ಕೇಂದ್ರ ಸರ್ಕಾರ ಆದಿವಾಸಿ ಬುಡಕಟ್ಟು ಜನಾಂಗದ ಅಭಿವೃದ್ಧಿಯ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಮಾಜಿ ಸಚಿವ ಎಂ ಪಿ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕೇಂದ್ರ ಸರ್ಕಾರ ಆದಿವಾಸಿ ಬುಡಕಟ್ಟು ಜನಾಂಗದ ಅಭಿವೃದ್ಧಿಯ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಮಾಜಿ ಸಚಿವ ಎಂ ಪಿ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.ಅವರು ಕುಶಾಲನಗರದಲ್ಲಿ ವಾಸವಿ ಮಹಲ್ ಸಭಾಂಗಣದಲ್ಲಿ ನಡೆದ ಬಿರ್ಸಾ ಮುಂಡ ಅವರ 151ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಎಸ್ ಟಿ ಜನಾಂಗದ ಅಭಿವೃದ್ಧಿಯೊಂದಿಗೆ ಮುಖ್ಯ ವಾಹಿನಿಗೆ ತರಲು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಆದಿವಾಸಿ ಸಮುದಾಯದ ಏಳಿಗೆಗೆ ಹೋರಾಟ ಮಾಡಿ ಜೀವದಾನ ನೀಡಿರುವ ಬಿರ್ಸಮುಂಡ ಅವರ ಆದರ್ಶಗಳನ್ನು ಪಾಲಿಸಬೇಕಾಗಿದೆ. ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು ಸಮಾಜದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತಹ ಕೆಲಸವಾಗಬೇಕೆಂದು ಕರೆ ನೀಡಿದರು.ಸರ್ಕಾರದ ಮೂಲಕ ಜನಾಂಗದ ಅಭಿವೃದ್ಧಿಗಾಗಿ ಮೀಸಲಿರಿಸಿದ ಅನುದಾನಗಳ ಹಣ ದುರುಪಯೋಗವಾಗದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕಾಗಿದೆ ಎಂದು ಹೇಳಿದರು. ಪ್ರಸಕ್ತ ರಾಜ್ಯ ಸರ್ಕಾರ ಎಸ್ ಟಿ ಜನಾಂಗವನ್ನು ಮತ ಗಳಿಕೆಗಾಗಿ ಮಾತ್ರ ಗಮನಿಸುತ್ತಿದ್ದು ಜನಾಂಗದ ಏಳಿಗೆ ಬಗ್ಗೆ ಕಾಳಜಿ ಇಲ್ಲ ಎಂದು ಆರಂಭಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾಜಿ ಸ್ಪೀಕರ್ ಕೆ ಜಿ ಬೋಪಯ್ಯ ಅವರ ಮಾತನಾಡಿ, ಜನಾಂಗ ಬಾಂಧವರು ಯಾವುದೇ ಸಂದರ್ಭ ಅವಕಾಶಗಳಿಂದ ವಂಚಿತರಾಗಬಾರದು. ಪ್ರತಿಭೆಗಳನ್ನು ಗುರುತಿಸುವಲ್ಲಿ ವಿಫಲರಾಗಬಾರದು ಎಂದರಲ್ಲದೆ ಕೇಂದ್ರ ಸರ್ಕಾರ ಎಸ್ ಟಿ ಸಮುದಾಯದ ಅಭಿವೃದ್ಧಿಗೆ ಸಮಗ್ರ ಯೋಜನೆಗಳನ್ನು ರೂಪಿಸಿದೆ ಎಂದು ಮಾಹಿತಿ ಒದಗಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್ ಟಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಡಿ ಆರ್ ಪ್ರಭಾಕರ್, ಬಿಜೆಪಿ ಸರ್ಕಾರದ ಮೂಲಕ ಸಮುದಾಯದ ಜನರ ಏಳಿಗೆಗೆ ಹಲವು ಯೋಜನೆಗಳನ್ನು ರೂಪಿಸಿದ್ದು ಪ್ರಸಕ್ತ ರಾಜ್ಯ ಸರ್ಕಾರದಿಂದ ನಿರ್ಲಕ್ಷ್ಯ ಕಂಡು ಬರುತ್ತಿದೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹೋರಾಟಗಾರ ಜೆ ಪಿ ರಾಜು ಸೇರಿದಂತೆ ಸಮುದಾಯದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ದಕ್ಷಿಣ ಕನ್ನಡ ಪ್ರಭಾರಿ ಬಿ ಬಿ ಭಾರತೀಶ್, ಜಿಲ್ಲಾ ಎಸ್ ಟಿ ಅಧ್ಯಕ್ಷರಾದ ಎಂಎಂ ಪರಮೇಶ್ವರ್, ಉಪಾಧ್ಯಕ್ಷ ಆರ್ ಕೆ ಚಂದ್ರ ತಾಲೂಕು ಅಧ್ಯಕ್ಷರಾದ ಮುತ್ತುರಾಜ, ಪ್ರವೀಣ್ ಕುಮಾರ್, ಮಲ್ಲೇಶ್ ಮತ್ತಿತರರು ಇದ್ದರು.