ತಣ್ಣೀರುಬಾವಿಯಲ್ಲಿ ಇಂದು, ನಾಳೆ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

| Published : Feb 10 2024, 01:45 AM IST

ಸಾರಾಂಶ

‘ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ’ ಎಂಬ ಧ್ಯೇಯ ವಾಕ್ಯದಲ್ಲಿ ಸಾಮರಸ್ಯ, ಐಕ್ಯತಾ ಭಾವಗಳಿಂದ ಗಾಳಿಪಟ ಹಾರಾಟ ನಡೆಯಲಿದೆ. ಸಾವಿರಕ್ಕೂ ಅಧಿಕ ವಿವಿಧ ವಿನ್ಯಾಸ, ಗಾತ್ರಗಳಿಂದ ಕೂಡಿದ ಗಾಳಿಪಟಗಳು ಬಾನಂಗಳದಲ್ಲಿ ನೋಡುಗರ ಕಣ್ಣಿಗೆ ಹಬ್ಬದ ವಾತಾವರಣ ಸೃಷ್ಟಿಸಲಿವೆ.

ಕನ್ನಡಪ್ರಭ ವಾರ್ತೆ ಮಂಗಳೂರುಟೀಮ್‌ ಮಂಗಳೂರು ತಂಡದ ಆಶ್ರಯದಲ್ಲಿ ಏಳನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಗರದ ಹೊರವಲಯದ ತಣ್ಣೀರುಬಾವಿಯ ಕಡಲತೀರದಲ್ಲಿ ಫೆ.10,11ರಂದು ನಡೆಯಲಿದೆ.ಈ ಉತ್ಸವದಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳಲಿದ್ದು, ಇದಕ್ಕಾಗಿ ಕಡಲ ತಡಿಯನ್ನು ಸರ್ವಸಜ್ಜುಗೊಳಿಸಲಾಗಿದೆ. ಇದರಲ್ಲಿ ಭಾಗವಹಿಸುವ ವಿವಿಧ ದೇಶಗಳ ಪ್ರತಿನಿಧಿಗಳು ಈಗಾಗಲೇ ಮಂಗಳೂರಿಗೆ ಆಗಮಿಸಿದ್ದಾರೆ, ಇಂಡೋನೇಷ್ಯಾ, ಯುಕ್ರೇನ್‌, ಥಾಯ್ಲೆಂಡ್‌, ಹಾಂಕಾಂಗ್‌, ಶ್ರೀಲಂಕಾ ಸೇರಿದಂತೆ ವಿದೇಶಿ ಗಾಳಿಪಟ ಹಾರಾಟಗಾರರು ಮಂಗಳೂರಿಗೆ ಬಂದಿಳಿದಿದ್ದಾರೆ. ಭಾರತದ ಮಹಾರಾಷ್ಟ್ರ, ಗುಜರಾತ್‌, ತೆಲಂಗಾಣ, ಕೇರಳ ಮೊದಲಾದ ರಾಜ್ಯಗಳ ಗಾಳಿಪಟ ತಂಡಗಳೂ ಈ ಉತ್ಸವದಲ್ಲಿ ಪಾಲ್ಗೊಳ್ಳಲಿವೆ ಎಂದು ಟೀಮ್‌ ಮಂಗಳೂರು ತಂಡದ ಸ್ಥಾಪಕ ಬಿ.ಸರ್ವೇಶ್‌ ರಾವ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಎರಡು ದಿನಗಳ ಕಾಲ ಸಂಜೆ 3ರಿಂದ ರಾತ್ರಿ 7 ಗಂಟೆವರೆಗೆ ಗಾಳಿಪಟ ಹಾರಾಟ ಮತ್ತು ಪ್ರದರ್ಶನ ಇರಲಿದೆ. ಬಳಿಕ ವಿದ್ಯುತ್‌ ದೀಪಗಳ ಬಣ್ಣಗಳ ಬೆಳಕಿನಲ್ಲಿಯೂ ಗಾಳಿಪಟ ಹಾರಾಟಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದರು.ಸಾಮರಸ್ಯದ ಗಾಳಿಪಟ: ‘ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ’ ಎಂಬ ಧ್ಯೇಯ ವಾಕ್ಯದಲ್ಲಿ ಸಾಮರಸ್ಯ, ಐಕ್ಯತಾ ಭಾವಗಳಿಂದ ಗಾಳಿಪಟ ಹಾರಾಟ ನಡೆಯಲಿದೆ. ಸಾವಿರಕ್ಕೂ ಅಧಿಕ ವಿವಿಧ ವಿನ್ಯಾಸ, ಗಾತ್ರಗಳಿಂದ ಕೂಡಿದ ಗಾಳಿಪಟಗಳು ಬಾನಂಗಳದಲ್ಲಿ ನೋಡುಗರ ಕಣ್ಣಿಗೆ ಹಬ್ಬದ ವಾತಾವರಣ ಸೃಷ್ಟಿಸಲಿವೆ. ಎಂಆರ್‌ಪಿಎಲ್‌- ಒಎನ್‌ಜಿಸಿ ಸಂಸ್ಥೆಯ ಪ್ರಾಯೋಜಕತ್ವ ಹಾಗೂ ದ.