ಶ್ರೀನಿವಾಸ ಬಬಲಾದಿ
ಕನ್ನಡಪ್ರಭ ವಾರ್ತೆ ಲೋಕಾಪುರಪಟ್ಟಣದ ಜನ-ಜಾನುವಾರುಗಳಿಗೆ ಜಲ ಮೂಲವಾಗಿದ್ದ ಹಳ್ಳ ಇಂದು ತ್ಯಾಜ್ಯ ಎಸೆಯುವ ಹಾಗೂ ಕೊಳಚೆ ನೀರು ಹರಿಸುವ ತಾಣವಾಗಿ ಮಾರ್ಪಟ್ಟಿದೆ.
ರಾಯಚೂರು-ಬೆಳಗಾವಿ ಹೆದ್ದಾರಿಯಲ್ಲಿ ಪಟ್ಟಣಕ್ಕೆ ಹತ್ತಿರ ಇರುವ ಈ ಹಳ್ಳ ತ್ಯಾಜ್ಯ ಎಸೆಯುವ ತಿಪ್ಪೆಯಾಗಿ ಪರಿವರ್ತನೆಯಾಗಿದೆ. ಸುತ್ತಲಿನ ಬಡಾವಣೆಗಳ ಮಾಂಸದ ಅಂಗಡಿ, ಮನೆಗಳ ತ್ಯಾಜ್ಯ, ಕಸಕಡ್ಡಿ ತ್ಯಾಜ್ಯವನ್ನು ಹಳ್ಳದಲ್ಲಿ ಎಸೆಯಲಾಗುತ್ತಿದೆ. ಇದರಿಂದ ಸುತ್ತಲೂ ದುರ್ಗಂಧ ಹರಡಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹಳ್ಳದ ನಿರ್ವಹಣೆ ಇಲ್ಲದೆ ಮುಳ್ಳು ಕಂಟಿಗಳು ಬೆಳೆದು ಹಳ್ಳವೇ ಮಾಯವಾಗಿದೆ.ಸುಮಾರು ವರ್ಷಗಳ ಹಿಂದೆ ಈ ಹಳ್ಳ ಪಟ್ಟಣದ ಜಾನುವಾರುಗಳಿಗೆ ಹಾಗೂ ಜನತೆಗೆ ನೀರಿಗೆ ಮೂಲ ಸೆಲೆಯಾಗಿತ್ತು. ದನಕರುಗಳಿಗೆ ಕುಡಿಯಲು ನೀರು, ಮಹಿಳೆಯರು ಬಟ್ಟೆ ತೊಳೆಯಲು ಬಳಸುತ್ತಿದ್ದರು. ರೈತರು ಈ ಹಳ್ಳದ ನೀರನ್ನೆ ಹೊಲಕ್ಕೆ ಹರಿಸಿ ಬೆಳೆ ಬೆಳೆಯುತ್ತಿದ್ದರು.
