ಸಾರಾಂಶ
ಶಿಕ್ಷಣ ಕಲಿಯಿರಿ, ಕಲಿತು ಕಲಿಸಿರಿ. ಕಲಿತವನು ಸರ್ವರನ್ನು ಒಗ್ಗೂಡಿಸಿ ಮುಂದೆ ಸಾಗುತ್ತಾನೆ ಎನ್ನುವ ಸೇವಾಲಾಲರ ಮಾತು ಹಿಂದುಳಿದ ಎಲ್ಲ ಸಮುದಾಯಗಳ ವೇದ ವಾಕ್ಯವಾಗಿದೆ ಎಂದು ಮುಖ್ಯ ಶಿಕ್ಷಕ ಕುಮಾರಸ್ವಾಮಿ ಕಬ್ಬಿಣಕಂತಿಮಠ ಹೇಳಿದರು.
ರಟ್ಟೀಹಳ್ಳಿ: ಶಿಕ್ಷಣ ಕಲಿಯಿರಿ, ಕಲಿತು ಕಲಿಸಿರಿ. ಕಲಿತವನು ಸರ್ವರನ್ನು ಒಗ್ಗೂಡಿಸಿ ಮುಂದೆ ಸಾಗುತ್ತಾನೆ ಎನ್ನುವ ಸೇವಾಲಾಲರ ಮಾತು ಹಿಂದುಳಿದ ಎಲ್ಲ ಸಮುದಾಯಗಳ ವೇದ ವಾಕ್ಯವಾಗಿದೆ ಎಂದು ಮುಖ್ಯ ಶಿಕ್ಷಕ ಕುಮಾರಸ್ವಾಮಿ ಕಬ್ಬಿಣಕಂತಿಮಠ ಹೇಳಿದರು.
ತಾಲೂಕಿನ ಪರ್ವತಸಿದ್ಗೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶ್ರೀ ಸಂತ ಸೇವಾಲಾಲ್ ಮಹಾರಾಜರ 286ನೇ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮಾತನಾಡಿದರು.ಸಂತ ಸೇವಾಲಾಲರು ಸಮುದಾಯದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದಲ್ಲದೇ ಎಲ್ಲ ವರ್ಗದ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಸಮಾಜದಲ್ಲಿ ಶಿಕ್ಷಣದ ಕ್ರಾಂತಿಯನ್ನುಂಟು ಮಾಡಿದ ಮಹಾನ್ ಸಂತ. ಸಮಾಜಕ್ಕೆ ಅವರ ಕೊಡುಗೆ ಅಪಾರ. ಆದ್ದರಿಂದ ಅವರ ಬದುಕಿನ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಿ ಎಂದರು.
ಸಂತ ಸೇವಾಲಾಲರು ಕ್ರಿ.ಶ. 1739 ಫೆಬ್ರವರಿ 15ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳ್ಳಿ ತಾಲೂಕಿನ ಬೆಳಗುತ್ತಿಯ ಸೂರಗೊಂಡನಕೊಪ್ಪ ಗ್ರಾಮದಲ್ಲಿ ಜನಿಸಿದರು. ಸಮುದಾಯದಲ್ಲಿ ಶಾಸನ ಪದ್ಧತಿ, ಕರ್ತವ್ಯ, ಹಕ್ಕು, ನ್ಯಾಯಶೀಲತೆ, ಕಲ್ಪ, ಸತ್ಕಾರ್ಯ, ಕ್ರಿಯೆ, ಗುಣ, ದೈವ, ಧರ್ಮ ಹೀಗೆ ಅನೇಕ ಸೂತ್ರಗಳನ್ನು ಸಮಾಜಕ್ಕೆ ನೀಡಿದ ದೈವಿ ಪುರುಷ. ಅನೇಕ ಪವಾಡಗಳನ್ನು ಮಾಡುವ ಮುಖೇನ ಜನರ ಮನಸ್ಸುಗಳಲ್ಲಿ ಮನೆ ಮಾಡಿದ್ದರು. 18ನೇ ಶತಮಾನದಲ್ಲಿ ಲಂಬಾಣಿ ಸಮಾಜದ ಜನರ ಹಕ್ಕಿನ ರಕ್ಷಣೆಗಾಗಿ ಹೋರಾಟ ಮೈಗೂಡಿಸಿಕೊಂಡಿದ್ದರು. ಲಂಬಾಣಿ ಸಮುದಾಯದವರು ಸಾವಿರಾರು ವರ್ಷಗಳಿಂದ ಅರಣ್ಯ ವಾಸಿಗಳಾಗಿ ಜೀವನ ಸಾಗಿಸುತ್ತಿದ್ದರು. ಅವರನ್ನು ಮುಖ್ಯವಾಹಿನಿಗೆ ತರಲು, ಅಜ್ಞಾನ ಅಂಧಕಾರಗಳನ್ನು ದೂರ ಮಾಡಿ ಜ್ಞಾನದ ಮಾರ್ಗ ತೋರಿದ ಕೀರ್ತಿ ಸೇವಾಲಾಲರಿಗೆ ಸಲ್ಲುತ್ತದೆ ಎಂದರು.ಶಿಕ್ಷಕ ರಾಜು ಸರಶೆಟ್ಟರ್, ಸಿದ್ದನಗೌಡ ಸೂರಜ್ಜಿ ಮುಂತಾದವರು ಇದ್ದರು.
ಪಟ್ಟಣ ಪಂಚಾಯಿತಿ ಶ್ರೀ ಸಂತ ಸೇವಾಲಾಲ್ ಮಹಾರಾಜರು ತಮ್ಮ ಧನಾತ್ಮಕ ಚಿಂತನೆಗಳೊಂದಿಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿದ್ದ ಮಹಾನ್ ದೈವಿ ಪುರುಷ ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ ಹೇಳಿದರು.ಪಟ್ಟಣ ಪಂಚಾಯತ್ ಆವರಣದಲ್ಲಿ ಶ್ರೀ ಸಂತ ಸೇವಾಲಾಲ್ ಮಹಾರಾಜರ 286ನೇ ಜಯಂತ್ಯುತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮಾತನಾಡಿದರು.
ರಾಜಕುಮಾರ ಹೇಂದ್ರೆ, ಸಂತೋಷ ಬಿಳಿಚಿ, ವಿನುತಾ, ಪಿ.ಆರ್. ಮಲ್ಲನಗೌಡ್ರ, ಬಸವರಾಜ ಹಿರೇಮಠ, ಬಸವರಾಜ ಕವಲೆತ್ತು, ನಿಖಿಲ್ ಅರ್ಕಾಚಾರಿ, ಚಂದ್ರಪ್ಪ ಅಂತರವಳ್ಳಿ, ಸಂತೋಷ ಮುಂತಾದವರು ಇದ್ದರು.