500 ಕೋಟಿ ದಾಟಿದ ‘ಶಕ್ತಿ’ ಪ್ರಯಾಣ: ಸಂಭ್ರಮ

| N/A | Published : Jul 15 2025, 01:45 AM IST / Updated: Jul 15 2025, 08:41 AM IST

ಸಾರಾಂಶ

 ಶಕ್ತಿ ಯೋಜನೆಯಡಿ ಸರ್ಕಾರಿ   ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಿದ ಮಹಿಳೆಯರ ಸಂಖ್ಯೆ 500 ಕೋಟಿ ಪೂರ್ಣಗೊಂಡ ಹಿನ್ನೆಲೆ  ಮುಖ್ಯಮಂತ್ರಿ ಸಿದ್ದರಾಮಯ್ಯ   ಸಾಂಕೇತಿಕವಾಗಿ ಬಿಎಂಟಿಸಿ ಬಸ್‌ ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್‌ ವಿತರಿಸುವ ಜತೆಗೆ ಗೌರವಿಸಿ ಸಿಹಿ, ಹಂಚುವ ಮೂಲಕ ವಿಶಿಷ್ಟವಾಗಿ ಸಂಭ್ರಮಿಸಿದರು.

 ಬೆಂಗಳೂರು :  ರಾಜ್ಯದ ಸರ್ಕಾರದ ಮೊದಲ ಗ್ಯಾರಂಟಿ ‘ಶಕ್ತಿ’ ಯೋಜನೆಯಡಿ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಿದ ಮಹಿಳೆಯರ ಸಂಖ್ಯೆ 500 ಕೋಟಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂಕೇತಿಕವಾಗಿ ಬಿಎಂಟಿಸಿ ಬಸ್‌ ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್‌ ವಿತರಿಸುವ ಜತೆಗೆ ಗೌರವಿಸಿ ಸಿಹಿ, ಹಂಚುವ ಮೂಲಕ ವಿಶಿಷ್ಟವಾಗಿ ಸಂಭ್ರಮಿಸಿದರು.

ಶಕ್ತಿ ಯೋಜನೆ ಅಡಿ 500 ಕೋಟಿ ಉಚಿತ ಪ್ರಯಾಣ ಪೂರ್ಣಗೊಂಡ ಸಂಭ್ರಮವನ್ನು ರಾಜ್ಯಾದ್ಯಂತ ಸಹ ಆಚರಿಸಲಾಯಿತು. ಜಿಲ್ಲೆ ಮತ್ತು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಮತ್ತು ಆಯಾ ಸಾರಿಗೆ ನಿಗಮಗಳ ಅಧಿಕಾರಿಗಳು ಬಸ್‌ಗೆ ಪೂಜೆ ಸಲ್ಲಿಸಿ, ಪ್ರಯಾಣಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ನಿರ್ವಾಹಕರಾದ ಸಿದ್ದರಾಮಯ್ಯ:

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ಬಳಿ ಶಾಂತಿನಗರ-ಮೆಜೆಸ್ಟಿಕ್‌-ಯಲಹಂಕ ಮಾರ್ಗದಲ್ಲಿ ಸಂಚರಿಸುವ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿರ್ವಾಹಕರ ರೀತಿ ಪಿಂಕ್‌ ಟಿಕೆಟ್‌ ವಿತರಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೂಡ ಪಿಂಕ್‌ ಟಿಕೆಟ್‌ ನೀಡಿದರು. ಇದೇ ವೇಳೆ ಬಸ್‌ನಲ್ಲಿದ್ದ 30 ಮಹಿಳಾ ಪ್ರಯಾಣಿಕರಿಗೆ ಇಳಕಲ್‌ ಸೀರೆ, ಶಾಲು ಹೊದಿಸಿ, ಸಿಹಿ, ಗುಲಾಬಿ ಹೂ ನೀಡಿ ಗೌರವಿಸಲಾಯಿತು.

ಸಿಎಂ-ಡಿಸಿಎಂಗೆ ಖಡಕ್‌ ರೊಟ್ಟಿ ಉಡುಗೊರೆ:

ವಿಜಯನಗರದ ಒಡಲ ಧ್ವನಿ ಸ್ತ್ರೀ ಸಂಘ ಶಕ್ತಿ ಯೋಜನೆ ಜಾರಿ ನಂತರ ಸಾವಯವ ರೊಟ್ಟಿ, ಶೇಂಗಾ ಹೋಳಿಗೆ ತಯಾರಿಸಿ ಬೆಂಗಳೂರಿಗೆ ತಂದು ಮಾರಾಟ ಮಾಡಿ ಲಕ್ಷಾಂತರ ರು. ವಹಿವಾಟು ನಡೆಸಿದೆ. ಈ ಯಶಸ್ಸಿಗಾಗಿ ಸಂಘದ ಸದಸ್ಯರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ರಾಮಲಿಂಗಾರೆಡ್ಡಿ ಅವರಿಗೆ ಸಾವಯವ ಖಡಕ್‌ ರೊಟ್ಟಿ, ಶೇಂಗಾ ಹೋಳಿಗೆಗಳನ್ನು ನೀಡಿ ಗೌರವ ಸಲ್ಲಿಸಿದರು.

