ಆಲೂರು ತಾಲೂಕಲ್ಲಿ ಶೇ.70 ರಷ್ಟು ಮತದಾನ

| Published : Apr 27 2024, 01:20 AM IST

ಆಲೂರು ತಾಲೂಕಲ್ಲಿ ಶೇ.70 ರಷ್ಟು ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಆಲೂರು ತಾಲೂಕಿನಾದ್ಯಂತ ಶೇಕಡ 70ರಷ್ಟು ಮತದಾನವಾಗಿದ್ದು, ಬೆಳಿಗ್ಗೆ 7 ಗಂಟೆಯಿಂದಲೇ ಪ್ರಾರಂಭವಾದ ಮತದಾನ ಸಂಜೆ ಮುಕ್ತಾಯದ ವೇಳೆಗೆ ಶೇಕಡ 70ಕ್ಕೂ ಮತದಾನವಾಯಿತು.

ಲೋಕಸಭೆ ಚುನಾವಣೆ । ಬೆಳಿಗ್ಗೆ 7ರಿಂದ ಆರಂಭವಾಗಿ ಸಂಜೆ ಮುಕ್ತಾಯ । 95 ಮತಗಟ್ಟೆಗಳಲ್ಲಿ ಹಕ್ಕು ಚಲಾಯಿಸಿದ ಮತದಾರ

ಕನ್ನಡಪ್ರಭ ವಾರ್ತೆ ಆಲೂರು

ಲೋಕಸಭೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ತಾಲೂಕಿನಾದ್ಯಂತ ಶೇಕಡ 70ರಷ್ಟು ಮತದಾನವಾಗಿದ್ದು, ಬೆಳಿಗ್ಗೆ 7 ಗಂಟೆಯಿಂದಲೇ ಪ್ರಾರಂಭವಾದ ಮತದಾನದಲ್ಲಿ ಬೆಳಗ್ಗೆ ನಿಧಾನ ಗತಿಯಲ್ಲಿ ಪ್ರಾರಂಭವಾದ ಮತದಾನ ಬಿಸಿಲು ಏರುತ್ತ ತುಸು ಚುರುಕುಗೊಂಡು ಸಂಜೆ ಮುಕ್ತಾಯದ ವೇಳೆಗೆ ಶೇಕಡ 70ಕ್ಕೂ ಮತದಾನವಾಗಿದೆ.

ಚಿಗಳೂರು ಮತಗಟ್ಟೆ ಸಂಖ್ಯೆ 141 ಮತ್ತು ಆಲೂರು ಪೂರ್ವಭಾಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 59ರಲ್ಲಿ ಇವಿಎಂ ಮತ ಯಂತ್ರಗಳಲ್ಲಿ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ, ತಕ್ಷಣ ಬದಲಾಯಿಸಿ ಮತದಾನಕ್ಕೆ ಅನುಕೂಲ ಕಲ್ಪಿಸಲಾಯಿತು. ಉಳಿದಂತೆ ತಾಲೂಕಿನ ಎಲ್ಲ 95 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆಯಿತು.

ಕಣತೂರು ಮತಗಟ್ಟೆಯಲ್ಲಿ 1300 ಕ್ಕೂ ಹೆಚ್ಚು ಮತದಾರರಿರುವುದರಿಂದ ಮತಗಟ್ಟೆ ವ್ಯಾಪ್ತಿಯೊಳಗಿರುವ ಮತದಾರರಿಗೆ ಟೋಕನ್ ನೀಡಿ, ಸಮಯ ಮೀರಿದ ನಂತರವೂ ಮತದಾನಕ್ಕೆ ಅನುಕೂಲ ಕಲ್ಪಿಸಲಾಯಿತು ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ನಂದಕುಮಾರ್ ತಿಳಿಸಿದರು.

ಸುಬ್ರಹ್ಮಣ್ಯಮಠ ಹಾಗೂ ಹ್ಯಾರಗಳಲೆ ಗ್ರಾಮದ ಆಸುಪಾಸಿನಲ್ಲಿ ಒಂಟಿ ಕಾಡಾನೆ ಓಡಾಡುತ್ತಿತ್ತು. ಈ ಪ್ರದೇಶಗಳಲ್ಲಿ ವಲಯ ಅರಣ್ಯಾಧಿಕಾರಿ ಯತೀಶ್ ಮತ್ತು ತಂಡದವರು ಮತದಾರರು ಮತಗಟ್ಟೆಗಳಿಗೆ ಬಂದು ಮತದಾನ ಮಾಡಿ ಹೋಗಲು ಸುರಕ್ಷತೆ ಕಾಪಾಡಿದರು.