ಕ. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯ ಸಹಕಾರದಲ್ಲಿ ಈ ಬಾರಿ ಉತ್ಸವ ನಡೆಯುತ್ತಿದೆ ಎಂದು ಸರ್ವೇಶ್‌ ರಾವ್‌ ವಿವರಿಸಿದರು.ತಂಡದ ಪ್ರಮುಖರಾದ ಪ್ರಶಾಂತ್‌ ಉಪಾಧ್ಯಾಯ ಮಾತನಾಡಿ, ಫೆ.10ರಂದು ಸಂಜೆ 5 ಗಂಟೆಗೆ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಉದ್ಘಾಟನೆ ನೆರವೇರಿಸಲಿದ್ದು, ಎನ್‌ಎಂಪಿಎ ಅಧ್ಯಕ್ಷ ವೆಂಕಟ್ರಮಣ ಅಕ್ಕರಾಜು, ಮೆಡೆಕ್‌ ಮೆಡಿಕೇರ್‌ನ ದೀಪಕ್‌ ಶೆಣೈ ಭಾಗವಹಿಸಲಿದ್ದಾರೆ. ಅಗತ್ಯ ಭದ್ರತಾ ವ್ಯವಸ್ಥೆ, ಪಾರ್ಕಿಂಗ್‌ ಸೌಲಭ್ಯದ ಜತೆಗೆ ಕೆಐಎಸಿಎಲ್‌ ಬಳಿಯಿಂದ ತಣ್ಣೀರುಬಾವಿ ಬೀಚ್‌ವರೆಗೆ ಆರು ಬಸ್‌ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಸುಲ್ತಾನ್‌ ಬತ್ತೇರಿಯಿಂದ ದೋಣಿಯಲ್ಲಿ ಬರುವವರಿಗೆ ರಾತ್ರಿ 10 ಗಂಟೆಯವರೆಗೂ ದೋಣಿ ವ್ಯವಸ್ಥೆ ಮಾಡಲಾಗಿದೆ. ತುರ್ತು ಸಂಪರ್ಕ ಕೌಂಟರ್‌, ಆ್ಯಂಬುಲೆನ್ಸ್‌, ಅಗ್ನಿಶಾಮಕ ಕೌಂಟರ್‌, ಆಹಾರ ಮಳಿಗೆ, ಗಾಳಿಪಟ ಖರೀದಿಸುವರಿಗೆ ಕೈಟ್‌ ಸ್ಟಾಲ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ದಿನೇಶ್‌ ಹೊಳ್ಳ, ಸುಭಾಷ್‌ ಪೈ, ಪ್ರಾಣ್‌ ಹೆಗ್ಡೆ ಇದ್ದರು.ಹೊಸ ರೂಪದಲ್ಲಿ ಕಥಕ್ಕಳಿ ಗಾಳಿಪಟ: ಟೀಮ್‌ ಮಂಗಳೂರು ತಂಡದ ಕಥಕ್ಕಳಿ ಗಾಳಿಪಟ ಭಾರತದಲ್ಲಿ ಅತಿ ದೊಡ್ಡ ಗಾಳಿಪಟವಾಗಿ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ಸುಮಾರು 15 ವರ್ಷಗಳಿಂದ ಹಾರಾಟ ನಡೆಸಿದ ಈ ಗಾಳಿಪಟವನ್ನು ಪುನರ್‌ ರೂಪಿಸಲಾಗಿದೆ. ಅಲ್ಲದೆ ಯಕ್ಷಗಾನ, ಭರತನಾಟ್ಯ, ಭೂತಾರಾಧನೆಯ ಗಾಳಿಪಟಗಳೂ ತಂಡದ ವಿಶೇಷವಾಗಿದ್ದು, ಮುಂದೆ ಕಂಬಳ ಮತ್ತು ಹಂಪಿ ರಥದ ಗಾಳಿಪಟ ತಯಾರಿಯ ಇರಾದೆಯೂ ಇದೆ ಎಂದು ಕಲಾವಿದ ದಿನೇಶ್‌ ಹೊಳ್ಳ ತಿಳಿಸಿದರು.ಸಾಂಪ್ರದಾಯಿಕ, ಏರೋಫಾಯಿಲ್‌ ಗಾಳಿಪಟಗಳು ಗಾಳಿಪಟ ಉತ್ಸವದಲ್ಲಿ ಭಾಗವಹಿಸಲಿವೆ. ಟೀಮ್‌ ಮಂಗಳೂರು ತಂಡದ ಸಾಂಪ್ರದಾಯಿಕ ಗಾಳಿಪಟಗಳ ಜತೆಗೆ ದೇಶ ವಿದೇಶಗಳ ಅಧುನಿಕ ಶೈಲಿ ಹಾಗೂ ವಿನ್ಯಾಸದಿಂದ ಕೂಡಿದ ಏರೋಫಾಯಿಲ್‌ ಗಾಳಿಪಟಗಳು ಕೂಡ ಹಾರಾಡಲಿವೆ ಎಂದರು.