ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ತೀವ್ರ ಬರ ಹಿನ್ನೆಲೆ ಜಿಲ್ಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಆಗದಂತೆ ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಸುಶೀಲಾ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು, ಈಗಾಗಲೇ ತೀವ್ರ ಬರ ಪರಿಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ. ನೀರು ಪೋಲಾಗದಂತೆ ಲಭ್ಯ ಇರುವ ನೀರಿನ ಸಮರ್ಪಕ ನಿರ್ವಹಣೆ ಸೇರಿ ಅವಶ್ಯಕತೆ ಇರುವ ಮತ್ತು ತೀವ್ರ ನೀರಿನ ಸಮಸ್ಯೆ ಎದುರಿಸಬಹುದಾದ ಗ್ರಾಮಗಳಲ್ಲಿ ಖಾಸಗಿ ಬೋರ್ವೆಲ್ ಗುರುತಿಸಿ, ಮಾಲೀಕರೊಂದಿಗೆ ಎಸ್‌ಡಿಆರ್‌ಎಫ್ ನಿಯಮಾವಳಿ ಅನ್ವಯ ಒಡಂಬಡಿಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.
ಟ್ಯಾಂಕರ್ ಮೂಲಕ ನೀರು :ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಸಂಬಂಧಪಟ್ಟಂತೆ ಟೆಂಡರ್ ಪ್ರಕ್ರಿಯೆಗಳ ಸಮಸ್ಯೆ ತಕ್ಷಣ ಬಗೆಹರಿಸಿಕೊಳ್ಳಬೇಕು. ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಅನುಮೋದನೆ ಪಡೆದು ಕ್ರಮ ಕೈಗೊಳ್ಳಬೇಕು.
ದುರಸ್ತಿ ಇರುವ ಪೈಪ್ಲೈನ್ ಗಳು ತಕ್ಷಣ ದುರಸ್ತಿಗೊಳಿಸಿ, ನೀರು ಪೋಲು ಆಗದಂತೆ ಎಚ್ಚರಿಕೆ ವಹಿಸಬೇಕು. ವಿವಿಧ ಜಲಾಶಯ ಹಾಗೂ ನದಿಗಳ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಪಂಪ್‌ಸೆಟ್ ಮೂಲಕ ನೀರು ಎತ್ತುವುದನ್ನು ತಡೆಯಬೇಕು.ಆಯಾ ತಹಸೀಲ್ದಾರರು, ವಿದ್ಯುತ್ ಇಲಾಖೆ ಅಧಿಕಾರಿಗಳು ತಕ್ಷಣ ಹಾಗೂ ತೀವ್ರ ನಿಗಾ ಇಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿ, ಯಾವುದೇ ಪರಸ್ಥಿತಿಯಲ್ಲಿ ಜನ ಜಾನವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲು ಅವರು ಸೂಚನೆ ನೀಡಿದರು.
ನೀರು ಬಳಕೆ ಬಗ್ಗೆ ಜಾಗೃತಿ:ಜಿಲ್ಲೆಯ ಗ್ರಾಮಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀರಿನ ಸಮರ್ಪಕ ನಿರ್ವಹಣೆಯಾಗಬೇಕು. ನೀರು ಪೋಲಾಗದಂತೆ ತಡೆಯಲು ನೀರು ಬಿಡುವ ಸಮಯವನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಕಸ ವಿಲೇವಾರಿ ವಾಹನಗಳ ಮೂಲಕ ಜಾಗೃತಿ ಮೂಡಿಸಬೇಕು. ಬರ ಘೋಷಣೆಯಾದ ಹಿನ್ನೆಲೆ ಹೊಸದಾಗಿ ಬೋರ್ವೆಲ್ ಕೊರೆದು ನೀರು ಪೂರೈಸಲು ಚುನಾವಣಾ ಈ ಸಂದರ್ಭದಲ್ಲಿ ಯಾವುದೇ ಅಭ್ಯಂತರ ಇರುವುದಿಲ್ಲ.
