ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ನಗರದ ವೀರಶೈವ ವಿದ್ಯಾವರ್ಧಕ ಸಂಘದ ಶೆಟ್ರಗುರುಶಾಂತಪ್ಪ (ಎಸ್‌ಜಿ) ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕ ಟಿ.ಎಂ. ಲಿಂಗರಾಜ್ ಅವರ ಸೇವಾ ನಿವೃತ್ತಿ ಹೊಂದಿದ್ದದ ಪ್ರಯುಕ್ತ ಬೀಳ್ಕೊಡುಗೆ ಸಮಾರಂಭ ಜರುಗಿತು.ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೀವಿ ಸಂಘದ ಪದಾಧಿಕಾರಿಗಳು ಹಾಗೂ ಹಿತೈಷಿಗಳು, ಟಿ.ಎಂ. ಲಿಂಗರಾಜ್ ಅವರ ನಿವೃತ್ತ ಬದುಕಿಗೆ ಶುಭ ಹಾರೈಸಿದರಲ್ಲದೆ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸಿದ ಲಿಂಗರಾಜ್ ಅವರ ಕೊಡುಗೆಯನ್ನು ಸ್ಮರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವೀವಿ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್ ಅವರು, ಟಿ.ಎಂ. ಲಿಂಗರಾಜ್ ಅವರು ಕೌಶಲ್ಯಪೂರ್ಣ ಬೋಧನೆ, ವಿದ್ಯಾರ್ಥಿಗಳಿಗೆ ಕಲಿಕೆಗೆ - ಮನವರಿಕೆಗೆ ಮತ್ತು ಮನನಕ್ಕೆ ಪೂರಕವಾಗಿ ಇಂಗ್ಲೀಷ್ ಭಾಷೆಯನ್ನು ಬೋಧಿಸಿದ್ದಾರೆ. ಹೀಗಾಗಿಯೇ ಅವರು ಅಪಾರ ಶಿಷ್ಯ ಬಳಗಕ್ಕೆ ಪ್ರೀತಿಯ ಮೇಷ್ಟ್ರು ಎನಿಸಿಕೊಂಡಿದ್ದಾರೆ. ಮಿತಭಾಷಿಯಾಗಿರುವ ಲಿಂಗರಾಜ್ ಅವರು ತಮ್ಮಲ್ಲಿರುವ ಅಗಾಧ ಜ್ಞಾನವನ್ನು ಮಕ್ಕಳಿಗೆ ಧಾರೆ ಎರೆದು ಶಿಕ್ಷಕ ವೃತ್ತಿಯ ಪಾವಿತ್ರ್ಯವನ್ನು ಕಾಪಾಡಿದ್ದಾರೆ.ಕೌಶಲ್ಯಪೂರ್ಣವಾದ ಬೋಧನೆಯಿಂದಾಗಿ ಶಿಕ್ಷಕರು ಮಕ್ಕಳಿಗೆ ಆಪ್ತರಾಗುತ್ತಾರೆ. ಅಷ್ಟೇ ಅಲ್ಲ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗುತ್ತಾರೆ ಎಂಬುದಕ್ಕೆ ಲಿಂಗರಾಜ್ ಅವರು ಸಾಕ್ಷಿಯಾಗಿದ್ದಾರೆ ಎಂದು ಬಣ್ಣಿಸಿದರು.
ವೀವಿ ಸಂಘದ ಕಾರ್ಯದರ್ಶಿ ಡಾ.ಅರವಿಂದ ಪಾಟೇಲ್ ಅವರು ಮಾತನಾಡಿ, ಟಿ.ಎಂ. ಲಿಂಗರಾಜ್ ಅವರ ಆದರ್ಶನೀಯ ವ್ಯಕ್ತಿತ್ವದವರು. ಸ್ನೇಹಿಜೀವಿಗಳು. ಹೀಗಾಗಿಯೇ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಅವರ ಆಪ್ತಬಳಗ ಸಮಾರಂಭಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.ವೀವಿ ಸಂಘದ ಖಜಾಂಚಿ ಬೈಲುವದ್ದಿಗೇರಿ ಎರ‍್ರಿಸ್ವಾಮಿ ಹಾಗೂ ಎಎಸ್‌ಎಂ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷೆ ಕಾತ್ಯಾಯಿನಿ ಎಂ. ಮರಿದೇವಯ್ಯ, ಲಿಂಗರಾಜ್ ಅವರ ಸೇವಾ ನಿವೃತ್ತಿ ಜೀವನ ಸುಖವಾಗಿರಲಿ. ವೀವಿ ಸಂಘದ ಪ್ರಗತಿಗೆ ಅವರು ಶ್ರಮಿಸಲಿ ಎಂದು ಹಾರೈಸಿದರು.
