ಚರಂಡಿ ಅವ್ಯವಸ್ಥೆ: ಅರಸಿಕೇರಿಯಲ್ಲಿ ಪ್ರತಿಭಟನೆ

| Published : Jul 14 2024, 01:41 AM IST

ಸಾರಾಂಶ

ಗ್ರಾಮದ ಹೃದಯ ಭಾಗದಲ್ಲಿ ರಾಜ್ಯ ಹೆದ್ದಾರಿ 47ರಲ್ಲಿ ರಸ್ತೆ ಅಗಲೀಕರಣದ ಕಾಮಗಾರಿ ಆರಂಭವಾಗಿ ಎರಡು ವರ್ಷಗಳೇ ಕಳೆದರೂ ಪೂರ್ಣಗೊಂಡಿಲ್ಲ.

ಹರಪನಹಳ್ಳಿ: ತಾಲೂಕಿನ ಅರಸಿಕೇರಿ ಗ್ರಾಮದಲ್ಲಿ ಹದಗೆಟ್ಟ ಚರಂಡಿ ವ್ಯವಸ್ಥೆಯಿಂದ ಕಲುಷಿತ ವಾತಾವರಣ ಸೃಷ್ಟಿಯಾಗಿರುವುದಕ್ಕೆ ಆತಂಕಗೊಂಡು ಪೊಲೀಸ್ ವಸತಿ ಗೃಹ ನಿವಾಸಿಗಳು ಪ್ರತಿಭಟನೆ ನಡೆಸಿದರು.

ಗ್ರಾಮದ ಹೃದಯ ಭಾಗದಲ್ಲಿ ರಾಜ್ಯ ಹೆದ್ದಾರಿ 47ರಲ್ಲಿ ರಸ್ತೆ ಅಗಲೀಕರಣದ ಕಾಮಗಾರಿ ಆರಂಭವಾಗಿ ಎರಡು ವರ್ಷಗಳೇ ಕಳೆದರೂ ಪೂರ್ಣಗೊಂಡಿಲ್ಲ. ಇದರಿಂದ ಚರಂಡಿಗಳು ಅಪೂರ್ಣವಾಗಿ ತ್ಯಾಜ್ಯ ಸಂಗ್ರಹವಾಗಿದೆ. ತ್ಯಾಜ್ಯ ನಿರ್ವಹಣೆ ಇಲ್ಲದೇ ಮಡುಗಟ್ಟಿ ನಿಂತಿದ್ದು ಸಾಂಕ್ರಾಮಿಕ ರೋಗದ ಭೀತಿ ಸ್ಥಳೀಯ ನಿವಾಸಿಗಳಿಗೆ ಎದುರಾಗಿದೆ.

ರಾಜ್ಯದ ಎಲ್ಲೆಡೆ ಡೆಂಘೀ, ಮಲೇರಿಯಾ ವ್ಯಾಪಕವಾಗಿ ಹರಡುತ್ತಿದೆ. ಚಿಕ್ಕ ಮಕ್ಕಳು, ವಯಸ್ಸಾದ ಪೋಷಕರೊಂದಿಗೆ ವಾಸವಾಗಿದ್ದೇವೆ. ವಸತಿ ಗೃಹದ ಬಳಿಯಲ್ಲಿ ಸಂಗ್ರಹವಾದ ಚರಂಡಿ ನೀರು ದುರ್ವಾಸನೆ ಬೀರುತ್ತಿದೆ. ತ್ಯಾಜ್ಯಗಳಿಂದ ತುಂಬಿರುವ ಚರಂಡಿಯು ಸೊಳ್ಳೆಗಳ ಉಗಮ ಸ್ಥಾನವಾಗಿದೆ. ತಿಂಗಳುಗಳಿಂದ ಸಂಗ್ರಹವಾದ ಕೊಳಚೆಯಿಂದಾಗಿ ಮಕ್ಕಳು ಶಾಲೆಗೆ ಮುಕ್ತವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಕೂಡಲೇ ಚರಂಡಿ ವ್ಯವಸ್ಥೆ ಕಲ್ಪಿಸಿ, ಸ್ವಚ್ಛತೆ ಕಾಪಾಡಬೇಕು ಎಂದು ಪೊಲೀಸ್ ವಸತಿಗೃಹದ ನಿವಾಸಿಗಳು ಆಗ್ರಹಿಸಿದ್ದಾರೆ.

ಗ್ರಾಮದ ರಸ್ತೆ ಎರಡು ಬದಿಯಲ್ಲಿ ಚರಂಡಿ ಕಾಮಗಾರಿ ಅಪೂರ್ಣಗೊಂಡಿದೆ. ಗ್ರಾಮದ ಮೇಲ್ಭಾಗದಿಂದ ಹರಿಯುವ ನೀರು ಗ್ರಾಮದ ಪೊಲೀಸ್ ವಸತಿ ಗೃಹದ ಬಳಿ ಸಂಗ್ರಹವಾಗಿ ಸಮಸ್ಯೆ ಉಂಟಾಗಿದೆ. ಮುಂಭಾಗದಲ್ಲಿ ಬಸ್ ನಿಲ್ದಾಣ ಇರುವುದರಿಂದ ನಿತ್ಯ ಸಾವಿರಾರು ಜನರು ಮೂಗು ಮುಚ್ಚಿಕೊಂಡು ಆತಂಕದಲ್ಲಿ ಸಂಚರಿಸುವಂತೆ ಆಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿ ಪೂರ್ಣಗೊಳಿಸಿ ಉತ್ತಮ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯರಾದ ರಾಜಪ್ಪ, ಹಾಲಪ್ಪ, ಸಿದ್ದೇಶ್, ಗುರುಶಾಂತ್ ಕೋರಿದ್ದಾರೆ.