವ ಲೆಕ್ಕಾಚಾರಗಳೊಂದಿಗೆ ಕಾರ್ಯ ಪ್ರವೃತ್ತರಾಗಬೇಕು ಎಂದರು.

ಅತಿಥಿಗಳಾಗಿ ಆಗಮಿಸಿದ ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಈಶಣ್ಣ ಮುನವಳ್ಳಿ ಮಾತನಾಡಿ, ಪ್ರತಿ ದೊಡ್ಡ ಆಲೋಚನೆಯು ಸಣ್ಣ ಆಲೋಚನೆಯಿಂದ ಪ್ರಾರಂಭವಾಗುತ್ತದೆ. ವ್ಯವಹಾರದಲ್ಲಿ ಸಣ್ಣ ಪುಟ್ಟ ಯೋಜನೆಗಳು ಬೃಹತ್‌ ಉದ್ಯಮವಾಗಿ ಬೆಳೆದಿರುವ ಉದಾಹರಣೆಯಿದೆ. ಹೀಗಾಗಿಯೇ ನೀವು ದೊಡ್ಡ ವ್ಯಾಪಾರ ತೆರೆಯಲು ಬಯಸಿದರೆ, ನೀವು ಮೊದಲು ಸಣ್ಣ ವ್ಯಾಪಾರದೊಂದಿಗೆ ಪ್ರಾರಂಭಿಸಬೇಕು. ಹೊಸ ವ್ಯವಹಾರ ಆರಂಭಿಸಲು ತಿಳಿದುಕೊಂಡಿರಬೇಕಾದ ವ್ಯಾಪಾರ ಯೋಚನೆ, ವ್ಯಾಪಾರ ಯೋಜನೆ, ಹೂಡಿಕೆ ಬಳಿಕವೂ ಖರ್ಚಿಗಾಗಿ ಹಣ ಹೊಂದಿಸುವುದು, ವ್ಯಾಪಾರದ ಹೆಸರು, ಸ್ಥಳ, ವೆಬ್‌ಸೈಟ್ ರಚಿಸಿ ಇವುಗಳ ಬಗ್ಗೆ ಮೊದಲು ಅಧ್ಯಯನ ಮಾಡಿಕೊಂಡೆ ಹೊಸ ಉದ್ಯಮ ಆರಂಭಿಸಬೇಕು ಎಂದರು.

ವೇದಿಕೆ ಮೇಲೆ ಸಂಸ್ಥೆಯ ಕಾರ್ಯದರ್ಶಿ ಎ.ಡಿ. ಗೋಡಕಿಂಡಿ, ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಕೆ.ಗಿರಿರಾಜಕುಮಾರ್, ಉಪ ಪ್ರಾಚಾರ್ಯ ಡಾ. ವಿ.ಟಿ. ನಾಯ್ಕರ್, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮಹಿಳಾ ಅಧ್ಯಕ್ಷೆ ಸುವರ್ಣ ಮದರಿಮಠ, ವ್ಯವಹಾರ ಆಡಳಿತ ಮಹಾವಿದ್ಯಾಲಯದ ಪ್ರಾಚಾರ್ಯ ಲಿಂಗರಾಜ್ ರಶ್ಮಿ, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನ ಪದಾಧಿಕಾರಿಗಳು ಹಾಗೂ ಬೇರೆ ಬೇರೆ ಕಾಲೇಜಿನ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೇಷ್ಠ ಉದ್ಯಮಿದಾರ ಪ್ರಶಸ್ತಿ 2024 ರ ಪ್ರಧಾನ ಮಾಡಲಾಯಿತು.