ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿಗಳಿಗೆ ೨೦ ವರ್ಷ ಜೈಲು

| Published : Dec 15 2023, 01:31 AM IST

ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿಗಳಿಗೆ ೨೦ ವರ್ಷ ಜೈಲು
Share this Article
  • FB
  • TW
  • Linkdin
  • Email

ಸಾರಾಂಶ

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗಳಿಗೆ ೨೦ ವರ್ಷಗಳ ಕಠಿಣ ಕಾರಾವಾಸ ಶಿಕ್ಷೆ ಹಾಗೂ ದಂಡ ವಿಧಿಸಿ ಹಾವೇರಿ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ನಿಂಗೌಡ ಪಾಟೀಲ ತೀರ್ಪು ನೀಡಿದ್ದಾರೆ. ದೌರ್ಜನ್ಯ ಎಸಗಿದ ಮೈಲಾರೆಪ್ಪ ನಿಂಗಪ್ಪ ಗೋಮಾಳ ಹಾಗೂ ಕೃತ್ಯಕ್ಕೆ ಸಹಕರಿಸಿದ ಆರೋಪಿ ಮಂಜುನಾಥ ಸುಭಾಷ ತೊಗರಳ್ಳಿ ಎಂಬವರಿಗೆ ಈ ಶಿಕ್ಷೆ ನೀಡಲಾಗಿದೆ. ದಂಡದ ಹಣದಲ್ಲಿ ನೊಂದ ಬಾಲಕಿಗೆ ₹೨೦ ಸಾವಿರ ಪರಿಹಾರ ಹಾಗೂ ಕರ್ನಾಟಕ ಸರ್ಕಾರದ ನೊಂದವರ ಪರಿಹಾರ ನಿಧಿ ಯೋಜನೆಯಡಿ ಇರುವ ಪರಿಹಾರ ನಿಧಿಯಿಂದ ಕರ್ನಾಟಕ ಸರ್ಕಾರವು ನೊಂದ ಬಾಲಕಿಗೆ ₹ ೪ ಲಕ್ಷಗಳ ಪರಿಹಾರ ನೀಡಬೇಕೆಂದು ತೀರ್ಪು ನೀಡಿದ್ದಾರೆ.

ಹಾವೇರಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗಳಿಗೆ ೨೦ ವರ್ಷಗಳ ಕಠಿಣ ಕಾರಾವಾಸ ಶಿಕ್ಷೆ ಹಾಗೂ ದಂಡ ವಿಧಿಸಿ ಹಾವೇರಿ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ನಿಂಗೌಡ ಪಾಟೀಲ ತೀರ್ಪು ನೀಡಿದ್ದಾರೆ.

ದೌರ್ಜನ್ಯ ಎಸಗಿದ ಮೈಲಾರೆಪ್ಪ ನಿಂಗಪ್ಪ ಗೋಮಾಳ ಹಾಗೂ ಕೃತ್ಯಕ್ಕೆ ಸಹಕರಿಸಿದ ಆರೋಪಿ ಮಂಜುನಾಥ ಸುಭಾಷ ತೊಗರಳ್ಳಿ ಎಂಬವರಿಗೆ ಈ ಶಿಕ್ಷೆ ನೀಡಲಾಗಿದೆ.

ಮುಂಡಗೋಡ ತಾಲೂಕಿನ ಹರಗನಹಳ್ಳಿ ಗ್ರಾಮದ ಮೈಲಾರೆಪ್ಪ ನಿಂಗಪ್ಪ ಗೋಮಾಳ ಎಂಬಾತ ಅಪ್ರಾಪ್ತೆಗೆ ಫೋನ್ ಹಾಗೂ ಮೇಸೆಜ್ ಮಾಡುತ್ತಿದ್ದನು. 2021 ನ. 8ರಂದು ಆಡೂರು ಠಾಣೆ ವ್ಯಾಪ್ತಿಯ ಬಾಲಕಿಯ ಶಾಲೆಯ ಹತ್ತಿರ ಮಂಜುನಾಥ ಸುಭಾಷ ತೊಗರಳ್ಳಿ ಈತನೊಂದಿಗೆ ಬೈಕ್ ಮೇಲೆ ಬಂದು, ಬಾಲಕಿಯನ್ನು ಅಪಹರಣ ಮಾಡಿಕೊಂಡು ಶಿರಸಿಗೆ ಹೋಗಿ, ಅಲ್ಲಿಂದ ಧರ್ಮಸ್ಥಳಕ್ಕೆ ಹಾಗೂ ಉಜರೆಗೆ ಕರೆದುಕೊಂಡು ಹೋಗಿ ಶಿರೋಡ ಲಾಡ್ಜ್‌ನಲ್ಲಿ ಎರಡು ದಿವಸ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಕ್ಕಾಗಿ ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಹಾನಗಲ್ ವೃತ್ತದ ತನಿಖಾಧಿಕಾರಿ ಡಿವೈಎಸ್‌ಪಿ ಎಂ.ಎಸ್. ಪಾಟೀಲ್ ಅವರು ಪ್ರಕರಣದ ತನಿಖೆ ನಡೆಸಿ ದೋಷರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಆರೋಪಿ ಮೈಲಾರೆಪ್ಪ ನಿಂಗಪ್ಪ ಗೋಮಾಳ ಹಾಗೂ ಕೃತ್ಯಕ್ಕೆ ಸಹಕರಿಸಿದ ಆರೋಪಿ ಮಂಜುನಾಥ ಸುಭಾಷ ತೊಗರಳ್ಳಿ ಮೇಲೆ ಹೊರಿಸಲಾದ ಆಪಾದನೆಗಳು ರುಜುವಾತಾಗಿದ್ದು, ನ್ಯಾಯಾಧೀಶರು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ ನೊಂದ ಬಾಲಕಿಗೆ ₹೨೦ ಸಾವಿರ ಪರಿಹಾರ ಹಾಗೂ ಕರ್ನಾಟಕ ಸರ್ಕಾರದ ನೊಂದವರ ಪರಿಹಾರ ನಿಧಿ ಯೋಜನೆಯಡಿ ಇರುವ ಪರಿಹಾರ ನಿಧಿಯಿಂದ ಕರ್ನಾಟಕ ಸರ್ಕಾರವು ನೊಂದ ಬಾಲಕಿಗೆ ₹ ೪ ಲಕ್ಷಗಳ ಪರಿಹಾರ ನೀಡಬೇಕೆಂದು ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕಿ ಸರೋಜಾ ಕೂಡಲಗಿಮಠ ಅವರು ಪ್ರಕರಣ ನಡೆಸಿ ವಾದ ಮಂಡಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.