ಸಾರಾಂಶ
ಶಹಾಪುರ ಅರಣ್ಯಾಧಿಕಾರಿ ಕೊಲೆಗೆ ಸಂಬಂಧಿಸಿದಂತೆ ಐವರು ಆರೋಪಗಳನ್ನು ಬಂಧಿಸಲಾಗಿದೆ.
ಕನ್ನಡಪ್ರಭ ವಾರ್ತೆ ಯಾದಗಿರಿ
ಶಹಾಪುರ ನಗರದ ರೆಸ್ಟೋರೆಂಟ್‌ವೊಂದರ ಎದುರು ಜೂ.5 ರಂದು ನಡೆದಿದ್ದ ಅರಣ್ಯಾಧಿಕಾರಿ (ಡಿವೈಎಫ್‌ಓ) ಮಹೇಶ್ ಎಸ್. ಕನಕಟ್ಟಿ ಹತ್ಯೆಗೆ ಸಂಬಂಧಿಸಿ ಆಘಾತಕಾರಿ ಮಾಹಿತಿ ಇದೀಗ ಬಯಲಾಗಿದೆ. ಮೃತ ಅಧಿಕಾರಿಯನ್ನು ಅಟ್ಟಾಡಿಸಿ ಬರ್ಬರವಾಗಿ ಕೊಲೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.ಜೂ.6ರಂದು ಅನಾಮಧೇಯ ಶವವೊಂದು ಹೋಟೆಲ್ ಎದುರಿನ ರಸ್ತೆ ಬದಿ ಬಿದ್ದಿದೆ ಎಂಬ ಮಾಹಿತಿಯಿಂದ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದ ಪೊಲೀಸರು, ಅನುಮಾನಾಸ್ಪದ ಸಾವು (174 (ಸಿ) ಪ್ರಕರಣದಡಿ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಗುರುತಿನ ಚೀಟಿ ಆಧರಿಸಿ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದರು.
ಇದು ಸಹಜ ಸಾವಲ್ಲ, ಕೊಲೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದರಿಂದ ಜೂ.17 ರಂದು ಶಹಾಪುರ ನಗರ ಠಾಣೆಯಲ್ಲಿ ಐಪಿಸಿ 302 ರಡಿ ದೂರು (0113/2024) ದಾಖಲಾಗಿತ್ತು. ಈ ಸಂಬಂಧ ಬುಧವಾರ (ಜೂ.19) ಐವರನ್ನು ಬಂಧಿಸಲಾಗಿದೆ.ಜೂ.5 ರಂದು ರಾತ್ರಿ 8 ರಿಂದ 9-15 ರ ಸುಮಾರಿಗೆ ಶಹಾಪುರ ನಗರದ ಮೋಟಗಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಎದುರು ಈ ಘಟನೆ ನಡೆದಿದ್ದು, ನಾಲ್ಕೈದು ಜನರ ತಂಡ ತಮ್ಮ ಪತಿ ಮಹೇಶರನ್ನು ಅಟ್ಟಾಡಿಸಿ ಹೊಡೆದಿದ್ದಾರೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಇದು ಕಂಡುಬಂದಿದೆ ಎಂದು ಮೃತಪಟ್ಟ ಮಹೇಶ್‌ರ ಪತ್ನಿ ನಾಗವೇಣಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.