ಸಾರಾಂಶ
ರಿಪ್ಪನಪೇಟೆಯ ನಾಡ ಕಚೇರಿಯ ಮುಂಭಾಗದಲ್ಲಿನ ಚರಂಡಿಯಲ್ಲಿ ಕಲುಷಿತ ನೀರು ಹರಿದು ಹೋಗದೆ ಗಿಡ-ಗಂಟಿಗಳು ಬೆಳೆದು ಖಾಲಿ ವಾಟರ್ ಬಾಟಲ್ ನಿಂದ ತುಂಬಿಕೊಂಡಿರುವ ಕೊಳಚೆ.
ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ
ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಪಂ ನಾಡ ಕಚೇರಿ ಕೆನರಾ ಬ್ಯಾಂಕ್ ಸರ್ಕಾರಿ ಹಿರಿಯ ಮಾದರಿ ಪಾಠಶಾಲೆ ಪೊಲೀಸ್ ಠಾಣೆ ಮುಂಭಾಗದ ಚರಂಡಿಯಲ್ಲಿ ಕಲುಷಿತ ನೀರು ಹರಿದು ಹೋಗದೆ ಗಿಡಗಂಟಿಗಳು ಬೆಳೆದಿದ್ದರಿಂದ ಕೊಳಚೆ ನೀರು ನಿಂತು ಸೊಳ್ಳೆಗಳ ಉತ್ಪಾದನಾ ತಾಣವಾಗಿ, ಸಾಕಷ್ಟು ಜನರಲ್ಲಿ ಜ್ವರದ ಲಕ್ಷಣ ಕಾಣಿಸಿಕೊಂಡಿದ್ದು ಡೆಂಘೀ, ಮಲೇರಿಯಾ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.ಮಳೆಗಾಲದ ನೀರು ಸರಾಗವಾಗಿ ಹರಿದು ಹೋಗುವಂತಹ ಚರಂಡಿಗಳೆಲ್ಲ ಮಣ್ಣು ಮತ್ತು ಕಸ ಕಡ್ಡಿ ಇನ್ನಿತರ ಗಿಡ-ಗಂಟಿಗಳು ಬೆಳೆದು ಕಲುಷಿತ ನೀರು ಸಂಗ್ರಹಗೊಂಡು ಸೊಳ್ಳೆಗಳ ಉತ್ಪಾದನಾ ಕೇಂದ್ರದಂತಾಗಿದ್ದರೂ, ಇಲ್ಲಿನ ನಾಡ ಕಚೇರಿಗೆ, ಗ್ರಾಪಂಗೆ, ಬ್ಯಾಂಕ್‍ಗೆ ನಿತ್ಯ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಬಂದು ಹೋಗುತ್ತಿದ್ದು ಇದರಿಂದಾಗಿ ಇಲ್ಲಿನ ಕಲುಷಿತ ನೀರಿನಲ್ಲಿ ಉತ್ಪಾದನೆಯಾಗಿರುವ ಸೊಳ್ಳೆಗಳ ಕಾಟ ಕಡಿತದಿಂದಾಗಿ ಜನರಲ್ಲಿ ಜ್ವರ ಕಾಣಿಸಿಕೊಂಡು ಡೆಂಘೀ ಮತ್ತು ಮಲೇರಿಯಾ ರೋಗಕ್ಕೆ ಒಳಗಾಗಿರುವ ಬಗ್ಗೆ ವರದಿಯಾಗಿದೆ.