ಸಾರಾಂಶ
ತಾಲೂಕಿನ ತುಮ್ಮಿನಕಟ್ಟಿ ಗ್ರಾಮಕ್ಕೆ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಬಸ್ ಬಿಡಬೇಕು ಹಾಗೂ ಪರೀಕ್ಷೆಯ ಸಮಯಕ್ಕೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ತಾಲೂಕಿನ ತುಮ್ಮಿನಕಟ್ಟಿ ಗ್ರಾಮಕ್ಕೆ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಬಸ್ ಬಿಡಬೇಕು ಹಾಗೂ ಪರೀಕ್ಷೆಯ ಸಮಯಕ್ಕೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ತಾಲೂಕು ಸಮಿತಿ ವತಿಯಿಂದ ಶನಿವಾರ ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳ ಮೂಲಕ ಡಿಪೋ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಲಾಯಿತು.ಈ ಸಮಯದಲ್ಲಿ ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಶ್ರೀಧರ ಸಿ. ಮಾತನಾಡಿ, ವಿದ್ಯಾರ್ಥಿಗಳು ಪ್ರತಿದಿನ ವಿದ್ಯಾಭ್ಯಾಸದ ಉದ್ದೇಶದಿಂದ ತಾಲೂಕಿನ ವಿವಿಧ ಗ್ರಾಮಗಳಿಂದ ನಗರದ ಕಾಲೇಜುಗಳಿಗೆ ಬರಬೇಕಾಗಿದೆ. ಬಸ್ ಇಲ್ಲ ಎಂದು ಹೇಳಿ ಎಲ್ಲಾ ಬಸ್‌ಗಳನ್ನು ನಾನ್ ಸ್ಟಾಪ್ ಮಾಡಿ ಬಸ್ಸಿನ ಅನನುಕೂಲತೆಯನ್ನು ಸೃಷ್ಟಿ ಮಾಡುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಾರಿಗೆ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಹಿನ್ನಡೆಯಾಗುತ್ತಿದೆ. ಅಲ್ಲದೆ ಸಾರ್ವಜನಿಕರಿಗೂ ಸಮಸ್ಯೆಗಳಾಗುತ್ತಿವೆ. ಆದ್ದರಿಂದ ಈ ಕೂಡಲೇ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಸಮರ್ಪಕವಾಗಿ ಬಸ್ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿ ಮುಖಂಡ ವಿನಾಯಕ ಪಿ. ಮಾತನಾಡಿ, ತುಮ್ಮಿನಕಟ್ಟಿ ಗ್ರಾಮದಿಂದ ರಾಣಿಬೆನ್ನೂರು ನಗರಕ್ಕೆ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ಅನೇಕ ಬಾರಿ ಬಸ್ ಬಿಡಲು ಮನವಿ ಮಾಡಿಕೊಂಡರು ಬಸ್ ಬಿಡುತ್ತಿಲ್ಲ. ಇದರಿಂದ ತರಗತಿಗಳಿಗೆ ಬೇಗನೆ ಹೋಗಲು ಸಾಧ್ಯವಾಗುತ್ತಿಲ್ಲ. ವ್ಯಾಪಾರಸ್ಥರು, ಕಾರ್ಮಿಕರು, ರೈತ ಮಾರುಕಟ್ಟೆಯ ವ್ಯವಹಾರಗಳಿಗೆ ನಗರಕ್ಕೆ ಹೋಗಲು ಸರಿಯಾದ ಸಮಯಕ್ಕೆ ಬಸ್‌ಗಳಿಲ್ಲದೆ ಪರಾದಾಡುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ ಹಲವಾರು ಸಬೂಬುಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಆದ್ದರಿಂದ ಪ್ರಯಾಣಿಕರ ಹಿತದೃಷ್ಟಿಯಿಂದ ಸಮಯಕ್ಕೆ ಸರಿಯಾಗಿ ಅಂದರೆ ಬೆಳಗ್ಗೆ 8 ಗಂಟೆಗೆ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕು. ಒಂದು ವೇಳೆ ಬಸ್ಸಿನ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ಮುಂದಾಗದಿದ್ದರೆ ಬಸ್ ನಿಲ್ದಾಣ ಬಂದ್ ಮಾಡಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.ನವೀನ್ ಎ.ಆರ್., ಲಿಂಗರಾಜ ಎಂ, ಮಲ್ಲಪ್ಪ, ಬಸವರಾಜ, ರುದ್ರಗೌಡ, ಜಗದೀಶ ಎಂ., ಮೃತುಂಜಯ, ರಮೇಶ, ಪ್ರವೀಣ ಯು.ಎಸ್. ಇತರರಿದ್ದರು.