Shahapur Bandh: Temporary Halt, Protest Continues

-ಜನಜೀವನದಲ್ಲಿ ಅಸ್ತವ್ಯಸ್ತ: ಬಂದ್‌ ತಾತ್ಕಾಲಿಕ ಕೈಬಿಟ್ಟು, ಪ್ರತಿಭಟನೆ ಮುಂದುವರೆಸಲು ರೈತ ಸಂಘಟನೆಗಳ ನಿರ್ಧಾರ

--

ಕನ್ನಡಪ್ರಭ ವಾರ್ತೆ ಯಾದಗಿರಿ

ನಾರಾಯಣಪುರ ಜಲಾಶಯದ ಮೂಲಕ ಕಾಲುವೆಗಳಿಗೆ ನೀರು ಹರಿಸಿ, ರೈತರ ಬೆಳೆಗಳನ್ನು ಉಳಿಸಿಕೊಡಬೇಕು ಎಂದು ಆಗ್ರಹಿಸಿ ರೈತಪರ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ "ಶಹಾಪುರ ಬಂದ್‌ ", ಶನಿವಾರ ಸಂಜೆವರೆಗೂ ಮುಂದುವರೆದಿತ್ತು.

ಆದರೆ, ಜನಜೀವನ ಅಸ್ತವ್ಯಸ್ತ, ವ್ಯಾಪಾರ ವಹಿವಾಟುಗಳಲ್ಲಿ ಆರ್ಥಿಕ ನಷ್ಟ, ಸಾರ್ವಜನಿಕರಿಂದ ಹೊರಹೊಮ್ಮುತ್ತಿರುವ ವ್ಯಾಪಕ ಟೀಕೆಗಳು ಹಾಗೂ ವಾಹನಗಳ ಸಂಚಾರದಲ್ಲಿ ಅಡಚಣೆ ಮತ್ತು ಶಾಲಾ ಮಕ್ಕಳ ಪರೀಕ್ಷೆ ಹಿನ್ನೆಲೆಯಲ್ಲಿ "ಶಹಾಪುರ ಬಂದ್‌ " ಕರೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟಿರುವುದಾಗಿ ಘೋಷಿಸಿರುವ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚೆನ್ನಪ್ಪ ಆನೆಗುಂದಿ, ಒಂದು ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಚಳವಳಿ ಮುಂದುವರೆಸಲಾಗುವುದು ಎಂದು ತಿಳಿಸಿದ್ದಾರೆ.

ನಾರಾಯಣಪುರ ಜಲಾಶಯದಿಂದ ಡಿಸೆಂಬರ್ 30ರವರೆಗೆ ನಿರಂತರವಾಗಿ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ, ಕಳೆದ 10 ದಿನಗಳಿಂದ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟ ತೀವ್ರಗೊಂಡು, ಶುಕ್ರವಾರ ಶಹಾಪುರ ಬಂದ್ ಕರೆ ನೀಡಲಾಗಿತ್ತು. ಭೀಮರಾಯನಗುಡಿ ವೃತ್ತದಲ್ಲಿ ಹೆದ್ದಾರಿ

ತಡೆ ಹಾಗೂ ಬಸವೇಶ್ವರ ವೃತ್ತದಲ್ಲಿ ರೈತರು ಪ್ರತಿಭಟನೆ ನಡೆಸಿ, ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಶಾಸಕರು ರೈತರ ಹಿತ ಕಾಪಾಡಬೇಕು:

ರೈತರ ಹೋರಾಟ 10ನೇ ದಿನಕ್ಕೆ ಕಾಲಿಟ್ಟರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಐಸಿಸಿ ಸಭೆಯಲ್ಲಿ ನಮ್ಮ ಭಾಗದ ಶಾಸಕರು ರೈತರ ಪರವಾಗಿ ನೀರಿನ ಬೇಡಿಕೆ ಮಂಡಿಸಬೇಕಿತ್ತು. ಆದರೆ, ಅವರ ನಿರ್ಲಕ್ಷ್ಯವೇ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ಸಚಿವ ಎಂ.ಬಿ. ಪಾಟೀಲರು ತಮ್ಮ ಭಾಗಕ್ಕೆ 15 ಟಿಎಂಸಿ ನೀರು ಬೇಕೆಂದು ಪಟ್ಟುಹಿಡಿದು ಪಡೆದುಕೊಂಡಿದ್ದಾರೆ. ಅದೇ ರೀತಿಯಲ್ಲಿ ನಮ್ಮ ಭಾಗದ ಶಾಸಕರು ಕೂಡ ರೈತರ ಹಿತಕ್ಕಾಗಿ ಹೋರಾಡಬೇಕಿತ್ತು. ಡಿಸೆಂಬರ್ 30ರವರೆಗೆ ಕಾಲುವೆಗೆ ನೀರು ಹರಿಸಬೇಕು ಎಂದು ಬಿಜೆಪಿ ಯುವ ಮುಖಂಡ ಕರಣ ಸುಬೇದಾರ್‌ ಆಗ್ರಹಿಸಿದರು.

ರೈತ ಮುಖಂಡ ಶರಣು ಮಂದಾರವಾಡ ಮಾತನಾಡಿ, ಜಿಲ್ಲಾಧಿಕಾರಿಗಳು ನಾಳೆ ಅಥವಾ ನಾಡಿದ್ದು, ಪ್ರತಿಭಟನಾ ಸ್ಥಳಕ್ಕೆ ಆಗಮಿಸುವ ನಿರೀಕ್ಷೆಯಿದೆ. ನಾಳೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವುದರಿಂದ ಅವರ ಅನುಕೂಲಕ್ಕಾಗಿ ರಸ್ತೆಯ ಒಂದು ಭಾಗದಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಮುಖ್ಯಮಂತ್ರಿಗಳು ಹಾಗೂ ಮೂವರು ಜಿಲ್ಲಾ ಉಸ್ತುವಾರಿ ಸಚಿವರ ಶವಯಾತ್ರೆ ನಡೆಸಲಾಗುವುದು.

ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳಬೇಕು. ವ್ಯಾಪಾರಸ್ಥರಿಗೆ ಯಾವುದೇ ತೊಂದರೆ ನೀಡುವುದಿಲ್ಲ. ಇನ್ನೆರಡು ದಿನಗಳಲ್ಲಿ ನೀರು ಹರಿಸುವ ವಿಶ್ವಾಸವಿದೆ ಎಂದರು.

ಚುನಾವಣೆ ಬಂದಾಗ ಮಾತ್ರ ರಾಜಕಾರಣಿಗಳಿಗೆ ರೈತರು ನೆನಪಾಗುತ್ತಾರೆ. ಚುನಾವಣೆ ಮುಗಿದ ಬಳಿಕ ರೈತರ ಸಮಸ್ಯೆಗಳನ್ನು ಕೇಳುವವರೇ ಇಲ್ಲ. ಪ್ರತಿ ವರ್ಷವೂ ನೀರಿಗಾಗಿ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರೆಲ್ಲರೂ ಒಗ್ಗಟ್ಟಾಗಿ ಹೋರಾಟವನ್ನು ಬಲಪಡಿಸಬೇಕು. ಬೆಳೆಗಳಿಗೆ ನೀರು ಒದಗಿಸುವ ವಿಚಾರದಲ್ಲಿ ಸರ್ಕಾರಗಳು ರೈತರಿಗೆ ಅನ್ಯಾಯ ಮಾಡುತ್ತಿವೆ ಎಂದು ಶ್ರೀಕಾಂತ್ ಸುಬೇದಾರ್ ಆಕ್ರೋಶ ವ್ಯಕ್ತಪಡಿಸಿದರು. ನೂರಾರು ರೈತ ಮುಖಂಡರು ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಸಾರಿಗೆ ಮತ್ತು ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿತ್ತು.

....ಬಾಕ್ಸ್‌....

ನಾರಾಯಣಪುರ ಡ್ಯಾಂಗೆ ಮುತ್ತಿಗೆ!

ಸೋಮವಾರದವರೆಗೆ ಸರ್ಕಾರ ತನ್ನ ನಿಲುವು ಪ್ರಕಟಿಸದಿದ್ದಲ್ಲಿ ನಾರಾಯಣಪುರ ಡ್ಯಾಂಗೆ ಮುತ್ತಿಗೆ ಹಾಕುವ ಚಿಂತನೆ ನಡೆಸಲಾಗುತ್ತಿದೆ. ನಮ್ಮ ಚಳವಳಿ ಪೊಲೀಸರ ಅಥವಾ ಅಧಿಕಾರಿಗಳ ವಿರುದ್ಧವಲ್ಲ. ರೈತರ ಹಿತ ಕಾಪಾಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಸರ್ಕಾರದ ವಿರುದ್ಧ ನಮ್ಮ ಹೋರಾಟವಷ್ಟೇ. ಜಿಲ್ಲಾಧಿಕಾರಿಗಳು ಇಲ್ಲಿಗೆ ಬಂದು ರೈತರ ಸಮಸ್ಯೆಗಳನ್ನು ಆಲಿಸಿ, ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದ್ದಾರೆ. ಈ ಎಲ್ಲವುಗಳನ್ನೂ ಗಮನಿಸಿ, ಬಂದ್‌ ಕರೆ ತಾತ್ಕಾಲಿಕವಾಗಿ ಬಿಟ್ಟಿದ್ದು, ಒಂದು ಮಾರ್ಗದಲ್ಲಿ ಮಾತ್ರ ಹೆದ್ದಾರಿ ತಡೆ ಎಂದಿನಂತೆ ಮುಂದುವರೆಸುತ್ತೇವೆ. ರೈತರ ಸಮಸ್ಯೆಗೆ ಸರ್ಕಾರ ಗಂಭೀರವಾಗಿ ಸ್ಪಂದಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು.

- ಚೆನ್ನಪ್ಪ ಆನೆಗುಂದಿ, ಜಿಲ್ಲಾಧ್ಯಕ್ಷರು, ಪ್ರಾಂತ ರೈತ ಸಂಘ, ಯಾದಗಿರಿ.

(21ವೈಡಿಆರ್‌8)

...ಬಾಕ್ಸ್‌....

ಶಾಸಕರಿಂದ ಸ್ಪಂದನೆ ಇಲ್ಲ: ಯಾಳಗಿ

ರೈತರು ತಮ್ಮ ಬೆಳೆಗಳಿಗೆ ಅಗತ್ಯ ಪ್ರಮಾಣದ ನೀರನ್ನು ಒದಗಿಸುವಂತೆ ಆಗ್ರಹಿಸಿ ಹೋರಾಡುತ್ತಿದ್ದಾರೆ. ಶಹಾಪುರ ಬಂದ್ ಮಾಡಿ ರೈತರು ತಮ್ಮ ಹೋರಾಟ ತೀವ್ರಗೊಳಿಸಿದ್ದಾರೆ. ಆದರೆ, ಇದ್ಯಾವುದಕ್ಕೂ ಸಂಬಂಧಪಟ್ಟ ಅಧಿಕಾರಿಗಳಾಗಲೀ, ಕ್ಷೇತ್ರದ ಶಾಸಕರಾಗಲಿ ಕಿಂಚಿತ್ತು ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ರೈತರ ಸಂಕಷ್ಟಕ್ಕೆ ಕಿವಿಗೊಡದೆ, ಸ್ಪಂದಿಸದೆ ಸುಮ್ಮನಿರುವ ಶಾಸಕರ ನಡೆಗೆ ಧಿಕ್ಕಾರವಿದೆ. ರೈತರ ಸಮಸ್ಯೆ ಈ ಕೂಡಲೇ ಪರಿಹರಿಸಲು ಸಾಧ್ಯವಾಗದಿದ್ದರೆ ಕೂಡಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರೈತರೊಂದಿಗೆ ಸೇರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಕೈಜೋಡಿಸುವ ಕೆಲಸವನ್ನಾದರೂ ಮಾಡಿ. ಈ ಮೂಲಕ ತಮಗೆ ಮತ ಹಾಕಿ ತಮ್ಮನ್ನು ಶಾಸಕರನ್ನಾಗಿಸಿದ ಅಮಾಯಕ ಜನರ ಋಣ ತೀರಿಸಲಿ.

- ಅಮೀನರೆಡ್ಡಿ ಯಾಳಗಿ, ಜಿಲ್ಲಾ ಬಿಜೆಪಿಯ ನಿಕಟಪೂರ್ವ ಅಧ್ಯಕ್ಷ, ಯಾದಗಿರಿ.

(21ವೈಡಿಆರ್11)

-

* ಕನ್ನಡಪ್ರಭ ಚಿತ್ರಗಳು : ಮಂಜುನಾಥ ಬಿರಾದರ, ಸಗರ.

21ವೈಡಿಆರ್6 : ಶಹಾಪುರದಲ್ಲಿ ನಡೆದ ರೈತರ ಪ್ರತಿಭಟನೆ

21ವೈಡಿಆರ್‌7 : ಶಹಾಪುರ ಬಂದ್ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಹೆದ್ದಾರಿ ಮೇಲೆ ಸಾಲುಗಟ್ಟಿ ನಿಂತಿರುವ ಲಾರಿ, ಮುಂತಾದ ವಾಹನಗಳು.

21ವೈಡಿಆರ್9 : ಬಂದ್‌ ಹಿನ್ನೆಲೆಯಲ್ಲಿ ಪ್ರಯಾಣಿಕರು, ಸಾರ್ವಜನಿಕರ ಪರದಾಟ.

21ವೈಡಿಆರ್10 : ಬಸ್‌ ಸ್ಥಗಿತ ಹಿನ್ನೆಲೆ, ಗ್ರಾಮೀಣ ಭಾಗಗಳಿಂದ ಬರುವ ಶಾಲಾ ಮಕ್ಕಳು ದೂರದಿಂದ ನಡೆದುಕೊಂಡು ಬರುವ ಅನಿವಾರ್ಯತೆ ಉಂಟಾಗಿದೆ.