ಸಾರಾಂಶ
ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಆರೋಪಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎಫ್‌ಟಿಎಸ್‌ಸಿ ನ್ಯಾಯಾಧೀಶ ನಿಂಗೌಡ ಪಾಟೀಲ ತೀರ್ಪು ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಹಾವೇರಿ
ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಆರೋಪಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎಫ್‌ಟಿಎಸ್‌ಸಿ ನ್ಯಾಯಾಧೀಶ ನಿಂಗೌಡ ಪಾಟೀಲ ತೀರ್ಪು ನೀಡಿದ್ದಾರೆ.ಹುಬ್ಬಳಿ ತಾಲೂಕು ಕುರಡಿಕೇರಿ ಗ್ರಾಮದ ಶೆಟ್ಟೆಪ್ಪ ಬಸಪ್ಪ ವಡ್ಡರ ಮರಣ ದಂಡನೆಗೆ ಗುರಿಯಾದ ಆರೋಪಿ.
ಶಿಗ್ಗಾಂವಿ ತಾಲೂಕು ಖುರ್ಸಾಪುರ ಗ್ರಾಮದಲ್ಲಿ 2019ರ ಮೇ 6ರಂದು ಮದುವೆ ಸಮಾರಂಭಕ್ಕೆಂದು ಸಂತ್ರಸ್ತ ಕುಟುಂಬವು ಆಗಮಿಸಿತ್ತು. ಮದುವೆ ಮನೆಯವರು ಸಮೀಪದ ಯಲ್ಲವ್ವ ವಡ್ಡರ ಎಂಬವರ ಮನೆಯಲ್ಲಿ ಉಳಿದುಕೊಳ್ಳಲು ಹೇಳಿದ್ದರು. ತನ್ನ 7 ವರ್ಷದ ಮಗಳನ್ನು ಅಲ್ಲಿಯೇ ಮಲಗಿಸಿ ತಾಯಿ ಹಾಗೂ ಕುಟುಂಬದವರು ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಆರೋಪಿ ಶೆಟ್ಟೆಪ್ಪ ಬಸಪ್ಪ ವಡ್ಡರ ಉಳಿದುಕೊಳ್ಳಲು ಕೊಟ್ಟ ಮನೆಯ ಪಕ್ಕದ ಮನೆಯ ಶೌಚಾಲಯದಲ್ಲಿ ರಾತ್ರಿ 10 ಗಂಟೆಯ ವೇಳೆಗೆ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದ.ಬಾಲಕಿಯನ್ನು ಹಾಗೆ ಬಿಟ್ಟರೆ ಹೊರಗೆ ಹೋಗಿ ವಿಷಯ ಹೇಳುತ್ತಾಳೆ ಎಂದು ಆರೋಪಿತನು ಬಾಲಕಿಯ ಕುತ್ತಿಗೆಯನ್ನು ಹಿಚುಕಿ ಕೊಲೆ ಮಾಡಿ ಶೌಚಾಲಯದಲ್ಲಿಯೇ ಎಸೆದು ಹೋಗಿದ್ದ. ಈ ಕುರಿತು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಆರ್.ಎಫ್. ದೇಸಾಯಿ ಪ್ರಕರಣದ ತನಿಖೆಯನ್ನು ನಡೆಸಿ ದೋಷಾರೋಪಣಾ ಪತ್ರವನ್ನು ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆರೋಪಿಯ ಮೇಲಿನ ಆರೋಪ ಸಾಬೀತಾದ ಹಿನ್ನೆಲೆ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ನಿಂಗೌಡ ಪಾಟೀಲ ಅಪರಾಧಿಗೆ ಮರಣ ದಂಡನೆ ಶಿಕ್ಷೆ ಮತ್ತು ₹ 1,50,000 ದಂಡ ವಿಧಿಸಿದ್ದಾರೆ. ಇದರಲ್ಲಿ ಮೃತ ಬಾಲಕಿಯ ಪಾಲಕರಿಗೆ ₹ 75 ಸಾವಿರ ಪರಿಹಾರ ಹಾಗೂ ರಾಜ್ಯ ಸರ್ಕಾರದ ನೊಂದವರ ಪರಿಹಾರ ನಿಧಿ ಯೋಜನೆಯಡಿ ಇರುವ ಪರಿಹಾರ ನಿಧಿಯಿಂದ ಸರ್ಕಾರವು ಮೃತ ಬಾಲಕಿಯ ಪಾಲಕರಿಗೆ ₹10 ಲಕ್ಷ ಪರಿಹಾರ ನೀಡಬೇಕೆಂದು ತೀರ್ಪು ನೀಡಿ ಆದೇಶಿದ್ದಾರೆ.ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಜಯಕುಮಾರ ಶಂಕರಗೌಡ ಪಾಟೀಲ ವಾದ ಮಂಡಿಸಿದ್ದರು.