ಅಂದು ಜಲಮೂಲ ಇಂದು ತ್ಯಾಜ್ಯ ಸಂಗ್ರಹ ತಾಣ: ಸ್ಥಳೀಯ ಹೋಟೆಲ್, ಖಾನಾವಳಿ, ಮಾಂಸದ ಅಂಗಡಿ, ಹಣ್ಣಿನ ಅಂಗಡಿಗಳು ಮತ್ತು ಮನೆಗಳಲ್ಲಿನ ಎಲ್ಲ ತರಹದ ತ್ಯಾಜ್ಯಗಳನ್ನು ಈ ಹಳ್ಳದಲಿಯೇ ಹಾಕುತ್ತಾರೆ. ಸತ್ತ ಪ್ರಾಣಿಗಳನ್ನು ತಂದು ಹಳ್ಳದಲ್ಲೇ ಎಸೆಯಲಾಗುತ್ತಿದೆ. ವಿವಿಧ ಬಡಾವಣೆಗಳ ಚರಂಡಿ ನೀರು ಹರಿಬಿಡಲಾಗಿದೆ. ಇದರಿಂದ ದುರ್ನಾತ ಬೀರುತ್ತಿದ್ದು, ಸುತ್ತಮುತ್ತಲಿನ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಹಳ್ಳವೆಂದರೆ ಕಸ-ತ್ಯಾಜ್ಯ ಹಾಕುವ ಕೇಂದ್ರವಾಗಿ ಮಾರ್ಪಟ್ಟಿದೆ. ಹಳ್ಳದಲ್ಲಿ ಗುಡ್ಡೆ ಹಾಕಿದ ಕಸಕ್ಕೆ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚುವುದರಿಂದ ಹೊಗೆ ಆವರಿಸಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಒಂದು ಕಾಲದಲ್ಲಿ ಶುದ್ಧ ನೀರು ಹರಿಯುತ್ತ ಗ್ರಾಮದ ಸೌಂದರ್ಯಕ್ಕೆ ಕಳಶದಂತಿದ್ದ ಹಳ್ಳ ಇಂದು ಗಿಡಗಂಟಿ, ತ್ಯಾಜ್ಯಗಳಲ್ಲಿ ತುಂಬಿಕೊಂಡು ತಿಪ್ಪೆಯಂತಾಗಿರುವುದು ಪರಿಸರ ಪ್ರಿಯರ ಸಂಕಟಕ್ಕೆ ಕಾರಣವಾಗಿದೆ.
ಮನೆಗೆ ವಾಹನ ಬಂದರೂ ಕಸ ಹಾಕಲ್ಲ : ಪಟ್ಟಣ ಪಂಚಾಯತಿಯಿಂದ ಮನೆಗಳ ತ್ಯಾಜ್ಯ ಸಂಗ್ರಹಿಸಲು ವಾಹನ ವ್ಯವಸ್ಥೆ ಮಾಡಿದೆ. ಪಟ್ಟಣದ ಎಲ್ಲ ಬಡಾವಣೆಗಳ ಮನೆಗಳು ಮತ್ತು ಅಂಗಡಿಗಳ ಬಾಗಿಲಿಗೆ ಹೋಗಿ ಕಸ ಸಂಗ್ರಹಿಸಲಾಗುತ್ತಿದೆ. ನಿತ್ಯ ವಾಹನಗಳು ಅಂಗಡಿಗಳ ಬಾಗಿಲಿಗೆ ಬಂದರೂ ತ್ಯಾಜ್ಯವನ್ನು ವಾಹನಗಳಿಗೆ ಹಾಕದೇ ತಂದು ಹಳ್ಳಕ್ಕೆ ಸುರಿಯುತ್ತಿದ್ದಾರೆ. ಕಸದ ವಾಹನಗಳು ಬೆಳಗ್ಗೆಯೇ ಬರುವುದರಿಂದ ಬೇಗ ಎದ್ದು ಕಸ ಹಾಕುವಷ್ಟು ವ್ಯವಧಾನ ಜನತೆಯಲ್ಲಿ ಇಲ್ಲವಾಗಿದೆ. ಕೆಲಸ ಮುಗಿಸಿ ದ್ವಿಚಕ್ರವಾಹನದಲ್ಲಿ ಮನೆಗೆ ಹೋಗುವಾಗ ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ತ್ಯಾಜ್ಯ ತುಂಬಿ ಹಳ್ಳದಲ್ಲಿ ಎಸೆದು