ಸಾರಾಂಶ
ಸವಣೂರು: ಭರತ ಖಂಡದ ಧಾರ್ಮಿಕ ರಾಯಭಾರಿ ಎಂದೇ ಹೆಸರಾದ ಸಂತ ಸೇವಾಲಾಲ್ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನ ಗೆದ್ದವರು. ತಮ್ಮ ಲೀಲೆಗಳನ್ನು ಪ್ರದರ್ಶನ ಮಾಡುತ್ತಾ, ಜನದಂಬೆಯ ಆರಾಧಕರಾಗಿ ಇಡೀ ಜೀವಮಾನದುದ್ದಕ್ಕೂ ಬ್ರಹ್ಮಚರ್ಯವನ್ನೇ ಪಾಲನೆ ಮಾಡಿದ ಸಂತ ಸೇವಾಲಾಲರು ಎಂದು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಿಳಿಸಿದರು.ಪಟ್ಟಣದ ಡಾ. ವಿ.ಕೃ. ಗೋಕಾಕ ಸಭಾಭವನದಲ್ಲಿ ಶ್ರೀ ಸೇವಾಲಾಲ್ ಸೇವಾ ಸಮಿತಿ ಸವಣೂರು ಹಾಗೂ ತಾಲೂಕಿನ 14 ತಾಂಡಾಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸೇವಾಲಾಲರು ಇಂದಿಗೂ ಜನಮಾನಸದಲ್ಲಿ ಗುರುವಿನ ಸ್ಥಾನವನ್ನು ಪಡೆದಿದ್ದಾರೆ. ಜನತೆಗೆ ವ್ಯಸನಮುಕ್ತರಾಗಿ ಎಂದು ಬೋಧಿಸಿದ ಸೇವಾಲಾಲರು ಸತ್ಯ, ಅಹಿಂಸೆ, ತ್ಯಾಗ ಮನೋಭಾವದ ನೀತಿಮಾತು ಹೇಳಿದ್ದರು. ಬಂಜಾರ ಸಮಾಜ ಅಭಿವೃದ್ಧಿಗಾಗಿ ಸರ್ಕಾರ ದಿಟ್ಟ ಯೋಜನೆಯನ್ನು ರೂಪಿಸಲು ಮುಂದಾಗಿದೆ. ಜಿಲ್ಲೆಯ ಸೂರಗೊಂಡಕೊಪ್ಪದಲ್ಲಿ ಬಂಜಾರ ಸಮಾಜದ ವಿದ್ಯಾರ್ಥಿಗಳಿಗಾಗಿ ಸುಮಾರು ₹50 ಕೋಟಿ ಅನುದಾನದಲ್ಲಿ ವಸತಿ ಶಾಲೆ ನಿರ್ಮಿಸಲು ಅನುದಾನ ನೀಡಲಾಗಿದೆ. ಕಟ್ಟಡ ಕಾಮಗಾರಿ ಆರಂಭಗೊಳ್ಳಲಿದೆ. ಸಮಾಜದವರು ದುಶ್ಚಟಗಳಿಂದ ಮುಕ್ತಿ ಹೊಂದಿದಲ್ಲಿ ಮಾತ್ರ ಸಮಾಜ ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಅವಶ್ಯವಾಗಿದೆ ಎಂದರು.ಕೃಷ್ಣಾಪುರ ಬಂಜಾರ ಗುರುಪೀಠದ ಡಾ. ಕುಮಾರ ಮಹಾರಾಜರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಮಾಜದ ವ್ಯಕ್ತಿಗಳು ಜಿಲ್ಲೆಯಲ್ಲಿ ರಾಜಕೀಯವಾಗಿ ಉನ್ನತ ಸ್ಥಾನ ಹೊಂದಿದ್ದರೂ ಜಿಲ್ಲೆಯಲ್ಲಿರುವ ಮೂರು ಬಂಜಾರ ಸಮಾಜದ ಮಠಗಳ ಅಭಿವೃದ್ಧಿಯನ್ನು ಕಡೆಗಣಿಸಿರುವುದು ವಿಷಾದನೀಯ.ಬಂಜಾರ ಸಮುದಾಯದ ಜನರು ಬಡತನವನ್ನು ನೀಗಲು ದೂರದ ಸ್ಥಳಗಳಿಗೆ ಗುಳೆ ಹೋಗುತ್ತಿದ್ದಾರೆ. ಗುಳೆ ಹೋಗುತ್ತಿರುವ ಜನರ ಮಕ್ಕಳಿಗೆ ತಾಲೂಕಿನಲ್ಲಿ ವಸತಿಶಾಲೆಯನ್ನು ತೆರೆಯಬೇಕು. ಬಂಜಾರ ಸಮುಗಾಯಕ್ಕೆ ಸಮುದಾಯ ಭವನ ನಿರ್ಮಾಣ ಮಾಡಬೇಕು. ಜಿಲ್ಲೆಯಲ್ಲಿರುವ ಸಮಾಜದ 3 ಮಠಗಳನ್ನು ಅಭಿವೃದ್ಧಿ ಮಾಡಬೇಕು ಎಂದು ಮನವಿ ಮಾಡಿದರು ಹುಬ್ಬಳ್ಳಿ ಸೇವಾಲಾಲ್ ಗುರುಪೀಠದ ತಿಪ್ಪೇಶ್ವರ ಸ್ವಾಮೀಜಿ, ಗುತ್ತಲ ನಾಗರಾಜ ಮಹಾರಾಜರು ನೇತೃತ್ವ ವಹಿಸಿ ಆಶೀರ್ವಚನ ನೀಡಿದರು. ತಾಲೂಕು ಸೇವಾಲಾಲ ಸೇವಾ ಸಮಿತಿ ಅಧ್ಯಕ್ಷ ತುಕಾರಾಮ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಗ್‌ಬಾಸ್- 11ರ ವಿಜೇತ ಹನುಮಂತ ಲಮಾಣಿ, ಭಜನಾ ಕಲಾವಿದ ಚಂದ್ರು ಲಮಾಣಿ, ಭಜನಾ ಕಲಾವಿದ ಮಾರುತಿ ಲಮಾಣಿ, ಸಂಗಪ್ಪ ಲಮಾಣಿ ಸೇರಿದಂತೆ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ರವಿ ಲಮಾಣಿ, ಎಂ.ಜೆ. ಮುಲ್ಲಾ, ಗವಿಸಿದ್ದಪ್ಪ ದ್ಯಾಮಣ್ಣವರ, ರಮೇಶ ನಿಗದಿ, ಗಂಗಾಧರ ಬಾಣದ, ಧರಿಯಪ್ಪಗೌಡ ಪಾಟೀಲ, ಜೀವನ ಪಮ್ಮಾರ, ಗಂಗಾನಾಯ್ಕ ಎಲ್., ಡಾ. ಮೋತಿಲಾಲ್ ರಾಥೋಡ, ಪರಮೇಶ ಲಮಾಣಿ, ತಾಲೂಕಿನ 14 ತಾಂಡಾಗಳ ನಾಯಕ, ಢಾವ, ಕಾರಬಾರಿ, ಮಾಲಾಧಾರಿಗಳು ಪಾಲ್ಗೊಂಡಿದ್ದರು. ಶಿವಾನಂದ ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು.