ಹಳ್ಳಿ-ನಗರಕ್ಕೆ ಸಂಪರ್ಕ ಸೇತುವೆ

| Published : Jul 15 2025, 01:09 AM IST

ಸಾರಾಂಶ

ಶಕ್ತಿ ಯೋಜನೆಯು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು ಇದರಿಂದ ಮಹಿಳೆಯರು ಸುಕ್ಷೇತ್ರ ನೋಡುವುದಕ್ಕೆ ಸಹಕಾರಿಯಾಗಿದೆ ಹಾಗೂ ಹಳ್ಳಿಗಳಿಂದ ನಗರಗಳಿಗೆ ಬರುವ ಕೂಲಿಕಾರ್ಮಿಕರಿಗೆ ಅನೂಕೂಲಕರವಾಗಿದೆ.

ಕುಷ್ಟಗಿ:

ಶಕ್ತಿ ಯೋಜನೆ ಹಳ್ಳಿ ಮತ್ತು ನಗರಗಳ ಪ್ರಯಾಣಕ್ಕಾಗಿ ಸಂಪರ್ಕ ಸೇತುವೆಯಂತೆ ಕೆಲಸ ಮಾಡುತ್ತಿದೆ ಎಂದು ಕಾಡಾ ನಿಗಮ ಅಧ್ಯಕ್ಷ ಹಸನಸಾಬ್‌ ದೋಟಿಹಾಳ ಹೇಳಿದರು.

ಪಟ್ಟಣದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿರುವ ಶಕ್ತಿ ಯೋಜನೆಯಡಿ 500 ಕೋಟಿ ಜನ ಮಹಿಳಾ ಪ್ರಯಾಣಿಕರ ಸಂಖ್ಯೆ ದಾಟಿದ ಹಿನ್ನೆಲೆಯಲ್ಲಿ ಆಯೋಜಿಸಿದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಕ್ತಿ ಯೋಜನೆಯು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು ಇದರಿಂದ ಮಹಿಳೆಯರು ಸುಕ್ಷೇತ್ರ ನೋಡುವುದಕ್ಕೆ ಸಹಕಾರಿಯಾಗಿದೆ ಹಾಗೂ ಹಳ್ಳಿಗಳಿಂದ ನಗರಗಳಿಗೆ ಬರುವ ಕೂಲಿಕಾರ್ಮಿಕರಿಗೆ ಅನೂಕೂಲಕರವಾಗಿದೆ. ವಿದ್ಯಾರ್ಥಿನಿಯರಿಗೂ ಬಸ್‌ಪಾಸ್‌ಗೆ ವ್ಯಯ ಮಾಡುವ ಸಾವಿರಾರು ಹಣ ಉಳಿತಾಯವಾಗಿದೆ ಎಂದರು.

ತಾಪಂ ಇಒ ಪಂಪಾಪತಿ ಹಿರೇಮಠ ಮಾತನಾಡಿ, ತಾಲೂಕಿನಲ್ಲಿ 1.90 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು ₹ 64 ಕೋಟಿ ಮೊತ್ತವಾಗಿದೆ ಎಂದರು.

ದಿಶಾ ಸಮಿತಿ ಸದಸ್ಯ ದೊಡ್ಡಬಸವನಗೌಡ ಪಾಟೀಲ ಬಯ್ಯಾಪೂರ ಮಾತನಾಡಿ, ಶಕ್ತಿ ಯೋಜನೆಯಿಂದ ಶಿಕ್ಷಣ ಮತ್ತು ಇತರ ಅಗತ್ಯ ಕೆಲಸಗಳಿಗೆ ಉಚಿತವಾಗಿ ಪ್ರಯಾಣಿಸಲು ಸಾಧ್ಯವಾಗಿದೆ ಎಂದರು.

ಸಿಹಿ ಹಂಚಿ ಸಂಭ್ರಮ:

ಬಸ್‌ಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬಸ್‌ನಲ್ಲಿರುವ ಪ್ರಯಾಣಿಕರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು. ಈ ವೇಳೆ ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಫಾರೂಖ್ ಡಾಲಾಯತ್, ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ಅಮರೇಶ ಗಾಂಜಿ, ಡಿಪೋ ಮ್ಯಾನೇಜರ್‌ ಸುಂದರಗೌಡ ಪಾಟೀಲ, ಶಾರದಾ ಕಟ್ಟಿಮನಿ, ಶಕುಂತಲಾ ಹಿರೇಮಠ, ಹುಸೇನ ಕಾಯಿಗಡ್ಡಿ, ಶರಣು ಮಾಲಿಪಾಟೀಲ, ಉಮಾದೇವಿ ಪಾಟೀಲ, ಶೋಭಾ ಪುರ್ತಗೇರಿ, ಬಸವರಾಜ ಹೊರಪ್ಯಾಟಿ, ಹನುಮೇಶ ಭೋವಿ ಇದ್ದರು.