ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಉಳಿದಿರುವ ವ್ಯಾವಹಾರಿಕ ಸಾಧನ, ಅಪಘಾತ, ಚೆಕ್‌ಬೌನ್ಸ್ ಹಾಗೂ ಪರಿಹಾರ ಕೋರಿ ಸಲ್ಲಿಸಿರುವ ಪ್ರಕರಣಗಳೂ ಸೇರಿದಂತೆ ಹಲವು ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸುವುದು ಲೋಕ ಅದಾಲತ್‌ನ ಮುಖ್ಯ ಉದ್ದೇಶವಾಗಿದೆ ಎಂದು ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಯೋಗೇಶ್ ತಿಳಿಸಿದರು.ಪಟ್ಟಣದ ಜೆಎಂಎಫ್ ನ್ಯಾಯಾಲಯದ ಸಭಾಂಗಣದಲ್ಲಿ ಮಾ.8 ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್ ಕುರಿತು ಶುಕ್ರವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.
ಈ ವರ್ಷದ ಮೊದಲ ರಾಷ್ಟ್ರೀಯ ಲೋಕ ಅದಾಲತ್ ಅನ್ನು ಯಶಸ್ಸಿಗೊಳಿಸಲು ತಾಲೂಕು ಆಡಳಿತ, ಪೊಲೀಸ್ ಇಲಾಖೆ, ವಕೀಲರ ಸಂಘ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಬೇಕು ಎಂದರು.ಎರಡೂ ಕಡೆ ಕಕ್ಷಿದಾರರು ಪರಸ್ಪರ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ಯಾರಿಗೂ ಸೋಲಾಗದೆ ಇಬ್ಬರಿಗೂ ಜಯಸಿಕ್ಕಂತಾಗುತ್ತದೆ. ಅಲ್ಲದೆ, ಎರಡೂ ಕಡೆಯ ಕಕ್ಷಿದಾರರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಈ ಕುರಿತು ಅಧಿಕಾರಿಗಳು ಕಕ್ಷಿದಾರರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ವ್ಯಾವಹಾರಿಕ ಸಾಧನ ಪ್ರಕರಣ ಆರು ತಿಂಗಳಲ್ಲಿ ಇತ್ಯರ್ಥವಾಗಬೇಕು. ಆದರೆ, ತಮ್ಮ ನ್ಯಾಯಾಲಯದಲ್ಲಿಯೇ 2013ರ ಪ್ರಕರಣ ಇನ್ನೂ ಬಾಕಿ ಇದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಪ್ರತಿನಿತ್ಯ ಕನಿಷ್ಠ ಮೂರು ಪ್ರಕರಣಗಳನ್ನು ನ್ಯಾಯಾಲಯಕ್ಕೆ ತರಬೇಕು ಎಂದರು.ಪೊಲೀಸ್ ಮತ್ತು ಅರಣ್ಯ ಇಲಾಖೆಯಲ್ಲಿ ಕೆಲ ಪ್ರಕರಣಗಳಲ್ಲಿ ವಶಕ್ಕೆ ಪಡೆದ ಆರೋಪಿಗಳನ್ನು ಅಲ್ಲಿಯೇ ರಾಜೀ ಸಂಧಾನ ಮಾಡಿ ಬಿಟ್ಟು ಕಳುಹಿಸಬಾರದು. ಯಾವುದೇ ತೀರ್ಮಾನ ಮಾಡುವ ಅಧಿಕಾರ ನಿಮಗಿಲ್ಲ. ಕಡ್ಡಾಯವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಸೂಚಿಸಿದರು.
