ಚಿಕ್ಕಮಗಳೂರುಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ, ದಂಡ ವಿಧಿಸಿ ತೀರ್ಪು
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ. ಬಾಳೆಹೊನ್ನೂರು ಮಾಗುಂಡಿಯ ಎಂ.ಖಾಸಿಂ ಎಂಬಾತನೇ ಶಿಕ್ಷೆಗೆ ಒಳಗಾದ ಆರೋಪಿ.
ಈತ ಭದ್ರಾ ಸೈಟ್ ಹೆಮ್ಮಕ್ಕಿ ಗ್ರಾಮದ ಅಂಗಡಿ ಮಳಿಗೆಯಲ್ಲಿ ಕಳೆದ ಆರೇಳು ವರ್ಷಗಳಿಂದ ಗುಜರಿ ವ್ಯಾಪಾರ ಮಾಡಿ ಕೊಂಡಿದ್ದ. ಈತನ ಅಂಗಡಿಗೆ ಸಮಯ ಕಳೆಯಲೆಂದು 15 ವರ್ಷದ ಬಾಲಕ ಬರುತ್ತಿದ್ದ. ಈ ಬಾಲಕನ ಮುಗ್ಧತೆಯನ್ನು ದುರುಪ ಯೋಗಪಡಿಸಿಕೊಂಡು ಆತ ತನ್ನ ಲೈಂಗಿಕ ತೃಷೆಗೆ ಬಳಸಿಕೊಂಡಿದ್ದ ಎನ್ನಲಾಗಿದೆ. ಈ ವಿಚಾರವನ್ನು ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿ ಬಾಲಕನನ್ನು ಸುಮ್ಮನಾಗಿಸಿದ್ದ. ಈ ನಡುವೆ ಬಾಲಕನ ಜೊತೆ ನಡೆಸಿದ ಅಸ್ವಾಭಾವಿಕ ಲೈಂಗಿಕ ಕೃತ್ಯವನ್ನು ಯಾರೋ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಅದು ವೈರಲ್ ಆಗಿತ್ತು. ವೈರಲ್ ಆದ ವಿಚಾರ ಬಾಲಕನ ತಾಯಿಗೆ ಗೊತ್ತಾಗಿ ಅವರು ಬಾಲಕನನ್ನು ವಿಚಾರಿಸಿದಾಗ ಈ ಕೃತ್ಯ ನಡೆಯುತ್ತಿದ್ದುದನ್ನು ಒಪ್ಪಿಕೊಂಡಿದ್ದು, ಈ ಬಗ್ಗೆ ಕಳಸ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕಳಸ ವೃತ್ತ ನಿರೀಕ್ಷಕ ಪ್ರಕಾಶ್, ಪಿಎಸ್ಐ ಚಂದ್ರಶೇಖರ್, ಮಹಿಳಾ ಕಾನ್‌ಸ್ಟೇಬಲ್ ಮೇನಕಾ, ಇತರ ಸಿಬ್ಬಂದಿ ಎ.ಬಿ.ಪರಮೇಶ, ಶಿವಕುಮಾರ್ ಮತ್ತು ಗಿರೀಶ್ ಅವರನ್ನು ಒಳಗೊಂಡ ತಂಡ ತನಿಖೆ ನಡೆಸಿ ಸಾಕ್ಷ್ಯ ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೋಕ್ಸೋ ಎಫ್.ಟಿ.ಎಸ್.ಈ- ಇದರ ನ್ಯಾಯಾಧೀಶ ರಾಘವೇಂದ್ರ ಕುಲಕರ್ಣಿ ಅವರು ಆರೋಪಿ ಎಂ.ಖಾಸಿಂ ವಿರುದ್ಧ ಆರೋಪ ಸಾಬೀತಾದ್ದರಿಂದ ಪೋಕ್ಸೋ ಕಾಯ್ದೆ ಕಲಂ 4(2) ಮತ್ತು 6 ರ ಅಡಿ 20 ವರ್ಷಗಳ ಕಠಿಣ ಶಿಕ್ಷೆ, 25 ಸಾವಿರ ರೂ. ದಂಡ, ಭಾರತೀಯ ನ್ಯಾಯ ಸಂಹಿತೆ ಕಲಂ 351 (2) ರಡಿ ಒಂದು ವರ್ಷ ಕಠಿಣ ಶಿಕ್ಷೆ ₹10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಭರತ್ ಕುಮಾರ್ ವಾದ ಮಂಡಿಸಿದ್ದರು.