ಸೇವಾನುಭವ ಕುರಿತು ಮಾತನಾಡಿದ ಟಿ.ಎಂ.ಲಿಂಗರಾಜ್ ಅವರು, 35 ವರ್ಷಗಳ ಸೇವೆ ತೃಪ್ತಿ ನೀಡಿದೆ. ವೀವಿ ಸಂಘದ ಸಿಬ್ಬಂದಿಗಳಾಗಿರುವ ನಾವು, ಸಂಘದ ಉತ್ತಮ ಆಡಳಿತಕ್ಕೆ - ಸಂಘದ ಹಿತಕ್ಕೆ ಸದಾಕಾಲ ಚಿಂತನೆ ನಡೆಸಿ, ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದಾಗ ಸಿಗುವ ಸಾರ್ಥಕತೆಯ ಭಾವ ಅನನ್ಯವಾದದ್ದು. ''''ಎನಗಿಂತ ಕಿರಿಯರಿಲ್ಲ'''' ಎನ್ನುವ ನಾಣ್ನುಡಿಯಂತೆ ಜೀವಿಸಿದ ನನಗೆ ನಿಮ್ಮೆಲ್ಲರ ಹಾರೈಕೆಗಳು ನೆಮ್ಮದಿ - ಸಮಾಧಾನ ನೀಡುತ್ತಿವೆ ಎಂದರು.ಮಹಾದಾನಿ ಕೆ.ಎಂ. ಪಾರ್ವತಮ್ಮ, ವೀವಿ ಸಂಘದ ಮಾಜಿ ಅಧ್ಯಕ್ಷ ಎಚ್.ಎಂ. ಗುರುಸಿದ್ದಸ್ವಾಮಿ, ನಿವೃತ್ತ ಪ್ರಾಂಶುಪಾಲ ಎಲ್.ಲಿಂಗನಗೌಡ, ಕೆ.ದ್ವಾರಕೀಶ್,
ಪಿ.ಬಸವನಗೌಡ, ವೀರಶೈವ ಸಮಾಜದ ಗಣ್ಯರಾದ ಪಲ್ಲೇದ ಜಗದೀಶ್, ಎಚ್.ಎಂ. ವೀರಭದ್ರಯ್ಯ, ಐ.ಎಂ. ಮಹೇಶ್ವರಯ್ಯ, ಜೆ. ಮಂಜುನಾಥ್, ಜಿ. ದಿವಾಕರ, ಎಚ್.ಎಂ. ಮಹೇಂದ್ರ ಕುಮಾರ್ ಉಪಸ್ಥಿತರಿದ್ದರು. ಟಿ.ಎಂ.ಲಿಂಗರಾಜ್ ದಂಪತಿಯನ್ನು ವೀವಿ ಸಂಘಗಳ ಕಾಲೇಜುಗಳ ಸಿಬ್ಬಂದಿ ಹಾಗೂ ಸ್ನೇಹಿತರು ಸನ್ಮಾನಿಸಿದರು.ಎಸ್‌ಜಿ ಪ್ರೌಢಶಾಲೆಯ ಮುಖ್ಯಗುರು ನಾಗರತ್ನ ಪಾಟೀಲ್, ಎಸ್‌ಜಿ ಕಾಲೇಜಿನ ಪ್ರಾಂಶುಪಾಲ ಶರಣಬಸವರಾಜ್, ಡಾ. ಸಂಪಿಗೆ ನಾಗರಾಜ್ ಹಾಗೂ ದೈಹಿಕ ಶಿಕ್ಷಕ ಶರಣಗೌಡ ಅವರು ಕಾರ್ಯಕ್ರಮ ನಿರ್ವಹಿಸಿದರು.