ಹಾಸ್ಟೆಲ್‌ ಪ್ರವೇಶ ಆಯ್ಕೆಪಟ್ಟಿ ಬಿಡುಗಡೆ ಮಾಡಲು ಎಸ್ಎಫ್ಐ ಆಗ್ರಹ

| Published : Jul 30 2025, 12:46 AM IST

ಸಾರಾಂಶ

ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಶಾಲಾ- ಕಾಲೇಜು ಆರಂಭವಾಗಿ ಎರಡು ತಿಂಗಳು ಕಳೆದರೂ ಹಾಸ್ಟೆಲ್ ಬಯಸಿ ಅರ್ಜಿ ಹಾಕಿದ ವಿದ್ಯಾರ್ಥಿಗಳ ಪ್ರವೇಶ ಮಾಡಿಕೊಂಡಿಲ್ಲ ಎಂದರು.

ಹಾವೇರಿ: ಕಾಲೇಜುಗಳು ಪ್ರಾರಂಭವಾಗಿ ಎರಡು ತಿಂಗಳು ಕಳೆದರೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್ ಪ್ರವೇಶ ಆಯ್ಕೆ ಪಟ್ಟಿ ಬಿಡುಗಡೆ ವಿಳಂಬ ಖಂಡಿಸಿ ಹಾಗೂ ಹಾಸ್ಟೆಲ್ ಬಯಸಿ ಅರ್ಜಿ ಹಾಕಿದ ಎಲ್ಲ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ ಎಸ್ಎಫ್ಐ ಕಾರ್ಯಕರ್ತರು ಅಲ್ಪಾಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಶಾಲಾ- ಕಾಲೇಜು ಆರಂಭವಾಗಿ ಎರಡು ತಿಂಗಳು ಕಳೆದರೂ ಹಾಸ್ಟೆಲ್ ಬಯಸಿ ಅರ್ಜಿ ಹಾಕಿದ ವಿದ್ಯಾರ್ಥಿಗಳ ಪ್ರವೇಶ ಮಾಡಿಕೊಂಡಿಲ್ಲ. ಈಗಾಗಲೇ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯೇ ನೇರವಾಗಿ ತಂತ್ರಾಂಶದಲ್ಲಿ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದ್ದರೂ ತಾಲೂಕಿನ ಶ್ರೀಕಂಠಪ್ಪ ಬಡಾವಣೆ ನಗರದಲ್ಲಿರುವ ಬಾಲಕಿಯರ ವಸತಿನಿಲಯಕ್ಕೆ ಪ್ರವೇಶಾತಿ ಬಯಸಿ ಅರ್ಜಿ ಹಾಕಿದ ವಿದ್ಯಾರ್ಥಿಗಳಿಗೆ ವಸತಿನಿಲಯದ ಮೇಲ್ವಿಚಾರಕರು ದಾಖಲಾತಿ ವಿಚಾರವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿಲ್ಲ. ಕೂಡಲೇ ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಪ್ರವೇಶಾತಿ ನೀಡಬೇಕು ಎಂದು ಆಗ್ರಹಿಸಿದರು.

ಎಸ್ಎಫ್ಐ ಮುಖಂಡ ಕೃಷ್ಣ ನಾಯ್ಕ ಮಾತನಾಡಿ, ಹಾಸ್ಟೆಲ್ ಪ್ರವೇಶ ಬಯಸಿ ಅರ್ಜಿ ಹಾಕಿದ ವಿದ್ಯಾರ್ಥಿಗಳು ಗ್ರಾಮಗಳಿಂದ ಕಾಲೇಜುಗಳಿಗೆ ದಿನನಿತ್ಯವೂ ಹಣ ಕೊಟ್ಟು ಬರುತ್ತಿದ್ದಾರೆ. ಒಂದೆಡೆ ಅನೇಕ ಗ್ರಾಮಗಳಿಗೆ ಬಸ್ ಸೌಲಭ್ಯ ಇಲ್ಲ ಮತ್ತು ಅನೇಕ ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ಅರ್ಜಿ ಹಾಕಿ ಆಯ್ಕೆ ಪಟ್ಟಿ ಪ್ರಕಟಿಸುತ್ತಾರೆ ಎಂದು ಬಕಪಕ್ಷಿಗಳ ಹಾಗೆ ಕಾಯುತ್ತಿದ್ದಾರೆ. ಅನೇಕ ವಿದ್ಯಾರ್ಥಿಗಳು ದೂರದ ಊರಿನಿಂದ ನೂರಾರು ರುಪಾಯಿ ಖರ್ಚು ಮಾಡಿಕೊಂಡು ಬರುತ್ತಿದ್ದಾರೆ.

ಇಲಾಖೆಯೇ ಆಯ್ಕೆಗೊಳಿಸುವುದರಿಂದ ವಿದ್ಯಾರ್ಥಿಗಳ ಆಯ್ಕೆ ಪಟ್ಟಿ ಬಿಡುಗಡೆಗೆ ವಿಳಂಬ ಮಾಡಬಾರದು. ಕೂಡಲೇ ಆಯ್ಕೆ ಪಟ್ಟಿ ಬಿಡುಗಡೆ ಮಾಡಿಸಬೇಕು ಹಾಗೂ ಎಲ್ಲ ಹಾಸ್ಟೆಲ್ ಗಳನ್ನು ಕೂಡಲೇ ಯೋಗ್ಯವಾದ ಅಗತ್ಯ ಸೌಲಭ್ಯಗಳನ್ನು ಒಳಗೊಂಡು, ಅರ್ಜಿ ಹಾಕಿದ ಎಲ್ಲ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಸೌಲಭ್ಯ ಒದಗಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಹಾಸ್ಟೆಲ್‌ಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.

ತಾಲೂಕು ಮುಖಂಡ ಅರುಣ್ ನಾಗವತ್ ಮಾತನಾಡಿದರು. ಮನವಿ ಪತ್ರ ಸ್ವೀಕರಿಸಿ ಇಲಾಖೆಯ ತಾಲೂಕು ಅಧಿಕಾರಿ ಆನಂದ ಮಾತನಾಡಿ, ಇಲಾಖೆಯೇ ನೇರವಾಗಿ ಆಯ್ಕೆ ಪಟ್ಟಿ ಬಿಡುಗಡೆ ಮಾಡುವುದರಿಂದ ಈಗಾಗಲೇ ಎಲ್ಲ ತಾಲೂಕಿನಲ್ಲೂ ಆಯ್ಕೆಯಾದ ವಿದ್ಯಾರ್ಥಿಗಳ ಪ್ರವೇಶ ಮಾಡಿದ್ದಾರೆ. ಶ್ರೀಕಂಠಪ್ಪ ಬಡಾವಣೆ ನಗರದಲ್ಲಿರುವ ವಸತಿನಿಲಯದಲ್ಲಿ ಸ್ವಲ್ಪ ವಿಳಂಬವಾಗಿದ್ದು, ಕೂಡಲೇ ಸರಿಪಡಿಸಲು ಹೇಳುತ್ತೇವೆ. ನಾಳೆಯಿಂದ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡರಾದ ಮಹಮದ್ ಹುಸೇನ್, ವಿಮಲನಾಥ ಬಳಿಗಾರ, ಸೀಮಾ ಬಾನು ಬೂದಿಹಾಳ, ಹಜರತ್‌ಬಿ ವಿ., ಚೈತ್ರಾ ಕೊರವರ್, ಧನುಷ್ ದೊಡ್ಡಮನಿ, ವಿಕಾಸಗೌಡ ಪಾಟೀಲ್ ಉಪಸ್ಥಿತರಿದ್ದರು.