ಬಂಜಾರ ಸಮುದಾಯಕ್ಕೆ ಜ್ಞಾನದ ಬೆಳಕು ನೀಡಿದ ಸೇವಾಲಾಲ್: ಎಡಿಸಿ ಮಮತಾ ದೇವಿ ಜಿ.ಎಸ್.

| Published : Feb 16 2024, 01:50 AM IST

ಬಂಜಾರ ಸಮುದಾಯಕ್ಕೆ ಜ್ಞಾನದ ಬೆಳಕು ನೀಡಿದ ಸೇವಾಲಾಲ್: ಎಡಿಸಿ ಮಮತಾ ದೇವಿ ಜಿ.ಎಸ್.
Share this Article
  • FB
  • TW
  • Linkdin
  • Email

ಸಾರಾಂಶ

ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೃಷ್ಣನಗರಿ ಶ್ರೀ ಸಂತ ಸೇವಾಲಾಲ್ ಬಂಜಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಸಂತ ಸೇವಾಲಾಲ ಜಯಂತಿ ಕಾರ್ಯಕ್ರಮ ನಡೆಯಿತು. ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್. ಸೇವಾಲಾಲರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿಬಂಜಾರ ಸಮುದಾಯಕ್ಕೆ ಜ್ಞಾನದ ಬೆಳಕನ್ನು ನೀಡಿದವರು ಸಂತ ಸೇವಾಲಾಲರು. ಅಂದಿನ ಕಾಲಘಟ್ಟದಲ್ಲಿ ನೀಡಿದ ಸಂದೇಶಗಳು ಹಾಗೂ ಮಾಡಿದ ಸಮಾಜ ಸುಧಾರಣೆಗಾಗಿ ಅವರನ್ನು ಇಂದಿಗೂ ಸ್ಮರಿಸುತಿದ್ದೇವೆ ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್. ಹೇಳಿದರು.

ಅವರು ಗುರುವಾರ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೃಷ್ಣನಗರಿ ಶ್ರೀ ಸಂತ ಸೇವಾಲಾಲ್ ಬಂಜಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಸಂತ ಸೇವಾಲಾಲ ಜಯಂತಿ ಕಾರ್ಯಕ್ರಮದಲ್ಲಿ ಸೇವಾಲಾಲರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಶಂಕರನಾರಾಯಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಕುಮಾರ್ ಎಂ. ಉಪನ್ಯಾಸ ನೀಡಿ, ಬಂಜಾರ ಸಮುದಾಯ ಸ್ವಾಭಿಮಾನದಿಂದ ಬದುಕುವ ದಾರಿಯನ್ನು ತೋರಿಸಿ ಕೊಟ್ಟ ಮಹಾನ್ ಸಾಧಕ ಸಂತ ಸೇವಾಲಾಲರು. ಸಕಲ ಜೀವಿಗಳಲ್ಲಿ ದಯೆ ಹೊಂದಿದ್ದ ಸೇವಾಲಾಲರು ಪ್ರತಿಯೊಂದು ಜೀವಿಯ ರಕ್ಷಣೆಯ ಸಂದೇಶ ನೀಡಿದ್ದರು. ತಮ್ಮ ಜನಾಂಗದವರು ಹಲವಾರು ದುಷ್ಚಟಗಳು ಹಾಗೂ ಮೂಢನಂಬಿಕೆಗೆ ಒಳಗಾಗಿರುವುದನ್ನು ಕಂಡ ಅವರು, ಅವುಗಳಿಂದ ಹೊರತರುವ ಕೆಲಸ ಮಾಡಿದ್ದಾರೆ ಎಂದರು.

ಕೃಷ್ಣನಗರಿ ಸಂತ ಶ್ರೀ ಸೇವಾಲಾಲ ಬಂಜಾರ ಸಂಘದ ಜಿಲ್ಲಾ ಅಧ್ಯಕ್ಷ ಕುಮಾರ್ ಕೆ.ಎಂ. ಮಾತನಾಡಿ, ಬಂಜಾರ ಸಮುದಾಯದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಸಮಾಜದ ಜನರು ಇಂದು ಶೈಕ್ಷಣಿಕವಾಗಿ ಸಹ ಮುಂದುವರಿದಿದ್ದು, ಅನಕ್ಷರತೆ ಕಡಿಮೆಯಾಗಿದೆ. ದುಸ್ಥಿತಿಯಲ್ಲಿದ್ದ ಸಮುದಾಯ ಇಂದು ಸುಸ್ಥಿಗೆ ಬರಲು ಮೂಲ ಕಾರಣ ಸಂತ ಸೇವಾಲಾಲರು ಎಂದರು.

ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹಾಕಪ್ಪ ಆರ್. ಲಮಾಣಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನರಸಿಂಹ ಮೂರ್ತಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಮುದಾಯದ ಮುಖಂಡರು, ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು, ಮಹೇಶ್ ನಿರೂಪಿಸಿ, ಗಂಗಾ ನಾಯ್ಕ್ ವಂದಿಸಿದರು.