ರಾಮನಗರ: ತಾಲೂಕಿನ ಕೈಲಾಂಚ ಹೋಬಳಿಯ ಅವ್ವೇರಹಳ್ಳಿಯ ರೇವಣಸಿದ್ದೇಶ್ವರ ಮಹಾರಥೋತ್ಸವದ ವೇಳೆ ವಿಘ್ನಗಳು ಸಂಭವಿಸಲು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಅಧಿಕಾರಿಗಳು ಮತ್ತು ಶಾಸಕರ ಬೇಜವಾಬ್ದಾರಿ ಕಾರಣ ಎಂದು ಆರೋಪಿಸಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಾರ್ಯಾಲಯದ ಎದುರು ಸೇವಾ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು

ರಾಮನಗರ: ತಾಲೂಕಿನ ಕೈಲಾಂಚ ಹೋಬಳಿಯ ಅವ್ವೇರಹಳ್ಳಿಯ ರೇವಣಸಿದ್ದೇಶ್ವರ ಮಹಾರಥೋತ್ಸವದ ವೇಳೆ ವಿಘ್ನಗಳು ಸಂಭವಿಸಲು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಅಧಿಕಾರಿಗಳು ಮತ್ತು ಶಾಸಕರ ಬೇಜವಾಬ್ದಾರಿ ಕಾರಣ ಎಂದು ಆರೋಪಿಸಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಾರ್ಯಾಲಯದ ಎದುರು ಸೇವಾ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.

ಶ್ರೀ ರೇವಣಸಿದ್ದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಶ್ರೀ ಮಠದ ಸೇವಾ ಗ್ರಾಮಸ್ಥರು ಇಲಾಖೆ ಅಧಿಕಾರಿಗಳು ಹಾಗೂ ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ವಿಎಸ್‌ಎಸ್‌ಎನ್ ಅಧ್ಯಕ್ಷ ನಂದೀಶ್ ಗೌಡಸ್ವಾಮಿ, ನೂರಾರು ವರ್ಷಗಳ ಇತಿಹಾಸವಿರುವ ಶ್ರೀ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಪ್ರತಿವರ್ಷ ಹಿಂದೂ ಪಂಚಾಂಗ ಪ್ರಕಾರ ನಿಗದಿ ಪಡಿಸಿದ ಮುಹೂರ್ತದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಗುತಿತ್ತು. ಆದರೆ, ಈ ವರ್ಷ ನಡೆದ ರಥೋತ್ಸವದಲ್ಲಿ ಶಾಸಕ ಇಕ್ಬಾಲ್‌ ಹುಸೇನ್ ರವರು ನಾನು ಬರುವವರೆಗೆ ರಥೋತ್ಸವಕ್ಕೆ ಚಾಲನೆ ನೀಡಬಾರದು ಎಂದು ಹುಕುಂ ಹೊರಡಿಸಿದ್ದಾರೆ. ಈ ಕಾರಣಕ್ಕೆ ಮುಜರಾಯಿ ಇಲಾಖೆ ಅಧಿಕಾರಿಗಳು ಸ್ಥಳೀಯ ಕಾಂಗ್ರೆಸ್‌ ನವರ ಮಾತು ಕೇಳಿಕೊಂಡು ಶಾಸಕರು ಬರುವವರೆಗೆ ರಥೋತ್ಸವಕ್ಕೆ ಚಾಲನೆ ನೀಡದೆ ಶುಭ ಮುಹೂರ್ತ ಮೀರಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಿದ್ದೆ ವಿಘ್ನ ಸಂಭವಿಸಲು ಕಾರಣ ಎಂದು ದೂರಿದರು.

ನಿಗದಿತ ಲಗ್ನದಲ್ಲಿ ರಥೋತ್ಸವ ಆರಂಭಿಸದೆ 25 ನಿಮಿಷಗಳ ಕಾಲ ವಿಳಂಬ ಮಾಡಿದರು. ಇದರ ಪರಿಣಾಮ ರಥದ ಚಕ್ರದಲ್ಲಿ ಬಿರುಕು ಕಾಣಿಸಿಕೊಂಡಿತು. ಅಲ್ಲದೆ ವ್ಯಕ್ತಿಯೊಬ್ಬರು ರಥದ ಚಕ್ರಕ್ಕೆ ಸಿಲುಕಿ ಗಾಯಗೊಂಡರು. ಅಧಿಕಾರಿಗಳು ಮತ್ತು ಶಾಸಕರ ಬೇಜವಾಬ್ದಾರಿ ನಡವಳಿಕೆಯಿಂದಾಗಿ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ. ಈ ಕೂಡಲೇ ಇದರ ಹೊಣೆಯನ್ನು ಕಾರ್ಯನಿರ್ವಾಹಕ ಅಧಿಕಾರಿಗಳೇ ಹೊರಬೇಕು ಎಂದು ಕಿಡಿಕಾರಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಮಾತನಾಡಿ, ಇದುವರೆಗೆ ಶ್ರೀ ರೇವಣಸಿದ್ದೇಶ್ವರ ರಥೋತ್ಸವದಲ್ಲಿ ಯಾವುದೇ ಅವಘಡಗಳು ಸಂಭವಿಸಿರಲಿಲ್ಲ. ದೇವಾಲಯದ ಸೂಕ್ಷ್ಮತೆಗಳನ್ನು ಕಡೆಗಣಿಸಿ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಆಗಮನದ ನಿರೀಕ್ಷೆಯಲ್ಲಿ ತಡವಾಗಿ ರಥ ಪ್ರಾರಂಭಿಸಿದ್ದು ಅಕ್ಷಮ್ಯ ಅಪರಾಧ. ಶಿಷ್ಟಾಚಾರ ಪಾಲನೆ ಮಾಡಲಿ ಅಭ್ಯಂತರ ಇಲ್ಲ. ಆದರೆ ರಥೋತ್ಸವ ವಿಳಂಭ ಮಾಡಿದ್ದು ಸರಿಯಲ್ಲ ಎಂದು ಹೇಳಿದರು.

ಮುಖಂಡ ಶಿವಲಿಂಗಯ್ಯ ಮಾತನಾಡಿ , ರಥೋತ್ಸವ ಆರಂಭವಾದ ತಕ್ಷಣ ತೇರಿಗೆ ಕಟ್ಟಿದ ಹೂ ಮಾಲೆಗಳು ಕಳಚಿ ಬಿದ್ದವು. ವ್ಯಕ್ತಿಯೊಬ್ಬನಿಗೆ ಗಾಯವಾಗಿ ಆಸ್ಪತ್ರೆಗೆ ಸೇರಿದ್ದಾನೆ. ಆತನಿಗೆ ಸಾಂತ್ವನ ಹೇಳಿ ಅವರಿಗೆ ಚಿಕಿತ್ಸೆ ವೆಚ್ಚ ನೀಡುವ ಕೆಲಸವನ್ನು ತಾಲೂಕು ಆಡಳಿತ ಮತ್ತು ಶಾಸಕರು ಮಾಡಿಲ್ಲ. ಈ ಕೂಡಲೇ ರಥೋತ್ಸವ ವಿಳಂಬಕ್ಕೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ದೇವಾಲಯ ವ್ಯವಸ್ಥಾಪನಾ ಸಮಿತಿ ವಿರುದ್ಧ ಮುಜರಾಯಿ ಇಲಾಖೆ ಕ್ರಮ ಜರುಗಿಸಬೇಕು. ಇದಕ್ಕೆ ನೇರ ಕಾರಣವಾಗಿರುವ ಶಾಸಕರು ಬಹಿರಂಗವಾಗಿ ರೇವಣ್ಣಸಿದ್ದೇಶ್ವರಸ್ವಾಮಿಗೆ ತಪ್ಪೊಪ್ಪಿಗೆ ಸೇವೆ ನಡೆಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಎ.ಸಿ.ಕೆಂಪಯ್ಯ, ತಮ್ಮಣ್ಣ, ಶಿವಲಿಂಗಯ್ಯ, ಗುನ್ನೂರು ದೇವರಾಜು, ಯೋಗೇಶ್, ಆನಂದ್, ಗೋಪಾಲ್‌ ನಾಯ್ಕ, ನವೀನ್, ಪ್ರಶಾಂತ, ಸಂಜಯ್, ವಿನೋದ್ ಮತ್ತಿತರರು ಭಾಗವಹಿಸಿದ್ದರು.

4ಕೆಆರ್ ಎಂಎನ್ 2.ಜೆಪಿಜಿ

ರಾಮನಗರ ತಾಲೂಕು ಅವ್ವೇರಹಳ್ಳಿಯ ರೇವಣಸಿದ್ದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಕಚೇರಿ ಎದುರು ಸೇವಾ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.