ನವಲೂರು ಕೆರೆ ಸೇರುತ್ತಿದೆ ಚರಂಡಿಯ ಕೊಳಚೆ

| Published : Feb 26 2024, 01:35 AM IST

ಸಾರಾಂಶ

ನವಲೂರ ಕೆರೆಯಲ್ಲಿ ಈಗ ಬೇಸಿಗೆಯಲ್ಲಿ ನೀರು ಖಾಲಿ ಆಗುತ್ತಿದ್ದು, ಚರಂಡಿ ನೀರು ಮಾತ್ರ ಉಳಿದಿದೆ.

ವಿಶೇಷ ವರದಿ

ಧಾರವಾಡ: ನವಲೂರು ಕೆರೆಯ ಅಂಗಳದಲ್ಲಿ ಬೆಳೆದ ಪೇರಲ ಹಾಗೂ ಮಾವು ತುಂಬಾ ಶ್ರೇಷ್ಠ ಮತ್ತು ರುಚಿಕರ. ಹುಬ್ಬಳ್ಳಿ -ಧಾರವಾಡ ಮಧ್ಯೆ ನವಲೂರಿನ ಬಳಿ ಇಂದಿಗೂ ಪೇರಲ ಹಣ್ಣು ಮಾರುವವರ ದಂಡೇ ಇರುತ್ತದೆ. ಹೀಗೆ ಹೆಸರು ಮಾಡಿರುವ ನವಿಲೂರಿನ ಕೆರೆ ನಿರ್ವಹಣೆ ಇಲ್ಲದೇ ದೊಡ್ಡ ಚರಂಡಿಯಾಗಿ ಪರಿವರ್ತನೆ ಆಗಿದೆ.

ಧಾರವಾಡದಲ್ಲಿ ಸದ್ಯ ಇರುವ ಕೆಲಗೇರಿ, ಸಾಧನಕೇರಿ, ಕೋಳಿಕೇರಿ ಹಾಗೂ ನವಲೂರು ಕೆರೆಗಳ ಪೈಕಿ ಒಂದೂ ಸುಸ್ಥಿರವಾಗಿಲ್ಲ. ಎಲ್ಲವೂ ಚರಂಡಿ ನೀರು ಸಂಗ್ರಹ ಗುಂಡಿಗಳಾಗಿವೆ. ಈ ಪೈಕಿ ನವಲೂರಲ್ಲಂತೂ ಈಗ ಬೇಸಿಗೆಯಲ್ಲಿ ನೀರು ಖಾಲಿ ಆಗುತ್ತಿದ್ದು, ಚರಂಡಿ ನೀರು ಮಾತ್ರ ಉಳಿದಿದೆ. ದನಕರುಗಳು ಮೇಯುವ ತಾಣವಾಗಿ ಮಾರ್ಪಟ್ಟಿದೆ.

ಮಹಾನಗರ ಪಾಲಿಕೆ, ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯಕ್ಕೊಳಗಾಗಿ ಚರಂಡಿ ನೀರಿನಿಂದ ಅಪವಿತ್ರಗೊಂಡಿದೆ. ಧಾರವಾಡದಿಂದ ಹುಬ್ಬಳ್ಳಿಗೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ನವಲೂರು ಗ್ರಾಮದ ಕೆರೆ ಸುಮಾರು 68 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದೆ. ಸಣ್ಣ ನೀರಾವರಿ ಇಲಾಖೆ ಸುಪರ್ದಿಗೆ ಈ ಕೆರೆ ಇದ್ದು, ಕೆರೆಯ ತುಂಬ ಜಲಕಳೆ ವ್ಯಾಪಿಸಿಕೊಂಡಿದ್ದು, ನಿರ್ವಹಣೆಗೆ ಇಲ್ಲದೇ ಹಾಳಾಗುತ್ತಿದೆ. ಗ್ರಾಮಕ್ಕೆ ಹೊಂದಿಕೊಂಡು ಈ ಕೆರೆ ಇದ್ದು, ಇಲ್ಲಿ ಅಶುದ್ಧ ನೀರು ಬಂದು ಸೇರುತ್ತಿರುವುದರಿಂದ ಗ್ರಾಮಸ್ಥರಿಗೆ ಹಲವಾರು ರೋಗಗಳು ಕಾಣಿಸುತ್ತಿವೆ. ಕೆರೆಯ ಪಕ್ಕದಲ್ಲಿಯೇ ಶಾಲೆ ಇರುವುದರಿಂದ ಆ ಚಿಕ್ಕಮಕ್ಕಳ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ ಎಂಬುದು ಗ್ರಾಮಸ್ಥರ ನೋವಿನ ಸಂಗತಿಯಾಗಿದೆ.

