ಕನಕಗಿರಿ ತಾಲೂಕಿನ ನವಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅದಾಪುರ ಗ್ರಾಮದಲ್ಲಿ ಚರಂಡಿ ನೀರು ರಸ್ತೆಯ ಮೇಲೆಯೇ ಹರಿಯುತ್ತಿದ್ದು, ಗ್ರಾಮಸ್ಥರು ದುರ್ನಾತ ಹಾಗೂ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ದಿನದೂಡುತ್ತಿದ್ದಾರೆ.
ನವಲಿ: ಕನಕಗಿರಿ ತಾಲೂಕಿನ ನವಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅದಾಪುರ ಗ್ರಾಮದಲ್ಲಿ ಚರಂಡಿ ನೀರು ರಸ್ತೆಯ ಮೇಲೆಯೇ ಹರಿಯುತ್ತಿದ್ದು, ಗ್ರಾಮಸ್ಥರು ದುರ್ನಾತ ಹಾಗೂ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ದಿನದೂಡುತ್ತಿದ್ದಾರೆ.
ಅದಾಪುರ-ಜೀರಾಳ ರಸ್ತೆಯ ಪಕ್ಕದ ಚರಂಡಿ ನೀರು ಸರಾಗವಾಗಿ ಹರಿಯದೇ ಸಿಸಿ ರಸ್ತೆಯ ಮೇಲೆಯೇ ನಿಂತುಕೊಂಡಿದೆ. ನೀರು ನಿಂತ ಸ್ಥಳದಲ್ಲಿ ಹಸಿರು ಪಾಚಿ ಆವರಿಸಿದ್ದು, ಇಡೀ ಪ್ರದೇಶದಲ್ಲಿ ದುರ್ನಾತ ಬೀರುತ್ತಿದೆ. ಪ್ರತಿನಿತ್ಯ ಇದೇ ರಸ್ತೆಯಲ್ಲಿ ಗ್ರಾಮಸ್ಥರು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.ಸೊಳ್ಳೆಗಳ ಉತ್ಪತ್ತಿ ಕೇಂದ್ರ: ಗ್ರಾಮದ ತಗ್ಗು ಪ್ರದೇಶದಲ್ಲಿ ಚರಂಡಿ ನೀರು ಸರಾಗವಾಗಿ ಹರಿಯದ ಕಾರಣ ಮುಖ್ಯರಸ್ತೆಯೇ ಕೊಳಚೆ ಹಳ್ಳದಂತಾಗಿದೆ. ರಸ್ತೆಯ ಮೇಲೆ ನಿಂತಿರುವ ಕೊಳಚೆ ನೀರಿನಲ್ಲಿ ಪ್ಲಾಸ್ಟಿಕ್ ಇತರ ತ್ಯಾಜ್ಯ ಸಂಗ್ರಹವಾಗಿದೆ. ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳಲ್ಲಿ ಡೆಂಘೀ, ಮಲೇರಿಯಾ ಇತರ ಸಾಂಕ್ರಾಮಿಕ ರೋಗಗಳ ಆತಂಕ ಹೆಚ್ಚಿದೆ.
ಕಲುಷಿತ ನೀರು ಹಾಗೂ ದುರ್ನಾತದಿಂದ ಮಕ್ಕಳು ಮತ್ತು ವೃದ್ಧರು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.ಮನವಿ ಮಾಡಿದರೂ ಪ್ರಯೋಜನವಿಲ್ಲ: ಪ್ರತಿದಿನ ಇದೇ ದುರ್ನಾತದಲ್ಲಿ ಬದುಕಬೇಕಾಗಿದೆ. ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆ ಬಗೆಹರಿಸುವಂತೆ ನವಲಿ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಮಳೆ ಬಂದ ಸಂದರ್ಭದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.ಶಾಶ್ವತ ಪರಿಹಾರಕ್ಕೆ ಆಗ್ರಹ: ಜಿಲ್ಲಾಡಳಿತ, ಕನಕಗಿರಿ ತಾಲೂಕು ಆಡಳಿತ ಹಾಗೂ ನವಲಿ ಗ್ರಾಪಂ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ರಸ್ತೆಯ ಮೇಲೆ ಹರಿಯುತ್ತಿರುವ ಕೊಳಚೆ ನೀರನ್ನು ತೆರವುಗೊಳಿಸಬೇಕು. ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಂಡು, ಗ್ರಾಮಕ್ಕೆ ಸಮರ್ಪಕ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡದೆ, ಶಾಶ್ವತ ಒಳಚರಂಡಿ ಹಾಗೂ ರಸ್ತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅದಾಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ.