ಶಕ್ತಿ ಯೋಜನೆ: ಹಳಿಯಾಳದಲ್ಲಿ 2.60 ಕೋಟಿ ಪ್ರಯಾಣ

| Published : Jul 15 2025, 01:07 AM IST

ಸಾರಾಂಶ

ಹಳಿಯಾಳ ಪಟ್ಟಣದ ನೂತನ ಸಾರಿಗೆ ನಿಲ್ದಾಣದಲ್ಲಿ ಸೋಮವಾರ ನಡೆದ ಶಕ್ತಿ ಯೋಜನೆ ಸಂಭ್ರಮಾಚರಣೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ ಚಾಲನೆ ನೀಡಿದರು.

ಹಳಿಯಾಳ: ಶಕ್ತಿ ಯೋಜನೆಯಡಿ ಪ್ರಯಾಣ ಮಾಡಿದ ಮಹಿಳೆಯರ ಸಂಖ್ಯೆ 500 ಕೋಟಿ ತಲುಪಿದ ಹಿನ್ನೆಲೆಯಲ್ಲಿ ಹಳಿಯಾಳದಲ್ಲಿಯೂ ಬ್ಲಾಕ್ ಕಾಂಗ್ರೆಸ್ ಹಾಗೂ ತಾಲೂಕು ಗ್ಯಾರಂಟಿ ಸಮಿತಿಯ ವತಿಯಿಂದ ಸಂಭ್ರಮಾಚರಣೆ ನಡೆಸಿ, ಸಿಹಿ ವಿತರಿಸಲಾಯಿತು.

ಪಟ್ಟಣದ ನೂತನ ಸಾರಿಗೆ ನಿಲ್ದಾಣದಲ್ಲಿ ಸೋಮವಾರ ನಡೆದ ಶಕ್ತಿ ಯೋಜನೆ ಸಂಭ್ರಮಾಚರಣೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ದಿಸೆಯಲ್ಲಿ ಘೋಷಿಸಿದ ಶಕ್ತಿ ಯೋಜನೆ ಯಶಸ್ವಿಯಾಗಿದೆ. ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಈ ಯೋಜನೆ ಆರಂಭವಾದ ದಿನದಿಂದ ಇಂದಿನ ವರೆಗೆ 1,63,97,842 ಮಹಿಳಾ ಪ್ರಯಾಣಿಕರು ಯೋಜನೆಯ ಲಾಭ ಪಡೆದಿದ್ದು, ₹48,64,22,862 ಪಯಣದ ವೆಚ್ಚವಾಗಿದೆ. ಇನ್ನೂ ದಾಂಡೇಲಿ ಮತ್ತು ಜೋಯಿಡಾ ತಾಲೂಕಿನಲ್ಲಿ 96,55,266 ಮಹಿಳೆಯರು ಶಕ್ತಿ ಯೋಜನೆಯ ಲಾಭ ಪಡೆದಿದ್ದು, ಅವರ ಪಯಣದ ವೆಚ್ಚ ₹34,93,13,343 ಆಗಿದೆ. ಹೀಗೆ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಈ ವರೆಗೆ ಒಟ್ಟು 2,60,53,108 ಮಹಿಳಾ ಪ್ರಯಾಣಿಕರು ಪಯಣಿಸಿದ್ದು, ಅವರ ಟಿಕೇಟ್ ವೆಚ್ಚ ₹83,57,36,205ಗಳಾಗಿವೆ ಎಂದರು.

ಕಾಂಗ್ರೆಸ್ ವಕ್ತಾರ ಉಮೇಶ ಬೊಳಶೆಟ್ಟಿ ಮಾತನಾಡಿ, ಮಹಿಳಾ ಸಬಲೀಕರಣ ಮಹತ್ವಾಕಾಂಕ್ಷೆಯೊಂದಿಗೆ ಆರಂಭಿಸಿದ ಶಕ್ತಿ ಯೋಜನೆ ಯಶಸ್ವಿಯಾಗಿದೆ. ಈ ಯೋಜನೆಯ ಲಾಭ ಪಡೆದ ಹೆಣ್ಣುಮಕ್ಕಳ ಸಂಖ್ಯೆ 500 ಕೋಟಿ ಗಡಿ ದಾಟಿ ದಾಖಲೆ ಮಾಡಿದೆ ಎಂದರು.

ಬಸ್ ಚಾಲಕ ಹಾಗೂ ನಿರ್ವಾಹಕರನ್ನು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕುಮಾರ ಜಾವಳೇಕರ ಸನ್ಮಾನಿಸಿದರು. ಪುರಸಭಾ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಸ್ಥಾಯಿ ಸಮಿತಿ ಚೇರ್‌ಮನ್‌ ಅನಿಲ ಚವ್ಹಾಣ ಹಾಗೂ ಗ್ಯಾರಂಟಿ ಸಮಿತಿ ಸದಸ್ಯರು, ತಾಪಂ ಇಒ ವಿಲಾಸರಾಜ್, ಹಳಿಯಾಳ ಸಾರಿಗೆ ಘಟಕದ ವ್ಯವಸ್ಥಾಪಕ ಆರ್.ಬಿ. ರೋಗಿ ಹಾಗೂ ಜಿ-ಪ್ಲಸ್ ಬಡಾವಣೆ ನಿವಾಸಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿದ್ದರು.