ವಿದೇಶ ಹಕ್ಕಿ ಮಾಯ:

ಹಲವು ವರ್ಷಗಳ ಹಿಂದೆ ಈ ಕೆರೆಯ ಶೃಂಗಾರ ಹಾಗೂ ನೀರಿನ ಗುಣಧರ್ಮ ಹೇಗಿತ್ತೆಂದರೆ, ಕೆರೆಯ ಅಂಗಳಕ್ಕೆ ಹತ್ತಾರು ಬಗೆಯ ವಿದೇಶಿ ಬಾನಾಡಿಗಳು ಪ್ರತಿ ವರ್ಷ ಆಗಮಿಸುತ್ತಿದ್ದವು. ಆದರೆ, ಇಂದು ವಿದೇಶಿ ಪಕ್ಷಿಗಳಿಲ್ಲ. ಬರೀ ಗ್ರಾಮದಲ್ಲಿನ ದನಕರುಗಳಿವೆ. ಈ ಕೆರೆಯು ಕಲುಷಿತಗೊಂಡಿರುವುದನ್ನು ನೋಡಿ ಪಕ್ಷಿತಜ್ಞರೂ ಬೇಸರ ವ್ಯಕ್ತಪಡಿಸಿದ್ದು, ನಗರ ಪ್ರದೇಶ ಹಬ್ಬಿದಂತೆಲ್ಲ, ಈ ಕೆರೆಯೂ ತನ್ನ ಸೊಬಗನ್ನು ಕಳಚುತ್ತಾ ಬರುತ್ತಿರುವುದು ದುರಂತವೇ ಸರಿ ಎನ್ನುತ್ತಿದ್ದಾರೆ.

ಚರಂಡಿ ನೀರು ಸೇರುತ್ತದೆ:

ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಕೆರೆಯನ್ನು ಅಭಿವೃದ್ಧಿ ಪಡಿಸಿ ಒಳನಾಡು ಮೀನುಗಾರಿಕೆಗೆ ಅನುವು ಮಾಡಿಕೊಟ್ಟಿದ್ದು ಹಳೆಯ ಮಾತು. ಈಗ ಅದ್ಯಾವ ಕುರುಹೂ ಇಲ್ಲಿಲ್ಲ. ಮೇಲಾಗಿ, ಯಾಲಕ್ಕಿ ಶೆಟ್ಟರ್ ಕಾಲನಿ, ಕೆಇಬಿ ಹೌಸಿಂಗ್ ಸೊಸೈಟಿ, ನವಲೂರು, ನವಲೂರು ಅಗಸಿ, ಹೊಸಯಲ್ಲಾಪುರದ ಹಿಂಭಾಗ ಹೀಗೆ ಎಲ್ಲ ದಿಕ್ಕುಗಳಿಂದ ಹರಿದು ಬರುವ ಮಲಿನ ನೀರನ್ನು ನೇರವಾಗಿ ಪೈಪ್‌ಗಳ ಮೂಲಕ ಕೆರೆಗೆ ಜೋಡಿಸಲಾಗಿದ್ದು, ನವಲೂರು ಕೆರೆಯನ್ನು ಗಬ್ಬೆಬ್ಬಿಸಿದೆ. ಇದರಿಂದಾಗಿ ಇಲ್ಲಿ ಸಂಚರಿಸುವ ಜನ ಗಬ್ಬು ವಾಸನೆಯಿಂದ ಪರಿತಪಿಸುವಂತಾಗುತ್ತಿದೆ.

