ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ತಂದೆ ಇಲ್ಲದಿದ್ದರೂ ತಾಯಿಯೇ ಟೇಲರಿಂಗ್ ಕೆಲಸ ಮಾಡುತ್ತಾ ತನ್ನ ಮಗನ ಭವಿಷ್ಯ ರೂಪಿಸಿದ್ದಾಳೆ. ಇಂದು ಮಗ ಏಳು ಸ್ವರ್ಣ ಪದಕಗಳನ್ನು ಕೊರಳಿಗೇರಿಸಿಕೊಳ್ಳುವ ಮೂಲಕ ಸಾರ್ಥಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾನೆ.ಬಡತನ ಇದ್ದರೂ ಅದನ್ನು ಎಂದಿಗೂ ತೋರಿಸದ ಮಗನ ಭವಿಷ್ಯ ರೂಪಿಸಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಆ ಶ್ರಮಕ್ಕೆ ಈಗ ಪ್ರತಿಫಲ ಸಿಕ್ಕಿದ್ದು ಶುಕ್ರವಾರ ವಿಟಿಯುನಲ್ಲಿ ನಡೆದ 25ನೇ ವರ್ಷದ ವಾರ್ಷಿಕ ಘಟಿಕೋತ್ಸವದಲ್ಲಿ ಎಂಜಿನಿಯರಿಂಗ್ ಮೆಕ್ಯಾನಿಕಲ್ ವಿಭಾಗದಲ್ಲಿ 7 ಚಿನ್ನದ ಪದಕ ಪಡೆದಿದ್ದಾನೆ ಯುವಕ. ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕ್ಯಾನಿಕಲ್ ವಿಭಾಗದ ಕಾರ್ತಿಕ್ ಎಲ್. ಸಾಧನೆ ಮಾಡಿದ ವಿದ್ಯಾರ್ಥಿ. ಈತನ ತಾಯಿ ಭಾಗ್ಯ ಮಗನ ಸಾಧನೆ ಕಂಡು ಕಣ್ಣೀರಾಗಿದ್ದಾಳೆ. ಇದೆ ವೇಳೆ ತಾಯಿ ಕೈಗೆ ಚಿನ್ನದ ಪದಕ ಕೊಟ್ಟು ಕಾಲಿಗೆ ನಮಸ್ಕರಿಸಿ ಕಾರ್ತಿಕ ಆಶೀರ್ವಾದ ಪಡೆದಿದ್ದಾನೆ. ಕಾರ್ತಿಕ್ ಎಲ್. ಬೆಂಗಳೂರು ದಕ್ಷಿಣ ಜಿಲ್ಲೆಯ ತಾವರೆಕೆರೆ ಹೋಬಳಿಯ ದೇವಮಾಚೋಹಳ್ಳಿ ನಿವಾಸಿ. ಕಾರ್ತಿಕ್ ತಂದೆ ಅನಾರೋಗ್ಯದಿಂದ ತೀರಿಕೊಂಡಿದ್ದಾರೆ. ಈತನ ತಾಯಿ ಭಾಗ್ಯ ಅವರು ಗಾರ್ಮೆಂಟ್ನಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದಾರೆ.ಕಾರ್ತಿಕ್ ಮಾಧ್ಯಮದವರೊಂದಿಗೆ, ನನ್ನ ತಂದೆ ಸೆಕ್ಯೂರಿಟಿ ಗಾರ್ಡ್ ಆಗಿದ್ದರು. ಸ್ಟ್ರೋಕ್ನಿಂದಾಗಿ ಅವರು ನಮ್ಮ ಜೊತೆಗಿಲ್ಲ. ಬಡತನ ಇದ್ದರೂ ತಾಯಿ ನನಗಾಗಿ ಸಾಕಷ್ಟು ಕಷ್ಟ ಅನುಭವಿಸಿದ್ದಾಳೆ. ಓದಿನಲ್ಲಿ ಒಂದಿಷ್ಟು ಕಡಿಮೆ ಆಗದಂತೆ ಓದಿಸಿದ್ದಾರೆ. ಈಗ ತೇಜಸ್ ನೆಟವರ್ಕ್ಸ್‌ನಲ್ಲಿ ಕೆಲಸ ಮಾಡುತ್ತಿರುವೆ ಎಂದಿರುವ ಅವರು ಇನ್ನು ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಇಚ್ಛೆ ಅವರದ್ದು. ಕಾರ್ತಿಕನ ತಾಯಿ ಭಾಗ್ಯ ಕೂಡ ಮಗನ ಸಾಧನೆ ಕಂಡು ಹೆಮ್ಮೆ ಪಡುತ್ತಿದ್ದಾರೆ.