ಎಸ್‌ಎಫ್‌ಸಿ ಅನುದಾನಕ್ಕೆ ಪಾಂಡವಪುರ ಪುರಸಭೆ ಸದಸ್ಯರಿಂದ ಅನುಮೋದನೆ

| Published : May 16 2025, 02:15 AM IST

ಎಸ್‌ಎಫ್‌ಸಿ ಅನುದಾನಕ್ಕೆ ಪಾಂಡವಪುರ ಪುರಸಭೆ ಸದಸ್ಯರಿಂದ ಅನುಮೋದನೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದು, ಮುಸ್ಲಿಂ, ಭೌದ್ಧ, ಸಿಖ್ ಸೇರಿದಂತೆ ಯಾವುದೇ ಧರ್ಮ, ಜಾತಿಯವರು ದೇಶದ್ರೋಹದ ಕೆಲಸದಲ್ಲಿ ಭಗಿಯಾದರೆ ಅವರಿಗೆ ಕಠಿಣ ದಂಡನೆಯ ಶಿಕ್ಷೆ ವಿಧಿಸಬೇಕು. ದೇಶದಲ್ಲಿ ವಾಸವಿರುವ ಪ್ರತಿಯೊಬ್ಬರಿಗೂ ಈ ಕಾನೂನು ಅನ್ವಯವಾಗಬೇಕು. ಆಗ ಮಾತ್ರ ದೇಶದಲ್ಲಿ ಶಾಂತಿ ವಾತಾವರಣ ನಿರ್ಮಾಣವಾಗುತ್ತದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪುರಸಭೆಯ 2025-26ನೇ ಸಾಲಿಗೆ ಎಸ್‌ಎಫ್‌ಸಿ ಮುಕ್ತ ನಿಧಿಯಲ್ಲಿ ಬಂಡವಾಳ ಆಸ್ತಿ, ಸೃಜನೆಗಾಗಿ ಹಂಚಿಕೆಯಾಗಿದ್ದ ಅನುದಾನಕ್ಕೆ ಗುರುವಾರ ಕರೆಯಲಾಗಿದ್ದ ತುರ್ತು ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಜ್ಯೋತಿಲಕ್ಷ್ಮೀ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ನಿರ್ದೇಶನದಂತೆ ಉಳಿಕೆಯಾಗಿರುವ ಎಸ್‌ಎಫ್‌ಸಿ ಅನುದಾನಕ್ಕೆ ಸದಸ್ಯರಿಂದ ಅನುಮೋದನೆ ಪಡೆದುಕೊಳ್ಳಲಾಯಿತು.

ಎಸ್‌ಎಫ್‌ಸಿ ಅನುದಾನ ಒಟ್ಟು ಮೊತ್ತ 16 ಲಕ್ಷ ರು.ಗಳಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ 1.16 ಲಕ್ಷ, ವಿಕಲಚೇತನರ ಕಲ್ಯಾಣಕ್ಕೆ 0.80 ಲಕ್ಷ, ಉಳಿಕೆ ಅನುದಾನದಲ್ಲಿ ಪಟ್ಟಣದ ಎರಡು ಹಿಂದು ಸ್ಮಶಾನಗಳನ್ನು 3.4 ಲಕ್ಷ ಅನುದಾನದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಸರ್ವಾನುಮತದಿಂದ ಒಪ್ಪಿಗೆ ನೀಡಿತ್ತು.

ಪುರಸಭೆ 2024 ನೇ ಸಾಲಿನ 15ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಡಿಯಲ್ಲಿ ಮಂಜೂರಾಗಿದ್ದ 44.50 ಲಕ್ಷದಲ್ಲಿ 2.10 ಲಕ್ಷ ವಿನಿಯೋಗಿಸಲಾಗಿದ್ದು, ಉಳಿಕೆ 42.40 ಲಕ್ಷ ಅನುದಾನಕ್ಕೆ ಬದಲಿ ಕ್ರಿಯಾಯೋಜನೆ ರೂಪಿಸಲಾಯಿತು.

ಈ ವೇಳೆ ಪುರಸಭೆ ಸದಸ್ಯರು ಮಾತನಾಡಿ, ಭಾರತದಲ್ಲಿ ಹುಟ್ಟಿ ಇಲ್ಲೇ ವಾಸಿಸುವ ಬೆರಳೆಣಿಕೆ ಜನರು, ದೇಶದ್ರೋಹದ ಕೃತ್ಯಗಳಲ್ಲಿ ಪ್ರತೇಕ್ಷ ಅಥವಾ ಪರೋಕ್ಷವಾಗಿ ಭಾಗಿಯಾಗುತ್ತಿದ್ದಾರೆ. ಇಂತಹ ದೇಶದ್ರೋಹಿಗಳಿಗೆ ಸಂವಿಧಾನ ನೀಡಿರುವ ಮೂಲ ಹಕ್ಕುಗಳನ್ನು ನೀಡಬಾರದು. ಜತೆಗೆ ಮತದಾನದ ಹಕ್ಕು, ಪಡಿತರ ಚೀಟಿ, ಪಾಸ್‌ಪೋರ್ಟ್, ಜತೆಗೆ ಭಾರತದ ಪೌರತ್ವವನ್ನು ರದ್ದುಗೊಳಿಸಬೇಕು. ಇಂತವರು ಬದುಕಿದ್ದರು ಜೀವಂತ ಶವವಾಗಿರಬೇಕು. ಈ ರೀತಿಯ ಕಠಿಣ ಕಾನೂನುಗಳನ್ನು ರೂಪಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಹಿಂದು, ಮುಸ್ಲಿಂ, ಭೌದ್ಧ, ಸಿಖ್ ಸೇರಿದಂತೆ ಯಾವುದೇ ಧರ್ಮ, ಜಾತಿಯವರು ದೇಶದ್ರೋಹದ ಕೆಲಸದಲ್ಲಿ ಭಗಿಯಾದರೆ ಅವರಿಗೆ ಕಠಿಣ ದಂಡನೆಯ ಶಿಕ್ಷೆ ವಿಧಿಸಬೇಕು. ದೇಶದಲ್ಲಿ ವಾಸವಿರುವ ಪ್ರತಿಯೊಬ್ಬರಿಗೂ ಈ ಕಾನೂನು ಅನ್ವಯವಾಗಬೇಕು. ಆಗ ಮಾತ್ರ ದೇಶದಲ್ಲಿ ಶಾಂತಿ ವಾತಾವರಣ ನಿರ್ಮಾಣವಾಗುತ್ತದೆ ಎಂದು ಪುರಸಭೆಯಲ್ಲಿ ಈ ನಿರ್ಣಯವನ್ನು ಮುಖ್ಯಾಧಿಕಾರಿಗಳು ಸರ್ಕಾರಕ್ಕೆ ಕಳುಹಿಸಿಕೊಡಬೇಕು ಎಂದು ಆಗ್ರಹಿಸಿದರು.

