ವಿಜಯಪುರ: ಭೂಮಿಯಲ್ಲಿ ಬಿತ್ತಿದ ಬೀಜ ಒಂದಕ್ಕೆ ಹತ್ತಾಗಿ ಬೆಳೆಯುತ್ತದೆಯೇ ಹೊರತು ಎಂದಿಗೂ ವ್ಯರ್ಥವಾಗುವುದಿಲ್ಲ. ಅಂತೆಯೇ ನಾವು ಚಿಕ್ಕಂದಿನಲ್ಲಿ ಕಲಿತ ಪಾಠ ಮತ್ತು ಕೌಶಲ್ಯಗಳು ಜೀವನ ಪೂರ್ತಿ ನೆರವಾಗುತ್ತವೆ ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಿ.ಎಂ.ಕಿಶೋರ್ ಕುಮಾರ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆಯೋಜಿಸಿದ್ದ ಶಾಲಾ ಮಕ್ಕಳ ಕೌಶಲ್ಯ ತರಬೇತಿಗಾಗಿ ಹೊಲಿಗೆ ಯಂತ್ರಗಳ ಕೊಡುಗೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಹೊಲಿಗೆ ಶಿಕ್ಷಣವನ್ನು ಕೇವಲವಾಗಿ ಪರಿಗಣಿಸದೆ, ಸ್ವಾವಲಂಬಿ ಜೀವನಕ್ಕೆ ಇದು ಪೂರಕವೆಂದು ಅರಿತು ಕಲಿಯಬೇಕು ಎಂದರು.ಇದೇ ವೇಳೆ ಹಿರಿಯ ವಿದ್ಯಾರ್ಥಿಗಳ ಸಂಘದ ಸಂಸ್ಥಾಪಕರಾದ ಇಂದಿರಾ ಶಿವಣ್ಣ ಅವರು 2 ಹೊಲಿಗೆ ಯಂತ್ರ, ಸಂಘದ ಖಜಾಂಚಿ ವಿಶ್ವನಾಥ 1, ಹಿರಿಯ ವಿದ್ಯಾರ್ಥಿ ರಂಗನಾಥ್ ತಂದೆತ ಸ್ಮರಣಾರ್ಥ 1 ಹೊಲಿಗೆ ಯಂತ್ರ ನೀಡಿದರು.
ಖಜಾಂಚಿ ವಿ.ವಿಶ್ವನಾಥ ಅವರು ಹೊಲಿಗೆ ಯಂತ್ರಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದರು.ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ಎಲ್.ಆರ್.ಕೋಮಲ ಮಾತನಾಡಿ, ಶಾಲೆಯಲ್ಲಿ ಡಿ-ದರ್ಜೆ ನೌಕರರ ಕೊರತೆ ಇದೆ. ಸರ್ಕಾರದಿಂದ ಯಾವುದೇ ಹೊಸ ನೇಮಕಾತಿಗಳು ನಡೆಯುತ್ತಿಲ್ಲ. ಹಾಗಾಗಿ, ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಸೂಕ್ತ ಕ್ರಮ ಕೈಗೊಂಡು, ಯಾರನ್ನಾದರೂ ತಾತ್ಕಾಲಿಕವಾಗಿ ನೇಮಕ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ನಿರ್ದೇಶಕರಾದ ಎಂ.ಅನ್ನಪೂರ್ಣ, ಹೊಲಿಗೆ ತರಬೇತಿ ಶಿಕ್ಷಕಿ ಪಾರ್ವತಮ್ಮ, ಸಹ ಶಿಕ್ಷಕರಾದ ಆರ್.ಕೋಮಲ, ಕೆ.ಪೆದ್ದಣ್ಣ, ಕೇಶವಮೂರ್ತಿ, ಅರುಣ, ದೀಪ, ವೇದಿಕ, ನೇತ್ರ, ಮಧು, ಸರಳ, ಬಾಬು ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಉಪಸ್ಥಿತರಿದ್ದರು.