ಜಲ ಕಳೆಯಿಂದ ತೊಂದರೆ:

ಈ ಹಿಂದೆ ಪಾಲಿಕೆ ಸದಸ್ಯರು ಹಾಗೂ ಗ್ರಾಮಸ್ಥರ ಒತ್ತಾಯದ ಮೇರೆಗೆ ಶಾಸಕ ಅನುದಾನದಲ್ಲಿ ಎರಡು ಬಾರಿ ಕೆರೆಯ ಹೂಳನ್ನು ಎತ್ತಲಾಗಿತ್ತು. ಆದರೂ ಕೆರೆಯಲ್ಲಿ ಮಾತ್ರ ಸದ್ಯ ಜಲ ಕಳೆ ಹಾಗೂ ಹುಳು ತಂಬಿಕೊಂಡು ನಲಗುತ್ತಿದೆ. ಕೆರೆಯ ಸುತ್ತಮುತ್ತ ಹೊಲ-ಗದ್ದೆಗಳಿದ್ದು, ಅಲ್ಲಿಂದ ಹರಿದು ಬರುವ ನೀರನ್ನು ಮಾತ್ರ ಕೆರೆಗೆ ಸೇರುವಂತೆ ಮಾಡಿದರೆ, ಆ ನೀರು ಶುದ್ಧವಾಗಿರುತ್ತವೆ. ಇದರಿಂದ ಪಕ್ಷಿ, ಪ್ರಾಣಿ ಸಂಕುಲಕ್ಕೆ ಒಂದು ವರದಾನವಾಗುತ್ತದೆ. ನೀರು ಶುದ್ಧವಿದ್ದರೆ ಇದನ್ನು ಪ್ರವಾಸಿಗರ ತಾಣವನ್ನಾಗಿಯೂ ಸೃಷ್ಟಿಸಬಹುದು. ಅದಕ್ಕಾಗಿ ಸರ್ಕಾರ ಮನಸ್ಸು ಮಾಡಬೇಕಿದೆ. ಜತೆಗೆ ಈಗ ಬೇಸಿಗೆ ಇದ್ದು ನೀರು ಬತ್ತಿದೆ. ಕೂಡಲೇ ಹೂಳು ತೆಗೆದರೆ, ಮಳೆಗಾಲದಲ್ಲಿ ಶುದ್ಧ ನೀರು ಸಂಗ್ರಹ ಆಗಲಿದೆ. ಮಹಾನಗರ ಪಾಲಿಕೆ ಈ ಕಾರ್ಯ ಮಾಡಬೇಕೆಂದು ಗ್ರಾಮಸ್ಥರ ಹಾಗೂ ಪಕ್ಷಿಪ್ರೇಮಿಗಳ ಆಗ್ರಹ.

ದಡಕ್ಕೆ ಮಾತ್ರ ಗ್ರಿಲ್

ನವಲೂರು ಕೆರೆಯಲ್ಲಿ ವರ್ಷದಿಂದ ವರ್ಷಕ್ಕೆ ಸಾಕಷ್ಟು ಪ್ರಮಾಣದಲ್ಲಿ ಹೂಳು ತುಂಬಿಕೊಳ್ಳುತ್ತಿರುವುದರಿಂದ ಗ್ರಾಮಸ್ಥರ ಒತ್ತಾಯದಿಂದ ಸಣ್ಣ ನೀರಾವರಿ ಇಲಾಖೆಯಿಂದ ಗ್ರಾಮಕ್ಕೆ ಹೊಂದಿಕೊಂಡ ದಡಕ್ಕೆ ಮಾತ್ರ ಗ್ರಿಲ್ ಹಾಕಲಾಗಿದೆ. ಆದರೂ ಕೆಲವಡೆ ಕೆರೆಯ ಆವರಣದಲ್ಲಿಯೇ ಹೊರಗಡೆಯಿಂದ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಇದರಿಂದ ಕೆರೆಯ ವಾತಾವರಣ ಮತ್ತಷ್ಟು ಕೆಡುತ್ತಿದ್ದು, ಈ ಬಗ್ಗೆ ಸಂಬಂಧಿಸಿದವರು ಕ್ರಮ ವಹಿಸಬೇಕು ಎಂದು ಗ್ರಾಮಸ್ಥರ ಆಗ್ರಹವಾಗಿದೆ.

ನವಲೂರು ಕೆರೆಯ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವರ, ಶಾಸಕ ಗಮನಕ್ಕೆ ತರಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕೆರೆ ಅಭಿವೃದ್ಧಿ ಮಾಡಬೇಕು ಎಂದು ನಮ್ಮ ಒತ್ತಾಯವಾಗಿದೆ. ಉಣಕಲ್ ಕೆರೆಯ ಅಭಿವೃದ್ಧಿ ಮಾದರಿಯಲ್ಲಿಯೇ ನವಲೂರು ಕೆರೆ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಪಾಲಿಕೆ ಸದಸ್ಯ ಡಾ. ಮಯೂರ ಮೋರೆ ತಿಳಿಸಿದ್ದಾರೆ.