ಕನ್ನಡಪ್ರಭ ವಾರ್ತೆ ಮಡಿಕೇರಿ
ಪೊನ್ನಂಪೇಟೆ ತಾಲೂಕಿನ ತೆರಾಲು, ಬಿರುನಾಣಿ, ಮರೆನಾಡು ಮತ್ತಿತರ ಪ್ರದೇಶಗಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶುಭ ಅವರು ಭೇಟಿ ನೀಡಿ ಕಾರ್ಮಿಕರ ಹಕ್ಕುಗಳ ಸಂಬಂಧ ಜಾಗೃತಿ ಮೂಡಿಸಿದರು.ಕಾರ್ಮಿಕರಿಗಾಗಿ ಸರ್ಕಾರದಿಂದ ಹಲವು ಕಾರ್ಯಕ್ರಮಗಳಿದ್ದು, ಪ್ರಮುಖವಾಗಿ ಪ್ರಧಾನಮಂತ್ರಿ ಶ್ರಮಯೋಗಿ ಮಾನ್‍ದನ್ ಯೋಜನೆ, ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ಯೋಜನೆ, ಅಸಂಘಟಿತ ವರ್ಗದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ, ಕಾರ್ಮಿಕ ಕಾಯ್ದೆಯಡಿ ನೋಂದಾಯಿತರಾದ ಕಾರ್ಮಿಕರಿಗೆ ಅಪಘಾತ ಪರಿಹಾರ ಸೌಲಭ್ಯ ಹೀಗೆ ಹಲವು ಕಾರ್ಯಕ್ರಮಗಳು ಇವೆ ಎಂದು ಮಾಹಿತಿ ನೀಡಿದರು.
ಮಕ್ಕಳನ್ನು ಕಡ್ಡಾಯವಾಗಿ ಹತ್ತಿರದ ಶಾಲೆಗಳಿಗೆ ಕಳುಹಿಸುವಂತಾಗಬೇಕು. ಜೊತೆಗೆ 5ನೇ ಮತ್ತು 6ನೇ ತರಗತಿಯಿಂದ ವಿದ್ಯಾರ್ಥಿ ನಿಲಯ ಹಾಗೂ ವಸತಿ ನಿಲಯ ಸೌಲಭ್ಯವಿದ್ದು, ಇವುಗಳನ್ನು ಬಳಸಿಕೊಂಡು ಶಿಕ್ಷಣಕ್ಕೆ ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದು ಶುಭ ಕರೆ ನಿಡಿದರು.ಸಮಾಜದಲ್ಲಿ ಆದಿವಾಸಿಗಳು ಇತರರಂತೆ ಬದುಕು ಕಟ್ಟಿಕೊಳ್ಳುವತ್ತ ಮನಸ್ಸು ಮಾಡಬೇಕು. ಆ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವತ್ತ ಗಮನಹರಿಸಬೇಕು. ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅವರು ಸಲಹೆ ಮಾಡಿದರು.
ರಾಷ್ಟ್ರದ ಅಭಿವೃದ್ಧಿ ಎಂದರೆ ಪ್ರತಿಯೊಬ್ಬರಿಗೂ ಸಹ ಕನಿಷ್ಠ ಸೌಲಭ್ಯ ತಲುಪಬೇಕು. ಜೊತೆಗೆ ತಕ್ಕ ಮಟ್ಟಿಗೆ ಸುಸ್ಥಿತಿಯಲ್ಲಿ ಜೀವನ ದೂಡಬೇಕು. ಪ್ರತಿಯೊಬ್ಬರೂ ಬದಲಾದಾಗ ರಾಷ್ಟ್ರದ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ಚಿಂತಿಸಬೇಕು ಎಂದು ಹೇಳಿದರು.
