ಶಾಲಾ-ಕಾಲೇಜುಗಳು ಆರಂಭವಾಗುವ ದಿನದಿಂದಲೇ ವಸತಿ ನಿಲಯ ಆರಂಭಿಸುವಂತೆ ಆಗ್ರಹಿಸಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು.
ಬ್ಯಾಡಗಿ: ಶಾಲಾ-ಕಾಲೇಜುಗಳು ಆರಂಭವಾಗುವ ದಿನದಿಂದಲೇ ವಸತಿ ನಿಲಯ ಆರಂಭಿಸುವಂತೆ ಆಗ್ರಹಿಸಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು.
ಡಾ. ಅಂಬೇಡ್ಕರ್ ವೃತ್ತದಿಂದ ಬಸ್ ನಿಲ್ದಾಣದವರೆಗೆ ಮೆರವಣಿಗೆ ಮೂಲಕ ಬೇಡಿಕೆ ಈಡೇರಿಸುವಂತೆ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಈ ವೇಳೆ ಮಾತನಾಡಿದ ರಾಜ್ಯ ಸಂಚಾಲಕ ಅರುಣ ನಗವತ್, ವಿದ್ಯಾರ್ಥಿಗಳ ಆಯ್ಕೆ ಪಟ್ಟಿ ಬಿಡುಗಡೆಗೆ ವಿಳಂಬದಿಂದ ವಸತಿ ನಿಲಯ ಆರಂಭವಾಗದೇ ಇರುವ ಕಾರಣ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ನಿತ್ಯವೂ ಹಣ ಕೊಟ್ಟು ಕಾಲೇಜುಗಳಿಗೆ ಬರುವಂತಾಗಿದೆ. ಬಸ್ ಸೌಲಭ್ಯವಿಲ್ಲದ ಬಹುತೇಕ ವಿದ್ಯಾರ್ಥಿಗಳು ವಸತಿ ನಿಲಯ ಆರಂಭವಾಗುವುದನ್ನೇ ಎದುರು ನೋಡುತ್ತಿದ್ದಾರೆ ಎಂದರು.
ಪ್ರಕ್ರಿಯೆ ಮೊದಲೇ ಮಾಡಿ: ಇಲಾಖೆಯೇ ಅರ್ಜಿಗಳನ್ನು ಪರಿಶೀಲನೆ ಮಾಡುವುದರಿಂದ ವಿಳಂಬ ಮಾಡದೆ ಕೂಡಲೇ ಮುತುವರ್ಜಿ ವಹಿಸಿ ಕೂಡಲೇ ಆಯ್ಕೆ ಪಟ್ಟಿ ಬಿಡುಗಡೆ ಮಾಡಬೇಕು ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೂ ವಸತಿ ಸೌಲಭ್ಯ ಒದಗಿಸಬೇಕೆಂಬ ಸರ್ಕಾರದ ಆದೇಶವಿರುವದರಿಂದ ಅರ್ಜಿ ಹಾಕಿದ ದಾಖಲೆಗಳನ್ನು ಪರಿಶೀಲನೆ ನಡೆಸಿ ವಸತಿ ಸೌಲಭ್ಯ ಒದಗಿಸುವಂತೆ ಆಗ್ರಹಿಸಿದರಲ್ಲದೇ ಇದಕ್ಕಾಗಿ ತಿಂಗಳುಗಟ್ಟಲೇ ಕಾಯದೇ ಆಯ್ಕೆ ಪ್ರಕ್ರಿಯೆ ಬಹುಬೇಗನೆ ಪೂರ್ಣಗೊಳಿಸುವಂತೆ ಆಗ್ರಹಿಸಿದರು.ಮೆರಿಟ್ ಪದ್ಧತಿ ಕೈಬಿಡಿ: ವಿದ್ಯಾರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡುವುದನ್ನು ಕೈಬಿಟ್ಟು ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಸೌಲಭ್ಯ ಯೋಜನೆ ವಿಸ್ತರಣೆ ಮಾಡಬೇಕು, ಹಾಸ್ಟೆಲ್‌ಗಳಲ್ಲಿ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಒದಗಿಸಿ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಹಾಸ್ಟೆಲ್ ಗಳನ್ನು ಕಲ್ಪಿಸುವಂತೆ ಆಗ್ರಹಿಸಿದರು.
ಶಾಲಾ-ಕಾಲೇಜ್ ಆರಂಭದ ಜೊತೆಗೆ ಹಾಸ್ಟೆಲ್ ಪ್ರಾರಂಭಿಸಬೇಕು, ಆಯ್ಕೆ ಪಟ್ಟಿ ಬಿಡುಗಡೆಗಾಗಿ ವಿಳಂಬ ಮಾಡಬಾರದು, ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಬೇಕು, ಮೆನು ಚಾರ್ಟ ಪ್ರಕಾರ ಗುಣಮಟ್ಟದ ಆಹಾರವನ್ನು ಸಮಯಕ್ಕೆ ಸರಿಯಾಗಿ ಒದಗಿಸಬೇಕು, ಯೋಗ್ಯವಾದ ಶುಚಿ ಸಂಭ್ರಮ ಕಿಟ್ ವಿತರಣೆ ಮಾಡಬೇಕು. ತಟ್ಟೆ, ಲೋಟ, ಬೆಡ್, ಬೇಡಸೀಟ್, ಹೊದಿಕೆ ಸೇರಿದಂತೆ ಅಗತ್ಯ ವಸ್ತುಗಳನ್ನು ಒದಗಿಸಬೇಕು. ಗ್ರಂಥಾಲಯ ಒದಗಿಸಬೇಕು, ಪಠ್ಯಪುಸ್ತಕ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳನ್ನು ಒದಗಿಸಬೇಕು, ಕಂಪ್ಯೂಟರ್ ಶಿಕ್ಷಣ ಒದಗಿಸಬೇಕು. ಫ್ರೀ ವೈಫೈ ನೀಡಬೇಕು, ಬಯೋಮೆಟ್ರಿಕ್ ಹಾಜರಾತಿ ಕೈಬಿಡಬೇಕು, ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ಕನಿಷ್ಠ ₹ 4500ಕ್ಕೆ ಏರಿಕೆ ಮಾಡುವಂತೆ ಮನವಿ ಸಲ್ಲಿಸಿದರು.ಈ ವೇಳೆ ಎಸ್ಎಫ್ಐ ಮುಖಂಡ ರಘು ಅಂಗಡಿ ಹಾಗೂ ಸವಿತಾ ಬಿಸ್ಮಣ್ಣನವರ, ಲಕ್ಷ್ಮಿ ಶಂಕ್ರಪ್ಪ, ಮಧು ಹಕಾರಿ, ವಿದ್ಯಾ ಕಿರವಾಡಿ, ಅನುಶ್ರೀ ಮುದ್ದಿನಕೊಪ್ಪ, ಪೂರ್ಣಿಮಾ ಅಂಗಡಿ, ವಿದ್ಯಾ ಹಾವೇರಿ, ಪೂಜಾ ಬೂದಗಟ್ಟಿ, ಪುಷ್ಪ ಬ್ಯಾಡಗಿ, ಚೈತ್ರ ಗೊಲ್ಲಣ್ಣನವರ, ಮುಷ್ಕನ್ ಸೌದಗಾರ, ಸಹನ ಗುಡುಗೂರು, ಯಶವಂತ್ ಬಿ.ಜಿ., ಸಂದೀಪ್ ಎಸ್., ಪವನ್ ಎಸ್., ಕುತೂಬೀನ್, ಅರ್ಫಾನ್, ಹೇಮಂತ್ ನಾಯ್ಕ್, ಪ್ರಶಾಂತ್, ಚೇತನ್ ಸಿ.ಬಿ. ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.