ಸಾರಾಂಶ
ಜಿಲ್ಲೆಯ ಸಾಂಸ್ಕೃತಿಕ, ಸಾಮಾಜಿಕ, ನೈಸರ್ಗಿಕ ವೈವಿಧ್ಯತೆಯನ್ನು ಪರಿಗಣಿಸಿ ಕ್ರಮ : ಡಿಸಿ ಡಾ. ಸುಶೀಲಾ
ಕನ್ನಡಪ್ರಭ ವಾರ್ತೆ ಯಾದಗಿರಿಮತದಾನ ಕೇಂದ್ರಕ್ಕೆ ಮತದಾರರನ್ನು ಸೆಳೆಯಲು ಹಾಗೂ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾಡಳಿತದಿಂದ ವಿಶಿಷ್ಟ ರೀತಿಯ ಥೀಮ್ ಆಧಾರಿತ ಮತದಾನ ಕೇಂದ್ರಗಳನ್ನು ಪರಿಚಯಿಸುತ್ತಿದ್ದು, ಜಿಲ್ಲೆಯ ಸಾಂಸ್ಕೃತಿಕ, ಸಾಮಾಜಿಕ ಮತ್ತು ನೈಸರ್ಗಿಕ ವೈವಿಧ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಸುಶೀಲಾ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಗುರುವಾರ ಮಧ್ಯಾಹ್ನ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಾಗೂ ಶೋರಾಪುರ ವಿಧಾನಸಭಾ ಉಪ ಚುನಾವಣೆಗೆ ಕೈಗೊಳ್ಳಲಾದ ಸಿದ್ಧತೆಗಳ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಗುಲಾಬಿ ಬಣ್ಣದ ಬಟ್ಟೆಯನ್ನು ಧರಿಸಿ ಮಹಿಳೆಯರೇ ಕಾರ್ಯನಿರ್ವಹಿಸುವ, "ಸಖೀ " ಹೆಸರಿನ 20 ಮತಗಟ್ಟೆಗಳು (ಪಿಂಕ್ ಪೋಲಿಂಗ್ ಸ್ಟೇಷನ್), ವಿಶಿಷ್ಟ ರೀತಿಯ ಸೌಲಭ್ಯಗಳು ಇರುವ ನಾಲ್ಕು ಮಾದರಿ ಮತಗಟ್ಟೆಗಳು, ಕೇವಲ ಯುವ ಸಿಬ್ಬಂದಿ ಕಾರ್ಯನಿರ್ವಹಿಸುವ ನಾಲ್ಕು ಯುವ ಮತಗಟ್ಟೆಗಳು, ಕೇವಲ ವಿಕಲಚೇತನ ಸಿಬ್ಬಂದಿ ಕಾರ್ಯನಿರ್ವಹಿಸುವ ನಾಲ್ಕು "ಪಿಡಬ್ಲೂಡಿ " ಮತಗಟ್ಟೆಗಳು, ನಾಡಿನ ಐತಿಹಾಸಿಕ ಪರಂಪರೆಯನ್ನು ಗುರುತಿಸುವಂತಹ ನಾಲ್ಕು ಸಾಂಪ್ರದಾಯಿಕ ಮತಗಟ್ಟೆಗಳು ಸೇರಿದಂತೆ ವಿಶಿಷ್ಟ ರೀತಿಯ "ಥೀಮ್ " ಆಧಾರಿತ ಒಟ್ಟು 36 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಯಾದಗಿರಿ ಜಿಲ್ಲೆಯ ಒಟ್ಟು ಮತದಾರರು 10,33,586: ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಶೋರಾಪುರ (ಸುರಪುರ) ಮತಕ್ಷೇತ್ರದಲ್ಲಿ 1,42,532 ಪುರುಷ ಹಾಗೂ 1,40,523 ಮಹಿಳೆಯರು ಹಾಗೂ 28 ತೃತೀಯ ಲಿಂಗದವರು ಸೇರಿ ಒಟ್ಟು 2,83,083 ಮತದಾರರು ಇದ್ದಾರೆ.ಶಹಾಪುರ ಮತಕ್ಷೇತ್ರದಲ್ಲಿ 1,23,339 ಪುರುಷರು, 1,23,784 ಮಹಿಳೆಯರು ಹಾಗೂ 15 ತೃತೀಯ ಲಿಂಗದವರು ಸೇರಿ ಒಟ್ಟು 2,47,138 ಮತದಾರರು ಇದ್ದಾರೆ.
ಯಾದಗಿರಿ ಮತಕ್ಷೇತ್ರದಲ್ಲಿ 1,23,301 ಪುರುಷರು, 1,24,827 ಮಹಿಳೆಯರು ಹಾಗೂ 20 ತೃತೀಯ ಲಿಂಗದವರು ಸೇರಿ ಒಟ್ಟು 2,48,148 ಮತದಾರರು ಇದ್ದಾರೆ.ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಗುರುಮಠಕಲ್ ಮತಕ್ಷೇತ್ರದಲ್ಲಿ 1,26,825 ಪುರುಷರು, 1,28,386 ಮಹಿಳೆಯರು ಹಾಗೂ 6 ತೃತೀಯ ಲಿಂಗದವರು ಸೇರಿ ಒಟ್ಟು 2,55,217 ಮತದಾರರು ಇದ್ದಾರೆ.
ಜಿಲ್ಲೆಯಲ್ಲಿ ಒಟ್ಟು 5,15,997 ಪುರುಷರು, 5,17,520 ಮಹಿಳೆಯರು ಹಾಗೂ 69 ತೃತೀಯ ಲಿಂಗದವರು ಸೇರಿ ಒಟ್ಟು 10,33,586 ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ಅವರು ತಿಳಿಸಿದ್ದಾರೆ.