ಇಬ್ಬರೂ ಕಕ್ಷಿದಾರರಿಗೆ ವಾರಂಟ್ ಮತ್ತು ಸಮನ್ಸ್‌ಗಳನ್ನು ಸರಿಯಾದ ರೀತಿಯಲ್ಲಿ ಜಾರಿ ಮಾಡಬೇಕು. ಪೊಲೀಸ್ ಅಧಿಕಾರಿಗಳು ಚುನಾವಣೆ ಸಂದರ್ಭದಲ್ಲಿ ಬಾಕಿ ಇಲ್ಲದಂತೆ ವಾರೆಂಟ್ ಜಾರಿಗೊಳಿಸುವ ರೀತಿಯಲ್ಲಿ ಕ್ರಮ ವಹಿಸಿದರೆ ಅದಾಲತ್‌ನಲ್ಲಿ ನಾಲ್ಕೂ ನ್ಯಾಯಾಲಯಗಳಿಂದ ಕನಿಷ್ಠ 500 ಪ್ರಕರಣಗಳನ್ನು ಇತ್ಯರ್ಥಪಡಿಸಬಹುದು. ಹಾಗಾಗಿ ಎಲ್ಲ ಅಧಿಕಾರಿಗಳು ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.ಎರಡೂ ಕಡೆಯ ಕಕ್ಷಿದಾರರು ಗೆಲುವು ಸಾಧಿಸಬೇಕೆಂದರೆ ಲೋಕ್ ಅದಾಲತ್‌ನ ರಾಜೀ ಸಂಧಾನದಿಂದ ಮಾತ್ರ ಸಾಧ್ಯ. ಕಾನೂನು ಬದ್ದವಾಗಿ ನ್ಯಾಯಾಲಯದಲ್ಲಿಯೇ ರಾಜೀ ಸಂಧಾನ ನಡೆಸಿ ವ್ಯಾಜ್ಯಗಳನ್ನು ಇತ್ಯರ್ಥ ಪಡಿಸಲಾಗುವುದು. ಜೊತೆಗೆ ದ್ವೇಷ, ಅಸೂಯೆ, ಕ್ರಿಮಿನಲ್ ಪ್ರಕರಣಗಳು ಹೆಚ್ಚಾಗುವುದನ್ನು ತಡೆಗಟ್ಟಬಹುದು. ಆದ್ದರಿಂದ ಅದಾಲತ್ ಯಶಸ್ಸಿಗೆ ಸಹಕರಿಸಬೇಕು ಎಂದು ಹೇಳಿದರು.
ಈ ವೇಳೆ ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ನರಸಿಂಹಮೂರ್ತಿ, ಸಿವಿಲ್ ನ್ಯಾಯಾಧೀಶ ಎಚ್.ಎಸ್.ಶಿವರಾಜು, ಅಪರ ಸಿವಿಲ್ ನ್ಯಾಯಾಧೀಶ ಕೆ.ಪಿ.ಸಿದ್ದಪ್ಪಾಜಿ, ಸಹಾಯಕ ಸರ್ಕಾರಿ ಅಭಿಯೋಜಕರಾದ ಟಿ.ಆರ್. ಶ್ರೀದೇವಿ, ಅರುಣಾಬಾಯಿ, ತಹಸೀಲ್ದಾರ್ ಜಿ.ಆದರ್ಶ್, ಸಿಪಿಐ ನಿರಂಜನ್, ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್, ಪಿಎಸ್‌ಐಗಳಾದ ವೈ.ಎನ್.ರವಿಕುಮಾರ್, ರಾಜೇಂದ್ರ, ಮಾರುತಿ, ಅನ್ನಪೂರ್ಣ, ಬಿಇಒ ಯೋಗೇಶ್, ವಲಯ ಅರಣ್ಯಾಧಿಕಾರಿ ಸಂಪತ್ ಪಾಟೀಲ್, ಕಾರ್ಮಿಕ ನಿರೀಕ್ಷಕ ಎನ್.ಟಿ.ಶಿವಕುಮಾರ್, ಅಬಕಾರಿ ಪಿಎಸ್‌ಐ ಚಂದ್ರಶೇಖರ, ಕಾನೂನು ಸೇವಾ ಸಮಿತಿಯ ಸಿಬ್ಬಂದಿ ಸೋನುಮೂರ್ತಿ, ರಮೇಶ್ ಸೇರಿ ವಿವಿಧ ಬ್ಯಾಂಕ್ ಅಧಿಕಾರಿಗಳು ಮತ್ತು ವಕೀಲರು ಇದ್ದರು.