ರೋಣ: ತಾಲೂಕಿನ ಮಾಳವಾಡ ಗ್ರಾಮದಲ್ಲಿ ಅಂತ್ಯಕ್ರಿಯೆಯಲ್ಲಿ ಅನ್ಯ ಸಮುದಾಯದವರು ಭಾಗವಹಿಸಲಿಲ್ಲ ಎಂಬ ಕಾರಣಕ್ಕೆ ಬುಧವಾರ ಸಾಯಂಕಾಲ ಎರಡು ಗುಂಪುಗಳ ಮಧ್ಯೆ ಹೊಡೆದಾಟ ನಡೆದಿದ್ದು, ಘರ್ಷಣೆಯಲ್ಲಿ ಹಲವರು ಗಾಯಗೊಂಡಿದ್ದಾರೆ.ಗ್ರಾಮದ ಹೊಳೆಬಸಯ್ಯ ಹಿರೇಮಠ ಎಂಬವರು ಮಂಗಳವಾರ ಮೃತರಾಗಿದ್ದು, ಮೃತನ ಅಂತ್ಯಕ್ರಿಯೆಯಲ್ಲಿ ಅದೇ ಗ್ರಾಮದ ಕೆಲವರು ಭಾಗವಹಿಸಲು ನಿರಾಕರಿಸಿದ್ದೇ ಘಟನೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಕಳೆದ ಒಂದು ವರ್ಷದಿಂದ ಹೊಳೆಬಸಯ್ಯ ಹಿರೇಮಠ ಸಂಬಂಧಿಕರು ಗ್ರಾಮದಲ್ಲಿನ ಮದುವೆ ಶಾಸ್ತ್ರ, ಗೃಹಪ್ರವೇಶ ಹೊರತುಪಡಿಸಿ ಅಂತ್ಯಕ್ರಿಯೆ ವಿಧಾನ, ಶಿವಗಣರಾಧನೆ ಶಾಸ್ತ್ರಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಇದರಿಂದ ಆಗಾಗ್ಗೆ ಒಳಗೊಳಗೆ ಮುಸುಕಿನ ಬೆಳವಣಿಗೆಗಳು ನಡೆಯುತ್ತಿದ್ದವು. ಮೃತ ಹೊಳೆಬಸಯ್ಯ ಹಿರೇಮಠ ಅಂತ್ಯಕ್ರಿಯೆಯಲ್ಲಿ ಗ್ರಾಮದ ಅನ್ಯ ಸಮುದಾಯದವರು ಭಾಗವಹಿಸದೆ ದೂರ ಉಳಿದಿದ್ದು, ವಿವಾದ ಉಂಟಾಗಲು ಕಾರಣವಾಗಿದೆ.ಈ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ಮಧ್ಯೆ ಬುಧವಾರ ವಾಗ್ವಾದ ನಡೆದು ಪರಸ್ಪರ ಹೊಡೆದಾಡಿದ್ದಾರೆ. ಘಟನೆಯಲ್ಲಿ ಗ್ರಾಮದ ಪ್ರವೀಣ ಚಲವಾದಿ, ಬಸವರಾಜ ಪಾಟೀಲ, ಮುತ್ತಪ್ಪ ಚಲವಾದಿ, ಮಲ್ಲಿಕಾರ್ಜುನ ಪಾಟೀಲ ಎಂಬ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ರೋಣದ ಭಾರತರತ್ನ ಡಾ. ಭೀಮಸೇನ ಜೋಶಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.ರೋಣ ಠಾಣೆ ಪಿಎಸ್ಐ ಪ್ರಕಾಶ ಬಣಕಾರ, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ ಆಲೂರ ಭೇಟಿ ನೀಡಿದ್ದು, ಗಾಯಾಳುಗಳಿಂದ ಮಾಹಿತಿ ಪಡೆದುಕೊಂಡರು.ನಾಳೆ 57ನೇ ಜೀವನ ದರ್ಶನ ಪ್ರವಚನ ಮಾಲಿಕೆ
ಗದಗ: ವಿವೇಕಾನಂದ ನಗರದ ಕಾಶಿ ವಿಶ್ವನಾಥ ದೇವಸ್ಥಾನದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಭವನದಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯಿಂದ 57ನೇ ಜೀವನ ದರ್ಶನ ಪ್ರವಚನ ಮಾಲಿಕೆ ಹಾಗೂ ಕಾಶಿ ವಿಶ್ವನಾಥನ ಪಾಲಕಿ ಸೇವೆ ಏ. 17ರಂದು ಸಂಜೆ 6.30ಕ್ಕೆ ಜರುಗಲಿದೆ.ಸಾನ್ನಿಧ್ಯವನ್ನು ಗುಳೇದಗುಡ್ಡದ ಒಪ್ಪತ್ತೇಶ್ವರ ಸಂಸ್ಥಾನಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎ.ಟಿ. ನರೇಗಲ್ಲ ವಹಿಸುವರು. ಸಮಿತಿಯ ಗೌರವಾಧ್ಯಕ್ಷ ಜಿ.ಜಿ. ಕುಲಕರ್ಣಿ, ಉಪಾಧ್ಯಕ್ಷ ಆರ್.ಆರ್. ಕಾಶಪ್ಪನವರ ಉಪಸ್ಥಿತರಿರುವರು.ಪ್ರಸಾದ ಸೇವೆಯನ್ನು ನಗರಸಭೆಯ ಮಾಜಿ ಉಪಾಧ್ಯಕ್ಷ ಶಂಕರ ಹಾನಗಲ್ಲ, ಸೋಲಾರ ಪ್ರೋಜೆಕ್ಟನ್ ಚೀಫ್ ಮ್ಯಾನೇಜರ್ ಟಿ. ಕಲ್ಯಾಣ ಚಕ್ರವರ್ತಿ, ಹುಲಕೋಟಿಯ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ವಿ. ಪಾಟೀಲ ವಹಿಸುವರು. ಈರನಗೌಡ ಮಣಕವಾಡ, ಸಂಕೇತ ಮಸನಿ ಹಾಗೂ ವಿಠ್ಠಲ ಹೂಗಾರ ಅವರಿಂದ ಸಂಗೀತವಿದೆ ಎಂದು ಸಮಿತಿ ಕಾರ್ಯದರ್ಶಿ ಕೆ.ಪಿ. ಗುಳಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.