ಸಾರಾಂಶ
ಗದಗ: ನಗರದಲ್ಲಿ ಬುಧವಾರ ತಡರಾತ್ರಿ ಸುರಿದ ಭಾರೀ ಮಳೆಗೆ ದತ್ತಾತ್ರೇಯ ರಸ್ತೆಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ. 1ಕ್ಕೆ ಅಪಾರ ಪ್ರಮಾಣದ ಚರಂಡಿ ನೀರು ನುಗ್ಗಿ ಅವಾಂತರವಾಗಿದೆ. ಇದರಿಂದ ಅನಿವಾರ್ಯವಾಗಿ ಪಕ್ಕದ ಅಂಗಡಿಗಳ ಮುಂಗಟ್ಟಿನ ಮುಂದೆ ಕುಳಿತು ಮಕ್ಕಳಿಗೆ ಪಾಠ ಮಾಡಬೇಕಾಯಿತು.
ಶಾಲಾ ಆವರಣವೆಲ್ಲ ಕೊಳಕು ನೀರಿನಿಂದ ತುಂಬಿ ಹೋಗಿದೆ. ಗುರುವಾರ ತರಗತಿ ನಡೆಸಲು ಸಾಧ್ಯವಾಗದೇ ಶಿಕ್ಷಕರು ಮತ್ತು ಮಕ್ಕಳ ಪರದಾಡಿದ್ದಾರೆ.ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿ ವರೆಗೆ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಸಮಸ್ಯೆ ಹಲವಾರು ವರ್ಷಗಳಿಂದ ಕಾಡುತ್ತಲೇ ಇದೆ. ಶಾಲಾ ಆವರಣಕ್ಕಿಂತ ರಸ್ತೆ ಮತ್ತು ಚರಂಡಿಗಳು ಎತ್ತರದಲ್ಲಿರುವುದು ಹಾಗೂ ನಗರಸಭೆಯ ಅಧಿಕಾರಿಗಳು ಚರಂಡಿಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸದೇ ಇರುವುದು ಸಮಸ್ಯೆಗೆ ಕಾರಣವಾಗಿದೆ. ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಆದರೆ ಚರಂಡಿ ಕಟ್ಟಿರುವುದರಿಂದ ಪಕ್ಕದಲ್ಲಿಯೇ ಇರುವ ಶಾಲಾ ಆವರಣಕ್ಕೂ ಅಪಾರ ಪ್ರಮಾಣ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ.
ರಸ್ತೆ ಬದಿ ಅಂಗಡಿಗಳ ಮುಂದೆ ಮಕ್ಕಳಿಗೆ ಪಾಠ:ಗುರುವಾರ ಬೆಳಗ್ಗೆ ಎಂದಿನಂತೆ ವಿದ್ಯಾರ್ಥಿಗಳು, ಶಿಕ್ಷಕರು ಶಾಲೆಗೆ ಆಗಮಿಸುತ್ತಿದ್ದಂತೆ ಶಾಲೆಯ ಸ್ಥಿತಿ ನೋಡಿ ಕಂಗಾಲಾದರು. ಈ ಗಲೀಜು ನೀರಿನಲ್ಲಿ ಶಾಲಾ ಆವರಣ ಪ್ರವೇಶಿಸಿ, ಕೊಠಡಿಗೆ ತೆರಳು ಸಾಧ್ಯವಿಲ್ಲ ಎಂದು ನಿರ್ಧರಿಸಿದರು. ಚರಂಡಿ ನೀರು ನುಗ್ಗಿರುವ ಕುರಿತು ಶಾಲಾ ಸುಧಾರಣಾ ಸಮಿತಿ ಸದಸ್ಯರಿಗೆ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಆನಂತರ ಶಾಲೆಗೆ ಬಂದಿದ್ದ ವಿದ್ಯಾರ್ಥಿಗಳನ್ನು ಅದೇ ರಸ್ತೆಯ ಎದುರುಗಡೆ ಇದ್ದ ಖಾಸಗಿ ಮಾಲೀಕತ್ವದ ಅಂಗಡಿಯ ಮುಂಭಾಗದಲ್ಲಿಯೇ ಕೂರಿಸಿ ಬಯಲಲ್ಲಿಯೇ ಪಾಠ ಮಾಡಿದ್ದಾರೆ.
ಪ್ರತಿಬಾರಿ ಸಮಸ್ಯೆ:ಈ ಶಾಲೆಗೆ ಚರಂಡಿ ನೀರು ನುಗ್ಗುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವುಬಾರಿ ಹೀಗಾಗಿದ್ದರೂ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಅಧಿಕಾರಿಗಳು ಮತ್ತು ನಗರಸಭೆಯ ಸಿಬ್ಬಂದಿ ಆಸಕ್ತಿ ವಹಿಸಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಬೀದಿಯಲ್ಲಿಯೇ ಪಾಠ ಕೇಳುವಂತಾಗಿದೆ. ಇದೇ ರಸ್ತೆಯಲ್ಲಿ ಬೆಳಗ್ಗೆ ತರಕಾರಿ ವ್ಯಾಪಾರ, ವಹಿವಾಟು ನಡೆಯುವ ಹಿನ್ನೆಲೆಯಲ್ಲಿ ಕೊಳೆತ ತರಕಾರಿ ಸೇರಿದಂತೆ ಅನಗತ್ಯ ವಸ್ತುಗಳನ್ನು ಪಕ್ಕದ ಚರಂಡಿಯಲ್ಲಿ ಹಾಕುತ್ತಿರುವ ಹಿನ್ನೆಲೆಯಲ್ಲಿ ಅಲ್ಪ ಮಳೆಯಾದರೂ ಸಾಕು ಚರಂಡಿ ಕಟ್ಟಿ ಮಲಿನ ನೀರು ನುಗ್ಗಿ ಸಮಸ್ಯೆಯಾಗುತ್ತಿದೆ.ಚರಂಡಿ ತುಂಬಿ ಶಾಲೆಯ ಆವರಣಕ್ಕೆ ಕೊಳಕು ನೀರು ದುರ್ವಾಸನೆ ಹೊಡೆಯುತ್ತಿದೆ. ಸಮಸ್ಯೆಯ ಬಗ್ಗೆ ಹಲವಾರು ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಗಲೀಜು ವಾತಾವರಣದಲ್ಲಿ ಮಕ್ಕಳನ್ನು ಕೂರಿಸುವುದಾದರೂ ಹೇಗೆ? ಇದಕ್ಕೆ ಅಧಿಕಾರಿಗಳು ಶಾಶ್ವತ ಪರಿಹಾರ ನೀಡಬೇಕು ಎಂದು ಮುಖ್ಯೋಪಾಧ್ಯಾಯ ವಿ.ಎಸ್. ಜಕ್ಕರಡ್ಡಿ ತಿಳಿಸಿದ್ದಾರೆ.
ಶಾಲೆಗೆ ಚರಂಡಿ ನೀರು ನುಗ್ಗಿದ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದೇನೆ. ರಸ್ತೆಯಲ್ಲಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳನ್ನು ಪಕ್ಕದಲ್ಲಿರುವ ಸರ್ಕಾರಿ ಶಾಲೆಗೆ ಸ್ಥಳಾಂತರ ಮಾಡಲಾಗಿದೆ. ಶಾಲೆಗೆ ನೀರು ನುಗ್ಗಿದ ವಿಚಾರಕ್ಕೆ ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಕೂಡಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ಗದಗ ಶಹರ ಬಿಇಒ ಆರ್.ಎಸ್. ಬುರುಡಿ ಹೇಳಿದ್ದಾರೆ.