ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ತುಮಕೂರು ವಿಭಾಗದಲ್ಲಿ ಪ್ರತಿದಿನ 1.70 ಲಕ್ಷಕ್ಕೂ ಅಧಿಕ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಜೂನ್ 11 ರಿಂದ ಇಲ್ಲಿಯವರೆಗೆ 367.56 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.ಜಿಲ್ಲಾಡಳಿತದ ವತಿಯಿಂದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಭಾರತ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಸರ್ಕಾರವು ಮೂಲಭೂತ ಸೌಕರ್ಯಗಳಲ್ಲಿ ಅತ್ಯಂತ ಪ್ರಮುಖವಾದ ವಿದ್ಯುತ್‌ಚ್ಛಕ್ತಿ ಸೌಲಭ್ಯವನ್ನು ಗರಿಷ್ಠ 200 ಯೂನಿಟ್‌ವರೆಗೆ ಉಚಿತವಾಗಿ ಅರ್ಹ ಗೃಹ ಬಳಕೆಯ ಗ್ರಾಹಕರಿಗೆ ಜಾರಿಗೊಳಿಸಿದ್ದು, ಕಳೆದ ಸಾಲಿನ ಜೂನ್ 18 ರಿಂದ ನೋಂದಣಿ ಕಾರ್ಯವನ್ನು ಚಾಲನೆಗೊಳಿಸಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 7,78,546 ಗೃಹ ಬಳಕೆ ಗ್ರಾಹಕರಿದ್ದು, ಈ ಪೈಕಿ 6,80,392 ಗೃಹ ಬಳಕೆ ಗ್ರಾಹಕರು ಯೋಜನೆಯ ಲಾಭವನ್ನು ಪಡೆದಿರುತ್ತಾರೆ ಎಂದರು.ಸರ್ಕಾರದ ಮಹತ್ತರ ಕಾರ್ಯಕ್ರಮಗಳಲ್ಲಿ ಒಂದಾದ ‘ಜನತಾ ದರ್ಶನ’ ಕಾರ್ಯಕ್ರಮವನ್ನು ಸನ್ಮಾನ್ಯ ಮುಖ್ಯಮಂತ್ರಿಗಳ ಸೂಚನೆಯಂತೆ ತುಮಕೂರು ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಸೆಪ್ಟೆಂಬರ್ 25 ರಂದು ಚಾಲನೆ ನೀಡಲಾಯಿತು. ಈ ಮೂಲಕ ಜನರ ಸಮಸ್ಯೆಗಳಿಗೆ ನೇರವಾಗಿ ಪರಿಹಾರ ನೀಡಲು ಸರ್ಕಾರ ಕಂಕಣಬದ್ದವಾಗಿದ್ದು, ಈ ಕಾರ್ಯಕ್ರಮಗಳಿಂದ ಜನರಿಗೆ ಸಾಕಷ್ಟು ಅನುಕೂಲವಾಗಿರುತ್ತದೆ. ಜನತಾ ದರ್ಶನ ಕಾರ್ಯಕ್ರಮಗಳಲ್ಲಿ ೨೭೭೫ ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಗಿದ್ದು, ಅರ್ಜಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ 10 ತಾಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರವು ಘೋಷಿಸಿದ್ದು, ಬೆಳೆಹಾನಿ ಪರಿಹಾರದ ಮೊದಲನೇ ಕಂತಾಗಿ ಅರ್ಹ ಪ್ರತಿ ರೈತರಿಗೆ ಗರಿಷ್ಟ 2 ಸಾವಿರ ರು.ಗಳನ್ನು ರಾಜ್ಯ ಮಟ್ಟದಲ್ಲಿ ನೇರವಾಗಿ ರೈತರಿಗೆ ಪಾವತಿಸಲು ಸರ್ಕಾರವು ಆದೇಶಿಸಿದೆ. ಬರಪರಿಸ್ಥಿತಿ ನಿಭಾಯಿಸಲು ಕುಡಿಯುವ ನೀರು ಮತ್ತು ಜಾನುವಾರುಗಳ ಮೇವು ಪೂರೈಕೆಗೆ ಜಿಲ್ಲೆಗೆ 15 ಕೋಟಿ ರು. ಅನುದಾನ ಬಿಡುಗಡೆಯಾಗಿರುತ್ತದೆ. ಈ ಪೈಕಿ 1,7 ೫ಕೋಟಿ ರು.ಗಳ ಅನುದಾನವನ್ನು ತುರ್ತು ಸಂದರ್ಭದಲ್ಲಿ ಅಗತ್ಯ ಪರಿಹಾರ ಕೈಗೊಳ್ಳಲು ತಾಲೂಕುಗಳಿಗೆ ಬಿಡುಗಡೆ ಮಾಡಲಾಗಿದೆ ಎಂದರು.ವಸಂತನರಸಾಪುರ 4ನೇ ಹಂತದ ಕೈಗಾರಿಕಾ ಪ್ರದೇಶ ರಚನೆಗೆ ತೀರ್ಮಾನಿಸಲಾಗಿದ್ದು, ಈ ಕೈಗಾರಿಕಾ ಪ್ರದೇಶವನ್ನು ಕೈಗಾರಿಕಾ ಸ್ನೇಹಿ ಪ್ರದೇಶವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ‘ತುಮಕೂರು ಇಂಡಸ್ಟ್ರಿಯಲ್ ಟೌನ್‌ಶಿಪ್ ಲಿಮಿಟೆಡ್’ ಶಿರೋನಾಮೆಯಡಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಮಧುಗಿರಿ ಪ್ಲೂಲ್ಲೂಕಿನಲ್ಲಿ 315 ಎಕರೆ ಕೈಗಾರಿಕೆಗೆ ಯೋಗ್ಯವಾದ ಜಮೀನನ್ನು ಸ್ವಾಧೀನಪಡಿಸಿಳ್ಳಲಾಗಿದ್ದು, ಸದ್ಯದಲ್ಲೇ ಕೈಗಾರಿಕೆ ಘಟಕ ಸ್ಥಾಪನೆಗೆ ಯೋಗ್ಯವಾದ ಕೈಗಾರಿಕಾ ಬಡಾವಣೆ ರಚಿಸಲು ಕ್ರಮ ವಹಿಸಲಾಗಿದೆ ಎಂದರು.
ತುಮಕೂರು ಜಿಲ್ಲೆಗೆ ರಾಜ್ಯ ಮಟ್ಟದ ಏಕ ಗವಾಕ್ಷಿ ಸಮಿತಿ ಸಭೆಯಲ್ಲಿ ಒಟ್ಟು 24 ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳು ಬಂಡವಾಳ ಹೂಡಿಕೆ ಮಾಡಿ ಕೈಗಾರಿಕೆ ಆರಂಭಿಸಲು ಅನುಮೋದನೆಗೊಂಡಿದ್ದು, ಈ ಎಲ್ಲಾ ಘಟಕಗಳಿಂದ 551.42 ಕೋಟಿ ರು. ಬಂಡವಾಳ ನಿರೀಕ್ಷಿಸಲಾಗಿದ್ದು, 1877 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಾಗೂ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಮಹತ್ವಾಕಾಂಕ್ಷಿ ಯೋಜನೆಯಾದ ‘ಮಧುಗಿರಿ ಏಕಶಿಲಾ ಬೆಟ್ಟಕ್ಕೆ ಕೇಬಲ್ ಕಾರ್’ ಯೋಜನೆಯನ್ನು ಜಾರಿಗೆ ತರಲು ಕ್ರಮವಹಿಸಲಾಗುತ್ತಿದ್ದು, ಜಿಲ್ಲೆಯ 26 ಪ್ರವಾಸಿ ತಾಣಗಳಲ್ಲಿ ಅಂದಾಜು ಮೊತ್ತ 3650 ಲಕ್ಷಗಳಲ್ಲಿ ಯಾತ್ರಿ ನಿವಾಸ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಪಶುಪಾಲಕರು ಮತ್ತು ರೈತರಿಗೆ ಪಶುಪಾಲನಾ ಇಲಾಖೆ ವತಿಯಿಂದ ಅನೇಕ ಸೌಲಭ್ಯಗಳನ್ನು ಜಾರಿಗೊಳಿಸಲಾಗಿದೆ. ಜಿಲ್ಲೆಗೆ 3.04 ಕೋಟಿ ರು. ವೆಚ್ಚದಲ್ಲಿ 1,08,401 ವಿವಿಧ ತಳಿಯ ಮೇವಿನ ಬೀಜದ ಮಿನಿ ಕಿಟ್‌ಗಳು ಸರಬರಾಜಾಗಿದ್ದು, ನೀರಾವರಿ ಸೌಲಭ್ಯ ಹೊಂದಿರುವ ರೈತರಿಗೆ ಉಚಿತವಾಗಿ ವಿತರಿಸಿ ಮೇವು ಉತ್ಪಾದನೆ ಹೆಚ್ಚಿಸಲು ಕ್ರಮವಹಿಸಲಾಗಿದೆ ಎಂದರು.ತುಮಕೂರು ಶೈಕ್ಷಣಿಕ ನಗರಿಯಾಗಿದ್ದು ಇಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ಶೈಕ್ಷಣಿಕ ಸಂಸ್ಥೆಗಳು ಸೇವೆ ಸಲ್ಲಿಸುತ್ತಿವೆ. ಅದರಂತೆ ಜಿಲ್ಲೆಯ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಸರ್ಕಾರ ಬದ್ಧವಾಗಿದ್ದು, ಸರ್ಕಾರದ ವತಿಯಿಂದ ಸರ್ಕಾರಿ ಶಾಲಾ ಕಾಲೇಜುಗಳನ್ನು ನಿರ್ಮಾಣ ಮತ್ತು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ವಿವೇಕಾ ಶಾಲಾ ಕೊಠಡಿಗಳ ನಿರ್ಮಾಣ, ಸರ್ಕಾರಿ ಶಾಲೆಗಳ ತುರ್ತು ಕೊಠಡಿಗಳ ದುರಸ್ತಿ, ಅಂಗನವಾಡಿ ಕಟ್ಟಡ ನಿರ್ಮಾಣ ಯೋಜನೆಗಳು ಪ್ರಗತಿಯಲ್ಲಿವೆ ಎಂದರು.
ಜಿಲ್ಲೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನ, ಸಮುದಾಯ ಭವನ ಸೇರಿದಂತೆ ಒಟ್ಟು 47 ಭವನಗಳಿಗೆ 830 ಲಕ್ಷಗಳಿಗೆ ಮಂಜೂರಾತಿ ನೀಡಿ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಪಾವಗಡ, ಮಧುಗಿರಿ, ತುಮಕೂರು ತಾಲೂಕುಗಳಲ್ಲಿ ಒಟ್ಟು 19.50 ಕೋಟಿ ರು. ಅನುದಾನದಲ್ಲಿ 3 ಹೊಸ ವಿದ್ಯಾರ್ಥಿ ನಿಲಯ ಕಟ್ಟಡ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿರುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಶಾಸಕರಾದ ಜ್ಯೋತಿ ಗಣೇಶ್, ಸುರೇಶ್ ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ, ಮಹಾನಗರ ಪಾಲಿಕೆ ಆಯುಕ್ತರಾದ ಅಶ್ವಿಜ ಬಿ.ವಿ, ಮಹಾನಗರ ಪಾಲಿಕೆ ಮಹಾಪೌರರಾದ ಪ್ರಭಾವತಿ..ಎಂ. ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.BOX
29ಕ್ಕೆ ಸಿಎಂ ತುಮಕೂರಿಗೆ ಭೇಟಿಕಾರ್ಯಕ್ರಮದ ನಂತರ ಜಿಲ್ಲಾ ಕ್ರೀಡಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವ ಡಾ. ಜಿ.ಪರಮೇಶ್ವರ ಅವರು ಜನವರಿ ೨೯ಕ್ಕೆ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಅಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನಡೆಯಲಿದೆ. 697 ಕೋಟಿ ರು. ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಮತ್ತು ಉದ್ಘಾಟನೆ ನಡೆಯಲಿದೆ. ವಿಶ್ವವಿದ್ಯಾಲಯದ ಮೊದಲ ಹಂತದ ಕಟ್ಟಡವನ್ನು ಉದ್ಘಾಟಿಸಲಾಗುವುದು ಎಂದು ತಿಳಿಸಿದರು..