ಶಕ್ತಿ ಯೋಜನೆ ದೇಶಕ್ಕೆ ಮಾದರಿ-ಸಿದ್ದು:

ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ 500 ಕೋಟಿ ಉಚಿತ ಪ್ರಯಾಣ ಪೂರ್ಣಗೊಂಡಿದ್ದು, ಇದು ಶಕ್ತಿ ಯೋಜನೆಯ ಯಶಸ್ಸಿಗೆ ಸಾಕ್ಷಿ. ಅದರ ಭಾಗವಾಗಿ ಮಹಿಳಾ ಪ್ರಯಾಣಿಕರಿಗೆ ನಾನೇ ಟಿಕೆಟ್‌ ವಿತರಿಸಿದ್ದೇನೆ. ಈ ಯೋಜನೆ ದೇಶಕ್ಕೆ ಮಾದರಿಯಾಗಿದೆ ಎಂದರು.

ಡಿ.ಕೆ.ಶಿವಕುಮಾರ್‌ ಮಾತನಾಡಿ, ಗ್ಯಾರಂಟಿ ಯೋಜನೆಗಳು ಜನರ ಜೀವನ ಬದಲಿಸುತ್ತಿದೆ. ಯಾವುದೇ ಕಾರಣಕ್ಕೂ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಎಲ್ಲಿಯವರೆಗೆ ದೇವರು ಶಕ್ತಿ ಮತ್ತು ಜನ ಅಧಿಕಾರ ನೀಡುತ್ತಾರೋ ಅಲ್ಲಿಯವರೆಗೆ ಯೋಜನೆಗಳು ಮುಂದುವರಿಯುತ್ತವೆ. ಗ್ಯಾರಂಟಿಗಳಷ್ಟೇ ಅಲ್ಲದೆ ಕಾಂಗ್ರೆಸ್ ಹಿಂದಿನಿಂದಲೂ ದೇಶಕ್ಕೆ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ನರೇಗಾ, ಪಿಂಚಣಿ ಯೋಜನೆಗಳೂ ಅದರಲ್ಲಿ ಸೇರಿವೆ. ಬಿಜೆಪಿ ಸೇರಿ ಯಾರೂ ಆ ಯೋಜನೆಗಳನ್ನು ನಿಲ್ಲಿಸಲಾಗದು. ಯಾರು ಎಷ್ಟೇ ಟೀಕಿಸಿದರೂ ನಮ್ಮ ಯೋಜನೆಗಳು ನಿಲ್ಲುವುದಿಲ್ಲ ಎಂದು ತಿಳಿಸಿದರು.

ಶಕ್ತಿ ಯೋಜನೆ ಜಾರಿ

ನಂತರ ಬದಲಾವಣೆ

ಶಕ್ತಿ ಯೋಜನೆ ಜಾರಿಗೂ ಮುನ್ನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಬಸ್‌ಗಳಲ್ಲಿ ಪ್ರತಿದಿನ ಸರಾಸರಿ 85.84 ಲಕ್ಷ ಜನ ಪ್ರಯಾಣಿಸುತ್ತಿದ್ದರು. ಇದೀಗ ಸರಾಸರಿ 1.17 ಕೋಟಿ ಜನ ಪ್ರಯಾಣಿಸುತ್ತಿದ್ದಾರೆ. 21,164 ಅನುಸೂಚಿ (ಟ್ರಿಪ್‌)ಗಳಿಂದ 23,635ಕ್ಕೆ ಹೆಚ್ಚಳವಾಗಿದೆ. ಕಳೆದೆರಡು ವರ್ಷಗಳಲ್ಲಿ 5 ಸಾವಿರ ಹೊಸ ಬಸ್‌ಗಳು ಸೇರ್ಪಡೆಯಾಗಿವೆ. ಅದರಂತೆ ಶಕ್ತಿ ಪೂರ್ವ 23,948 ಬಸ್‌ಗಳಿದ್ದವು. ಇದೀಗ 26,130ಕ್ಕೆ ಹೆಚ್ಚಳವಾಗಿವೆ ಹಾಗೂ 2,828 ಹಳೇ ಬಸ್‌ಗಳನ್ನು ಬದಲಿಸಲಾಗಿದೆ.

Read more Articles on