ಹೋಗುತ್ತಿದ್ದಾರೆ. ಇದು ಹಳ್ಳದ ಅಕ್ಕಪಕ್ಕದ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಒಂದಡೆ ಸ್ವಚ್ಛ ಭಾರತ ಕನಸಿನೊಂದಿಗೆ ಪಟ್ಟಣ ಪಂಚಾಯಿತಿ ಸಾಕಷ್ಟು ಪರಿಶ್ರಮ ಪಟ್ಟು ವಾಹನಗಳ ವ್ಯವಸ್ಥೆ ಮಾಡಿದ್ದರೂ ಇದಕ್ಕೆ ವರ್ತಕರು ತಣ್ಣೀರು ಎರಚಿದ್ದಾರೆ.ಪಟ್ಟಣ ಪಂಚಾಯತಿ ನಿರ್ಲಕ್ಷ್ಯ : ಹಳ್ಳದಲ್ಲಿ ತ್ಯಾಜ್ಯ ಸುರಿಯದಂತೆ ಪಟ್ಟಣದ ಪಂಚಾಯತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ, ಇದರಿಂದ ಹಳ್ಳದಲ್ಲಿ ತ್ಯಾಜ್ಯ ಹಾಕುವುದಕ್ಕೆ ಕಡಿವಾಣ ಇಲ್ಲದಂತಾಗಿದೆ. ಇದಲ್ಲದೆ ಹಳ್ಳದಲ್ಲಿ ಬೆಳೆದಿರುವ ಜಾಲಿಗಿಡಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುತ್ತಿಲ್ಲ, ಇದರಿಂದ ಇಡೀ ವಾತಾವರಣವೇ ಹದಗೆಡುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಸಾರ್ವಜನಿಕರು ಹಳ್ಳಕ್ಕೆ ತ್ಯಾಜ್ಯ ಎಸೆಯುವುದರಿಂದ ನಾವು ಅಂಗಡಿಯಲ್ಲಿ ಕೂಡಲು ಆಗುತ್ತಿಲ್ಲ. ಕಿರಾಣಿ ಅಂಗಡಿ, ಮಾಂಸದ ಅಂಗಡಿಯವರು ತಂದು ತ್ಯಾಜ್ಯವನ್ನು ಹಳ್ಳಕ್ಕೆ ಎಸೆಯುತ್ತಿರುವುದರಿಂದ ನಾಯಿ, ಹಂದಿ ಮುಗಿಬೀಳುತ್ತ ಪರಸ್ಪರ ಕಚ್ಚಾಡುತ್ತವೆ. ಹಲವು ಬಾರಿ ಪಪಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ.-ಭೀಮಣ್ಣ ಹುಣಶಿಕಟ್ಟಿ, ಬಿ.ಕೆ.ಮಠದ ಲೋಕಾಪುರ ಗ್ರಾಮಸ್ಥರು
ಪಟ್ಟಣ ಪಂಚಾಯತಿಯಿಂದ ತ್ಯಾಜ್ಯ ವಿಲೇವಾರಿ ವಾಹನವನ್ನು ಪ್ರತಿಯೊಂದು ವಾರ್ಡಿಗೆ ಕಳುಹಿಸಲಾಗುತ್ತಿದೆ. ಮನೆ ಬಾಗಿಲಿಗೆ ಕಸದ ವಾಹನ ಬಂದರೂ ಕಸ ಹಾಕದೇ ಹಳ್ಳಕ್ಕೆ ಎಸೆಯುತ್ತಿರುವುದು ಸರಿಯಲ್ಲ. ಇದು ಕೇವಲ ಅಧಿಕಾರಿಗಳಿಂದ ಮಾತ್ರ ಸಾಧ್ಯವಿಲ್ಲ. ಸಾರ್ವಜನಿಕರ ಜವಾಬ್ದಾರಿಯೂ ನಿರ್ವಹಣೆ ಅಷ್ಟೇ ಅಗತ್ಯ. ಸ್ವಚ್ಛ ಭಾರತ ನಿರ್ಮಾಣಕ್ಕೆ ಜನರು ಕೈಜೋಡಿಸಬೇಕು.- ಸಾಬಣ್ಣಾ ಪೂಜಾರ ಪಪಂ ಮುಖ್ಯಾಧಿಕಾರಿ, ಲೋಕಾಪುರ