ಮುಂಬರುವ ಎರಡು ತಿಂಗಳ ಅವಧಿಯಲ್ಲಿ ಜಿಲ್ಲೆಯ ಇನ್ನೂ 329 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಾಗುವ ಸಾಧ್ಯತೆ ಇರುವುದರಿಂದ, ಈಗಿನಿಂದಲೇ ಖಾಸಗಿ ಬೋರ್ವೆಲ್ ಗುರುತಿಸುವ ಕಾರ್ಯ ಮಾಡಬೇಕು. ಬೋರ್ವೆಲ್ ಗುರುತಿಸಿದ ತಕ್ಷಣ ಮಾಲೀಕರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಬೇಕು. ತಹಸೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಸರಿಪಡಿಸಿಕೊಂಡು, ಸಕಾಲಕ್ಕೆ ಬಿಲ್ ಸಂದಾಯ ಆಗುವಂತೆ ನೋಡಿಕೊಳ್ಳಬೇಕು. ಎಲ್ಲಾ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಮುಂದಿನ ಎರಡು ತಿಂಗಳ ಅವಧಿಯಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಯಾಗದಂತೆ ನೋಡಿಕೊಳ್ಳಲು ಸೂಚಿಸಿದ ಅವರು, ಕಿರದಳ್ಳಿ ತಾಂಡಾ ಸೇರಿ ವಿವಿಧ ತಂಡಾಗಳಲ್ಲಿನ ನೀರನ್ನು ಲ್ಯಾಬ್ ಪರೀಕ್ಷೆಗೆ ಒಳಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.65 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ:
ಜಿಲ್ಲೆಯಲ್ಲಿ ಸದ್ಯ 65 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸಿತ್ತಿದ್ದು , 36 ಗ್ರಾಮಗಳಿಗೆ ಬಾಡಿಗೆ ಮೂಲಕ ಖಾಸಗಿ ಬೋರ್ವೆಲ್ ನೀರು ಪೂರೈಸಲಾಗುತ್ತಿದೆ. 28 ಗ್ರಾಮಗಳಿಗೆ ಹೊಸದಾಗಿ ಕೊಳವೆ ಬಾವಿ ಕೊರೆಯಿಸಿ ನೀರು ಪೂರೈಸಲಾಗುತ್ತಿದೆ. ಒಂದು ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಪೂರಿಸಲಾಗುತ್ತಿದ್ದು, ಗ್ರಾಮ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯಾಗದಂತೆ ಅವಶ್ಯಕ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಬಿಸಿಲ ತಾಪ: ಮುಂಜಾಗ್ರತೆಗೆ ಸೂಚನೆ
ಜಿಲ್ಲೆಯ ಲ್ಲಿ ಅಧಿಕ ಉಷ್ಣಾಂಶ ದ ಹಿನ್ನೆಲೆ ಸಾರ್ವಜನಿಕ ರು ಅವಶ್ಯಕ ಮುಂಜಾಗ್ರತೆ ವಹಿಸಲು ಜಿಲ್ಲಾಧಿಕಾರಿಗಳು ಸಲಹೆ ನೀಡಿದ್ದು, ಮುಂದಿನ ಎರಡು ತಿಂಗಳು ಇನ್ನೂ ಹೆಚ್ಚು ಉಷ್ಣಾಂಶ ಹೆಚ್ಚಲಿದೆ. ಕಾರಣ ಬಿಸಿಲಿನಲ್ಲಿ ಓಡಾಡುವದನ್ನು ತೊರೆಯಬೇಕು. ಎಳನೀರು, ಜೂಸ್ ಲಿಕ್ವಿಡ್ ಮಾದರಿ ಪಾನೀಯಗಳನ್ನು ಸೇವಿಸಬೇಕು. ಆರೋಗ್ಯಕ್ಕೆ ವಿಶೇಷ ಗಮನ ನೀಡಬೇಕು. ಆರೋಗ್ಯದಲ್ಲಿ ಏರು ಪೇರಾದಲ್ಲಿ ತಕ್ಷಣ ಆರೋಗ್ಯ ಕೇಂದ್ರ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತಿಳಿಸಿದ್ದಾರೆ. ಜಿ.ಪಂ.ಸಿಇಓ ಗರಿಮಾ ಪನ್ವಾರ್ ಉಪಸ್ಥಿತರಿದ್ದರು.