ತೆರಾಲು ಗ್ರಾಮದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಕಾರ್ಮಿಕ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಿದರು. ಮರೆನಾಡು ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಲಭ್ಯವಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಮುನ್ನಡೆಯಬೇಕು. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಮತ್ತು ಅಭಿವೃದ್ಧಿ ಕಾಣಲು ಸಾಧ್ಯ. ಆ ನಿಟ್ಟಿನಲ್ಲಿ ಶಾಲೆಯನ್ನು ಬಿಟ್ಟಿರುವ ಮಕ್ಕಳಿದ್ದಲ್ಲಿ ಹತ್ತಿರದ ಶಾಲೆಗೆ ಅಥವಾ ವಸತಿ ನಿಲಯಕ್ಕೆ ಸೇರ್ಪಡೆ ಮಾಡುವಂತಾಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭ ಕಾರ್ಮಿಕರಿಗೆ ಮೂಲ ಸೌಲಭ್ಯಗಳನ್ನು ನೀಡಬೇಕು. ಎಲ್ಲರಿಗೂ ಗೌರವಯುತವಾಗಿ ಬದುಕಲು ಅವಕಾಶವಿದ್ದು, ಅದನ್ನು ಉಲ್ಲಂಘಿಸಿದರೆ ಮಾನವ ಹಕ್ಕು ಉಲ್ಲಂಘನೆ ಮಾಡಿದಂತಾಗುತ್ತದೆ. ಕಾರ್ಮಿಕರು ಆರೋಗ್ಯಕರ ಜೀವನ ನಡೆಸಬೇಕು ಎಂದು ಸಲಹೆ ಮಾಡಿದರು.ಕಾರ್ಮಿಕ ಇಲಾಖೆ ಅಧಿಕಾರಿ ಎಂ.ಎಂ. ಯತ್ನಟ್ಟಿ ಮಾಹಿತಿ ನೀಡಿ, ಕಾರ್ಮಿಕ ಕಾಯ್ದೆಯಡಿ ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕರಿಗೆ (ಇಎಸ್‍ಐ ಮತ್ತು ಪಿಎಫ್ ಇಲ್ಲದ) ಹಲವು ಪರಿಹಾರದ ಸೌಲಭ್ಯಗಳಿವೆ ಎಂದು ತಿಳಿಸಿದರು. ಕಟ್ಟಡ ಹಾಗೂ ಇತರ ನಿರ್ಮಾಣ ಯೋಜನೆಯಡಿ ಜಿಲ್ಲೆಯಲ್ಲಿ 13,636 ಮಂದಿ ಸ್ಮಾರ್ಟ್ ಕಾರ್ಡ್ ಪಡೆದಿದ್ದಾರೆ. ಇ-ಶ್ರಮ್ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ 69,798 ಮಂದಿಗೆ ಸ್ಮಾರ್ಟ್ ಕಾರ್ಡ್ ಪಡೆದಿದ್ದಾರೆ. ಹಾಗೆಯೇ ದಿನಪತ್ರಿಕೆ ವಿತರಿಸುವ ಅಸಂಘಟಿತ ಕಾರ್ಮಿಕರಿಗೆ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಯಡಿ 48 ಮಂದಿ ಸ್ಮಾರ್ಟ್ ಕಾರ್ಡ್ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆಯಡಿ 56 ಮಂದಿ ಸ್ಮಾರ್ಟ್ ಕಾರ್ಡ್ ಪಡೆದಿದ್ದಾರೆ. ಪ್ರಧಾನಮಂತ್ರಿ ಶ್ರಮಯೋಗಿ ಮಾನ್‍ದನ್ ಪಿಂಚಣಿ ಯೋಜನೆಯಡಿ 1,483 ಮಂದಿ ಸ್ಮಾರ್ಟ್ ಕಾರ್ಡ್, ಅಂಬೇಡ್ಕರ್ ಸಹಾಯಹಸ್ತ ಯೋಜನೆಯಡಿ 4,514 ಮಂದಿ ಸ್ಮಾರ್ಟ್ ಕಾರ್ಡ್ ಪಡೆದಿದ್ದಾರೆ. ಹಾಗೆಯೇ ಖಾಸಗಿ ವಾಣಿಜ್ಯ ಚಾಲಕರಿಗೆ ಅಪಘಾತ ಪರಿಹಾರ ವಿಮಾ ಯೋಜನೆಯಡಿ 1,108 ಸ್ಮಾರ್ಟ್ ಕಾರ್ಡ್ ಇದುವರೆಗೆ ವಿತರಿಸಲಾಗಿದೆ ಎಂದ ಅವರು, ಬಾಲ ಕಾರ್ಮಿಕ ಪದ್ಧತಿ ನಿರ್ಮಾಲನೆ ಹಾಗೂ ಸರ್ಕಾರದಿಂದ ಮಕ್ಕಳಿಗೆ ದೊರೆಯುವ ವಿವಿಧ ಸೌಲಭ್ಯ ಮತ್ತಿತರ ಬಗ್ಗೆ ವಿವರಿಸಿದರು. ಕಾರ್ಮಿಕ ಕಾಯ್ದೆಯಡಿ ಸ್ಮಾರ್ಟ್ ಕಾರ್ಡ್ ವಿತರಿಸುವ ಕಾರ್ಯವು ಆನ್‍ಲೈನ್ ಮೂಲಕ ನಿರಂತರವಾಗಿ ನಡೆಯುಲಿದ್ದು, ಅರ್ಹರು ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಸಿ. ಮಾದಪ್ಪ, ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕರಾದ ಆರ್. ಶೀರಾಝ್ ಅಹಮದ್, ಮಕ್ಕಳ ರಕ್ಷಣಾ ಘಟಕದ ಕಾನೂನು ಸಲಹೆಗಾರರಾದ ಜೆ.ಆರ್. ತುಳಸಿ, ಪೊಲೀಸ್ ಇಲಾಖೆಯ ಇನ್‌ಸ್ಪೆಕ್ಟರ್ ಸುಮತಿ, ಬಿ.ಎಸ್. ಶಿವರುದ್ರ, ರಾಜೇಶ್, ಕೌಶಲ್ಯ, ಶಿಕ್ಷಕರು, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಜಯಪ್ಪ ಇತರರು ಇದ್ದರು.