ಬೆಳಿಗ್ಗೆ 7 ರಿಂದ 11 ಗಂಟೆವರೆಗೆ ಮತದಾರರು ಚುರುಕಾಗಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಮಧ್ಯಾಹ್ನ ಒಂದು ಗಂಟೆಯಿಂದ ನಾಲ್ಕು ಗಂಟೆವರೆಗೆ ಬಿಸಿಲಿನ ತಾಪದಿಂದ ಮತದಾನ ಮಂದಗತಿಯಲ್ಲಿ ಸಾಗಿತು. ಆದರೂ ಮಧ್ಯಾಹ್ನ ಒಂದು ಗಂಟೆ ವೇಳೆಗೆ ಶೇ. 50ರಷ್ಟು ಮತದಾನವಾಗಿತ್ತು.

ಮತಗಟ್ಟೆಗಳಲ್ಲಿ ಬಿಸಿಲಿನ ತಾಪದಲ್ಲಿ ಮತದಾರರು ಬಳಲದಂತೆ ಎಲ್ಲ ಮತಗಟ್ಟೆಗಳ ಸಮೀಪ ಶಾಮಿಯಾನ ಹಾಕಿ ನೆರಳು ಮಾಡಲಾಗಿತ್ತು. ಅಂಗವಿಕಲರಿಗೆ ವಿಶೇಷವಾಗಿ ತ್ರಿಚಕ್ರ ಸೈಕಲ್ ವ್ಯವಸ್ಥೆ, ಕುಡಿಯುವ ನೀರಿನೊಂದಿಗೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮತದಾನ ಕೇಂದ್ರದೊಳಗೆ ಪ್ರವೇಶ ಮಾಡಿದ ಮತದಾರರ ಬಳಿ ಇದ್ದ ಮೊಬೈಲನ್ನು ಪೊಲೀಸರು ವಶಪಡಿಸಿಕೊಂಡು, ಮತದಾನದ ನಂತರ ವಾರಸುದಾರರಿಗೆ ಹಿಂದಿರುಗಿಸಿದರು.

ಚುನಾವಣೆಗೆ ಸ್ಪರ್ಧಿಸಿರುವ ಆಲೂರು ತಾಲೂಕು ನಿವಾಸಿ ಹೇಮಂತ ಗವೀಶ್ ಭರತೂರು ಮತಗಟ್ಟೆ ಸಂಖ್ಯೆ 230ರಲ್ಲಿ, ಮಾಜಿ ಶಾಸಕ ಜೆಡಿಎಸ್ ಮುಖಂಡ ಎಚ್. ಕೆ. ಕುಮಾರಸ್ವಾಮಿಯವರು ಪತ್ನಿ ಚಂಚಲ ಕುಮಾರಸ್ವಾಮಿ ಜೊತೆ ಬೋಸ್ಮಾನಹಳ್ಳಿ ಮತಗಟ್ಟೆ ಸಂಖ್ಯೆ 199 ರಲ್ಲಿ ಮತದಾನ ಮಾಡಿದರು. ಬಸವೇಶಪುರ ಗ್ರಾಮದ ವಿಕಲಚೇತನ ಸತೀಶ್ ಬ್ಯಾಬಕಾಲೋನಿ ಮತಗಟ್ಟೆಯಲ್ಲಿ ವ್ಹೀಲ್ ಚೇರ್ ಮೂಲಕ ಮತಗಟ್ಟೆಗೆ ಬಂದು ಮತದಾನ ಮಾಡಿದರು.

ಕಣತೂರು ಮತಗಟ್ಟೆಯಲ್ಲಿ 1300ಕ್ಕೂ ಹೆಚ್ಚು ಮತದಾರರು ಇರುವುದರಿಂದ ಎರಡು ಮತಗಟ್ಟೆಗಳ ಅವಶ್ಯಕವಿದೆ. ಐದು ವರ್ಷಗಳ ಹಿಂದೆ ಎರಡು ಮತಗಟ್ಟೆಗಳು ಇದ್ದವು. ಆದರೆ ಒಂದು ಮತಗಟ್ಟೆಯನ್ನು ಮುಚ್ಚಲಾಗಿರುವುದರಿಂದ ಬಿರುಸಿನ ಮತದಾನ ನಡೆದರೂ 6 ಗಂಟೆ ವೇಳೆಗೆ ಎಲ್ಲ ಮತದಾರರು ಮತದಾನ ಮಾಡಲು ಅವಕಾಶವಾಗುತ್ತಿಲ್ಲ. ಮುಂದಿನ ಚುನಾವಣೆ ವೇಳೆಗೆ ಮತ್ತೊಂದು ಮತಗಟ್ಟೆ ತೆರೆಯಬೇಕೆಂದು ಮತದಾರರ ಪರವಾಗಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಟರಾಜ್ ನಾಕಲಗೂಡು ಆಗ್ರಹಿಸಿದರು.

ಆಲೂರಲ್ಲಿ ಪಕ್ಷೇತರ ಅಭ್ಯರ್ಥಿ ಹೇಮಂತ್‌ ಗವೀಶ್‌ ಭರತೂರು ಮತಗಟ್ಟೆಯಲ್ಲಿ ಮತ ಚಲಾಯಿಸಿದರು