ರಿಪ್ಪನ್‍ಪೇಟೆಯ ನಿವಾಸಿಯೊಬ್ಬರಿಗೆ ಡೆಂಘೀ ಜ್ವರ ಕಾಣಿಸಿಕೊಂಡು ಶಿವಮೊಗ್ಗದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿದ್ದು ಡೆಂಘೀ ಜ್ವರ ಎಂದು ದೃಡಪಟ್ಟಿರುತ್ತದೆ. ಆದರೆ ಇಲ್ಲಿನ ಸರ್ಕಾರಿ ಅಸ್ಪತ್ರೆ ಅವರು ಹೇಳುವಂತೆ ನಮ್ಮಲ್ಲಿ ಇಂತಹ ಪ್ರಕರಣಗಳು ಯಾವುದು ಬಂದಿಲ್ಲ ಎಂದು ಅಲ್ಲಗೆಳೆಯುತ್ತಿದ್ದಾರೆ.ಬೆಳಗ್ಗೆ ಸಂಜೆಯಾಗುತ್ತಲೇ ಸೊಳ್ಳೆಗಳ ಜೀಕಾರ, ಸೊಳ್ಳೆ ಬತ್ತಿ ಹಚ್ಚದೆ ಮಲಗುವಂತಿಲ್ಲ. ಚರಂಡಿಗಳು ದುರ್ನಾಥ ಬೀರುವಂತಾಗಿ ಗಿಡ ಗಂಟಿಗಳು ಬೆಳದು ಚರಂಡಿ ತುಂಬೆಲ್ಲಾ ಖಾಲಿ ವಾಟರ್‍ಬಾಟಲ್ ತುಂಬಿಕೊಂಡಿವೆ. ಇನ್ನೂ ಗ್ರಾಪಂಗೆ ಸ್ವಚ್ಛ ಗ್ರಾಮ ಯೋಜನೆಯಡಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆಯಲಾಗಿರುವ ಈ ಗ್ರಾಪಂ ಮುಂಭಾಗದಲ್ಲಿಯೇ ಸ್ವಚ್ಛತೆಯಿಲ್ಲದೆ ಇರುವುದು ಮಾತ್ರ ಕಣ್ಣಿದ್ದು ಕುರುಡರಂತಾಗಿದ್ದಾರೆಂಬುದಕ್ಕೆ ಸಾಕ್ಷಿಯಾಗಿದೆ.ನಾಡ ಕಚೇರಿಯ ಹಿಂಭಾಗದಲ್ಲಿನ ಶೌಚಾಲಯ ಮತ್ತು ಮುಂಭಾಗದ ಚರಂಡಿ ಸುತ್ತಮುತ್ತ ಗಿಡಗಂಟಿಗಳು ಬೆಳದು ಕಚೇರಿಯೇ ಕಾಣದಂತಾಗಿದ್ದರೂ ಕೂಡಾ ಸ್ವಚ್ಛತೆಯೊಂದಿಗೆ ಪರಿಸರ ರಕ್ಷಣೆ ಮಾಡಿ ಎಂದು ಗಂಟೆಗಟ್ಟಲೇ ಭಾಷಣ ಬಿಗಿಯುವ ಜನಪ್ರತಿನಿಧಿಗಳಿಗೆ, ಅಧಿಕಾರಿ ವರ್ಗಕ್ಕೆ ಮಾತ್ರ ಅವರ ಕಾಲು ಬುಡದಲ್ಲಿನ ಚರಂಡಿಯಲ್ಲಿ ಹರಿಯದೆ ನಿಂತಿರುವ ಕಲುಷಿತ ನೀರಿನಿಂದ ಜೀಕಾರ ಮಾಡುವ ಸೊಳ್ಳೆಗಳ ಶಬ್ದ ಮಾತ್ರ ಕೇಳಿಸದಿರುವುದು ವಿಪರ್ಯಾಸದ ಸಂಗತಿ. ಇನ್ನಾದರೂ ಸಂಬಂಧ ಪಟ್ಟ ಸ್ಥಳೀಯ ಆಡಳಿತ ಮತ್ತು ಅಧಿಕಾರಿ ವರ್ಗ ಜಾಗೃತಗೊಳ್ಳುವುದೇ ಕಾದುನೋಡಬೇಕಾಗಿದೆ.