ಪಟ್ಟಣದ ಬೀರಶೆಟ್ಟಹಳ್ಳಿ ಮತ್ತು ಶಾಂತಿನಗರದ ಹಿಂದು ಸ್ಮಶಾನಗಳಲ್ಲಿ ಮೂಲ ಸೌಕರ್ಯವಿಲ್ಲ. ಸ್ಮಶಾನ ಅಭಿವೃದ್ಧಿಗೆ 3.4 ಲಕ್ಷ ಮೀಸಲಿರಿಸಿ ಸಭೆ ಒಪ್ಪಿಗೆ ಪಡೆಯಲು ನಿರ್ಧರಿಸಲಾಗಿದೆ. ಅನುದಾನ ಸಮಾನ ಹಂಚಿಕೆ ಮಾಡಿ ಎರಡು ಸ್ಮಶಾನಕ್ಕೆ ಅಗತ್ಯವಿರುವ ವಿದ್ಯುತ್ ದೀಪ, ಕುಡಿಯುವ ನೀರು ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ಒತ್ತಾಯಿಸಿದರು.

ಸಭೆ ಪ್ರಾರಂಭಕ್ಕೂ ಮುನ್ನ ಪಹಲ್ಗಾಂ ದಾಳಿಯಲ್ಲಿ ಜೀವ ಕಳೆದುಕೊಂಡ ಭಾರತೀಯರು. ಯುದ್ದದಲ್ಲಿ ವೀರ ಮರಣವನ್ನಪ್ಪಿದ್ದ ಯೋಧರಿಗೆ ಸಂತಾಪ ಸೂಚಿಸಲಾಯಿತು. ಪಾಕಿಸ್ತಾನದ ಉಗ್ರರ ಅಡಗು ಧ್ವಂಸಗೊಳಿಸಿದ ಯೋಧರಿಗೆ ಅಭಿನಂದನೆ ಸಲ್ಲಿಸಲಾಯಿತು.

ಪುರಸಭೆ 23 ಚುನಾಯಿತ ಹಾಗೂ ಸರ್ಕಾರದ ನಾಮ ನಿರ್ದೇಶಿತ ಸದಸ್ಯರು ಐವರು ಸದಸ್ಯರು ಸೇರಿದಂತೆ ಒಟ್ಟು28 ಸದಸ್ಯ ಬಲ ಹೊಂದಿದೆ. ಅಧ್ಯಕ್ಷರನ್ನು ಒಳಗೊಂಂಡತೆ 14 ಸದಸ್ಯರು ಮಾತ್ರ ಸಭೆಯಲ್ಲಿ ಹಾಜರಿದ್ದು ಅರ್ಧದಷ್ಟು ಸದಸ್ಯರು ಗೈರಾಗಿದ್ದರು. ಸಭೆಗೆ ಕೋರಮ್ ಇಲ್ಲದಿದ್ದರು ಸಭೆ ಆರಂಭಿಸಿ ಕೆಲ ಕ್ರಿಯಾ ಯೋಜನೆಗಳಿಗೆ ಅನುಮೋದನೆ ಪಡೆದುಕೊಳ್ಳಲಾಯಿತು. ಜೆಡಿಎಸ್‌ನ ಬಹುತೇಕ ಸದಸ್ಯರು ಸಭೆಯಿಂದ ಹೊರಗುಳಿದಿದ್ದು ವಿಶೇಷವಾಗಿತ್ತು.

ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್, ಎಂಜಿನಿಯರ್‌ಗಳಾದ ಚೌಡಪ್ಪ, ಯಶಸ್ವಿನಿ, ಸದಸ್ಯರಾದ ಯಶವಂತಕುಮಾರ್, ಎಂ.ಗಿರೀಶ್, ಆರ್.ಸೋಮಶೇಖರ್, ಲಾಯರ್ ಮುರುಳಿ, ಚಂದ್ರು, ಶಿವಕುಮಾರ್, ಜಯಲಕ್ಷ್ಮಮ್ಮ, ಗೀತಾ ಅರ್‍ಮುಗಂ, ಪಟೇಲ್ ರಮೇಶ್ ಇತರರು ಇದ್ದರು.