ಬಿಜೆಪಿ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ‘ಸೇವಾ ಸಂಕಲ್ಪ ಅಭಿಯಾನ–2026’ರ ಅಂಗವಾಗಿ ಅ. 7ರಂದು ನಗರದಲ್ಲಿ ‘ಸೇವಾ ಜ್ಯೋತಿ ಯಾತ್ರೆ’ ಹಾಗೂ ‘ವಿಕಸಿತ ಭಾರತ ಸಂಕಲ್ಪ ಸಭೆ’ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ್ ಈ. ಗುಳಗಣ್ಣನವರ ತಿಳಿಸಿದ್ದಾರೆ.

ಕೊಪ್ಪಳ: ಬಿಜೆಪಿ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ‘ಸೇವಾ ಸಂಕಲ್ಪ ಅಭಿಯಾನ–2026’ರ ಅಂಗವಾಗಿ ಅ. 7ರಂದು ನಗರದಲ್ಲಿ ‘ಸೇವಾ ಜ್ಯೋತಿ ಯಾತ್ರೆ’ ಹಾಗೂ ‘ವಿಕಸಿತ ಭಾರತ ಸಂಕಲ್ಪ ಸಭೆ’ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ್ ಈ. ಗುಳಗಣ್ಣನವರ ತಿಳಿಸಿದ್ದಾರೆ.

ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 8 ಗಂಟೆಗೆ ಉಪಾಹಾರದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. 9.15ಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಆಗಮಿಸಲಿದ್ದು, ದೇಶಭಕ್ತಿ ಗೀತೆಗಳ ಗಾಯನ ನಡೆಯಲಿದೆ.

10 ಗಂಟೆಗೆ ಗಣ್ಯರು ವೇದಿಕೆಗೆ ಆಗಮಿಸಲಿದ್ದು, ‘ವಂದೇ ಮಾತರಂ’ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ವರ್ಚುವಲ್ ಮೂಲಕ ಮಾತನಾಡಲಿದ್ದಾರೆ. 10.15ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

10.55ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ‘ವಿಕಸಿತ ಭಾರತ @2047’ ಸಾಮೂಹಿಕ ಸಂಕಲ್ಪ ಸ್ವೀಕಾರ ನಡೆಯಲಿದೆ. ನಂತರ ಸೇವಾ ಜ್ಯೋತಿ ಪ್ರಜ್ವಲನೆ ಹಾಗೂ ರಾಷ್ಟ್ರಗೀತೆ ನಡೆಯಲಿದೆ.

ರ‍್ಯಾಲಿ: ಬೆಳಗ್ಗೆ 11.10ಕ್ಕೆ ಶಿವಶಾಂತವೀರ ಮಂಗಲ ಭವನದಿಂದ ಬೈಕ್ ಹಾಗೂ ಕಾರ್ ರ‍್ಯಾಲಿ ಆರಂಭವಾಗಲಿದೆ. ಬಸವೇಶ್ವರ ವೃತ್ತ, ಗವಿಮಠ, ಗಡಿಯಾರ ಕಂಬ ಹಾಗೂ ಅಶೋಕ ವೃತ್ತದ ಮೂಲಕ ರ‍್ಯಾಲಿ ಸಾಗಲಿದೆ.

ದೇಶದ ಅಭಿವೃದ್ಧಿ, ಸೇವೆ, ಸುಶಾಸನ ಹಾಗೂ ‘ವಿಕಸಿತ ಭಾರತ @2047’ ಸಂಕಲ್ಪವನ್ನು ಜನರಲ್ಲಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ನವೀನಕುಮಾರ್ ಗುಳಗಣ್ಣನವರ ಮನವಿ ಮಾಡಿದ್ದಾರೆ.